ಬಿಸಿಸಿಐ ವೈದ್ಯಕೀಯ ತಂಡದ ಮುಖ್ಯಸ್ಥ ರಾಜೀನಾಮೆ

PC : PTI
ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಕ್ರೀಡಾ ವಿಜ್ಞಾನ ಮತ್ತು ವೈದ್ಯಕೀಯ ತಂಡದ ಮುಖ್ಯಸ್ಥ ನಿತಿನ್ ಪಟೇಲ್ ಇತ್ತೀಚೆಗೆ ತನ್ನ ರಾಜೀನಾಮೆ ಸಲ್ಲಿಸಿದ್ದಾರೆ. ಸುಮಾರು ಮೂರು ವರ್ಷಗಳ ಕಾಲ ಅವರು ಯಶಸ್ವಿಯಾಗಿ ಸೇವೆ ಸಲ್ಲಿಸಿದ್ದಾರೆ.
ಇತ್ತೀಚೆಗೆ ಉದ್ಘಾಟನೆಗೊಂಡ ಬಿಸಿಸಿಐಯ ಸೆಂಟರ್ ಆಫ್ ಎಕ್ಸಲೆನ್ಸ್ (ಸಿಒಇ, ಮೊದಲು ಇದು ಎನ್‌ಸಿಎ ಆಗಿತ್ತು)ನಲ್ಲಿ ಮುಂದಿನ ಕೆಲವು ದಿನಗಳಲ್ಲಿ ಹಲವು ಬದಲಾವಣೆಗಳು ಸಂಭವಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಅವರ ರಾಜೀನಾಮೆಯನ್ನು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ಎನ್‌ಸಿಎಯ ಅತ್ಯಂತ ಹಿರಿಯ ಸಿಬ್ಬಂದಿ ಪೈಕಿ ಒಬ್ಬರು ಹೊರಬರಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ‘‘ಹೌದು, ಕ್ರೀಡಾ ವಿಜ್ಞಾನ ಮತ್ತು ವೈದ್ಯಕೀಯ ತಂಡದ ಮುಖ್ಯಸ್ಥ ನಿತಿನ್ ರಾಜೀನಾಮೆ ನೀಡಿದ್ದಾರೆ. ಬಿಸಿಸಿಐಯಲ್ಲಿದ್ದ ಸಮಯದಲ್ಲಿ ನಿತಿನ್ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ. ಎನ್‌ಸಿಎಯಲ್ಲಿ ಕ್ರೀಡಾ ವಿಜ್ಞಾನ ಮತ್ತು ವೈದ್ಯಕೀಯ ತಂಡದ ಸ್ಥಾಪನೆಯಲ್ಲಿ ಅವರು ಮುಖ್ಯ ಪಾತ್ರವನ್ನು ವಹಿಸಿದ್ದಾರೆ’’ ಬಿಸಿಸಿಐನ ಹಿರಿಯ ಮೂಲವೊಂದು ಪಿಟಿಐಗೆ ತಿಳಿಸಿದೆ.
‘‘ಕಳೆದ ಎರಡು ವರ್ಷಗಳಲ್ಲಿ, ಯಾವುದೇ ಗಾಯಾಳು ಆಟಗಾರ 100 ಶೇಕಡ ಚೇತರಿಸಿಕೊಂಡ ಬಳಿಕವಷ್ಟೇ ಎನ್‌ಎಸ್‌ಎಯಿಂದ ಹೊರಹೋಗಿದ್ದಾರೆ. ಇದು ಉತ್ತಮ ಬೆಳವಣಿಗೆ. ನಿತಿನ್‌ರ ಕುಟುಂಬ ವಿದೇಶದಲ್ಲಿ ನೆಲೆಸಿದೆ. ಸಿಒಇಯ ಕ್ರೀಡಾ ವಿಜ್ಞಾನ ಮತ್ತು ವೈದ್ಯಕೀಯ ವಿಭಾಗವನ್ನು ಮುನ್ನಡೆಸುವುದು ವರ್ಷದ ಎಲ್ಲಾ 365 ದಿನಗಳ ಹೊಣೆಗಾರಿಕೆಯಾಗಿದೆ’’ ಎಂದು ಮೂಲ ಹೇಳಿದೆ.
ನಿತಿನ್ ಪಟೇಲ್‌ರ ಅವಧಿಯಲ್ಲಿ ಚೇತರಿಸಿಕೊಂಡ ಪ್ರಮುಖ ಆಟಗಾರರೆಂದರೆ- ವೇಗಿ ಜಸ್‌ಪ್ರೀತ್ ಬುಮ್ರಾ, ಹಿರಿಯ ವೇಗಿ ಮುಹಮ್ಮದ್ ಶಮಿ, ಹಿರಿಯ ಬ್ಯಾಟರ್ ಕೆ.ಎಲ್. ರಾಹುಲ್ ಮತ್ತು ಪ್ರಮುಖ ಸ್ಪಿನ್ನರ್ ಕುಲದೀಪ್ ಯಾದವ್.