ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್‌ಗೆ 18 ಕೋಟಿ ರೂ.ಗೆ ಹರಾಜು ; ಈ ಬೆಲೆಗೆ ನಾನು ಅರ್ಹ: ಚಾಹಲ್

ಚಾಹಲ್ | PC : IPL
ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಹರಾಜಿನಲ್ಲಿ 18 ಕೋಟಿ ರೂ.ಗೆ ಬಿಕರಿಯಾಗಿರುವ ಯುಝ್ವೇಂದ್ರ ಚಾಹಲ್, 18ನೇ ಆವೃತ್ತಿಯ ಟಿ20 ಲೀಗ್‌ನ ದುಬಾರಿ ಆಟಗಾರರ ಪೈಕಿ ಒಬ್ಬರು.
ಅವರನ್ನು ರಾಜಸ್ಥಾನ ರಾಯಲ್ಸ್ ಬಿಡುಗಡೆಗೊಳಿಸಿದ ಬಳಿಕ, ಪಂಜಾಬ್ ಕಿಂಗ್ಸ್ ಅಗಾಧ ಮೊತ್ತಕ್ಕೆ ಖರೀದಿಸಿತು. ಟೀಮ್ ಇಂಡಿಯಾದ ಯಾವುದೇ ಮೂರು ಮಾದರಿಯ ಕ್ರಿಕೆಟ್ ತಂಡದಲ್ಲಿ ಚಾಹಲ್ ಈಗ ಇಲ್ಲ. ಹಾಗಾಗಿ, ಅವರನ್ನು ಖರೀದಿಸಲು ಪಂಜಾಬ್ ಕಿಂಗ್ಸ್ ಅಗಾಧ ಹಣವನ್ನು ವ್ಯಯಿಸಿದೆ ಎಂಬುದಾಗಿ ಹಲವರು ಭಾವಿಸಿದ್ದಾರೆ. ಅವರಿಗಾಗಿ ವ್ಯಯಿಸಿರುವ ಮೊತ್ತವು ಅವರ ನೈಜ ಬೆಲೆಗಿಂತ ಹೆಚ್ಚಾಗಿದೆ ಎನ್ನುವುದು ಅವರ ಅಭಿಪ್ರಾಯ. ಆದರೆ, ತನ್ನ ಹರಾಜು ಬೆಲೆಯನ್ನು ಚಾಹಲ್ ಸಮರ್ಥಿಸಿಕೊಂಡಿದ್ದಾರೆ.
ಐಪಿಎಲ್ 2025 ಹರಾಜಿನ ಕುರಿತ ತನ್ನ ಅನುಭವದ ಬಗ್ಗೆ ಮಾತನಾಡಿದ ಚಾಹಲ್, ಈ ಪ್ರಶ್ನೆಯನ್ನು ನಾನು ನನಗೇ ಕೇಳಿಕೊಂಡೆ, ಇಷ್ಟೊಂದು ಬೆಲೆಗೆ ನಾನು ಅರ್ಹನೇ ಎಂದು ಪ್ರಶ್ನಿಸಿದೆ ಎಂದರು. ಅದಕ್ಕೆ ನನಗೆ ನನ್ನೊಳಗಿನಿಂದ ಸಿಕ್ಕ ಉತ್ತರ ‘ಹೌದು’ ಎಂದಾಗಿತ್ತು ಎಂದು ಅವರು ಹೇಳಿದರು.
‘‘ಹರಾಜಿನ ಮೊದಲ ಕೆಲವು ನಿಮಿಷಗಳನ್ನು ನಾನು ತಪ್ಪಿಸಿಕೊಂಡೆ, ಯಾಕೆಂದರೆ ನಾನು ತುಂಬಾ ಆತಂಕಿತನಾಗಿದ್ದೆ. ಹರಾಜು ಹಾಗಿತ್ತು. ನಾವು ಯಾವ ತಂಡಕ್ಕೆ ಮತ್ತು ಎಷ್ಟು ಬೆಲೆಗೆ ಹೋಗುತ್ತೇವೆ ಎನ್ನುವುದು ಎನ್ನುವುದು ನಮಗೆ ಗೊತ್ತಿಲ್ಲ. ತುಂಬಾ ಯೋಚನೆಗಳು ನಮ್ಮ ಮನಸ್ಸಿಗೆ ಬರುತ್ತವೆ. ನನ್ನ ಊರಿನ ಸಮೀಪದ ತಂಡಕ್ಕೆ ಹೋಗುತ್ತಿರುವ ಬಗ್ಗೆ ಸಂತೋಷವಾಗಿದೆ. ಹರಾಜು ಬೆಲೆಯ ಬಗ್ಗೆ ನನ್ನನ್ನೇ ನಾನು ಪ್ರಶ್ನಿಸಿಕೊಂಡಾಗ, ನನಗೆ ಒಳಗಿನಿಂದ ಉತ್ತರ ಬಂತು, ‘ಹೌದು, ಈ ಬೆಲೆಗೆ ನಾನು ಅರ್ಹ’’’ ಎಂದು ಅವರು ನುಡಿದರು.