ಸೌದಿ ಅರೇಬಿಯದಲ್ಲಿ 4,347 ಕೋಟಿ ರೂ. ಹೂಡಿಕೆಯಲ್ಲಿ ‘ಗ್ರ್ಯಾನ್ ಸ್ಲಾಮ್’ ಕ್ರಿಕೆಟ್?

PC : NDTV
ಮುಂಬೈ: ಸೌದಿ ಅರೇಬಿಯವು 500 ಮಿಲಿಯ ಡಾಲರ್ (ಸುಮಾರು 4,347 ಕೋಟಿ ರೂಪಾಯಿ) ಹೂಡಿಕೆಯೊಂದಿಗೆ ಟಿ20 ಕ್ರಿಕೆಟ್ ಲೀಗೊಂದನ್ನು ಆರಂಭಿಸುವ ಬಗ್ಗೆ ಯೋಚಿಸುತ್ತಿದೆ.
ಈ ಪ್ರಸ್ತಾಪಿತ 8 ತಂಡಗಳ ಲೀಗ್ ಟೆನಿಸ್ ಗ್ರ್ಯಾನ್ ಸ್ಲಾಮ್ ಮಾದರಿಯನ್ನು ಹೋಲುತ್ತದೆ ಎಂದು ವರದಿಗಳು ತಿಳಿಸಿವೆ. ಈ ವ್ಯವಸ್ಥೆಯಲ್ಲಿ ತಂಡಗಳು ಒಂದು ವರ್ಷದಲ್ಲಿ ನಾಲ್ಕು ವಿಭಿನ್ನ ಸ್ಥಳಗಳಲ್ಲಿ ಒಟ್ಟು ಸೇರುತ್ತವೆ. ಎ-ಲೀಗ್‌ನ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡ್ಯಾನಿ ಟೌನ್‌ಸೆಂಡ್ ನೇತೃತ್ವದ ಸೌದಿ ಅರೇಬಿಯದ ಎಸ್‌ಆರ್‌ಜೆ ಸ್ಪೋರ್ಟ್ಸ್ ಇನ್ವೆಸ್ಟ್‌ಮೆಂಟ್ಸ್ ಪ್ರಸ್ತಾಪಿತ ಕ್ರಿಕೆಟ್ ಲೀಗ್‌ನ ಪೋಷಕನಾಗಲಿದೆ.
ಎಸ್‌ಆರ್‌ಜೆ ಸ್ಪೋರ್ಟ್ಸ್ ಇನ್ವೆಸ್ಟ್‌ಮೆಂಟ್ಸ್ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯ ನಡುವೆ ಲೀಗ್ ಕುರಿತ ಮಾತುಕತೆಗಳು ಒಂದು ವರ್ಷದಿಂದ ನಡೆಯುತ್ತಿವೆ ಎಂದು ‘ದಿ ಏಜ್’ ವರದಿ ಮಾಡಿದೆ.
‘‘ಈ ಕಲ್ಪನೆ ಬಗ್ಗೆ ಒಂದು ವರ್ಷದಿಂದ ರಹಸ್ಯವಾಗಿ ಮಾತುಕತೆ ನಡೆಯುತ್ತಿತ್ತು. ಈ ಕಲ್ಪನೆಯ ಹಿಂದಿರುವ ಪ್ರಮುಖ ವ್ಯಕ್ತಿ ಆಸ್ಟ್ರೇಲಿಯದ ಎನ್‌ಎಸ್‌ಡಬ್ಲ್ಯು ಮತ್ತು ವಿಕ್ಟೋರಿಯ ತಂಡಗಳ ಮಾಜಿ ಆಲ್‌ರೌಂಡರ್ ನೀಲ್ ಮ್ಯಾಕ್ಸ್‌ವೆಲ್’’ ಎಂದು ವರದಿ ತಿಳಿಸಿದೆ.
ಈ ಯೋಜನೆಯ ಮುಖ್ಯ ಉದ್ದೇಶ ಕ್ರಿಕೆಟ್‌ನ ‘‘ಅತ್ಯಂತ ಜ್ವಲಂತ ಸಮಸ್ಯೆಗಳಿಗೆ’’ ಪರಿಹಾರ ಕಂಡುಕೊಳ್ಳುವುದು. ವಿಶ್ವ ಕ್ರಿಕೆಟ್‌ನ ಮೂರು ದೊಡ್ಡ ತಂಡಗಳಾದ ಭಾರತ, ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್‌ನ್ನು ಮೀರಿ ಟೆಸ್ಟ್ ಕ್ರಿಕೆಟನ್ನು ಕಾಯ್ದುಕೊಳ್ಳುವುದು ಜ್ವಲಂತ ಸಮಸ್ಯೆಗಳಲ್ಲಿ ಒಂದಾಗಿದೆ.