ಐಪಿಎಲ್-2025: ಗಾಯಗೊಂಡಿರುವ, ಲಭ್ಯವಿರದ ಪ್ರಮುಖ ಆಟಗಾರರಿವರು

Update: 2025-03-14 21:28 IST
ಐಪಿಎಲ್-2025: ಗಾಯಗೊಂಡಿರುವ, ಲಭ್ಯವಿರದ ಪ್ರಮುಖ ಆಟಗಾರರಿವರು

ಹ್ಯಾರಿ ಬ್ರೂಕ್ - Photo Credit: THE HINDU

  • whatsapp icon

ಹೊಸದಿಲ್ಲಿ: ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವು ಮಾ.22ರಂದು ಕೋಲ್ಕತಾದ ಈಡನ್ ಗಾರ್ಡನ್ಸ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸುವ ಮೂಲಕ 2025ರ ಆವೃತ್ತಿಯ ಐಪಿಎಲ್ ಟೂರ್ನಿಯು ಆರಂಭವಾಗಲಿದೆ.

ಪಂದ್ಯಾವಳಿ ಆರಂಭಕ್ಕೆ ಮೊದಲೇ ಕೆಲವು ಆಟಗಾರರು ಗಾಯ ಅಥವಾ ವೈಯಕ್ತಿಕ ಕಾರಣಗಳಿಂದಾಗಿ ಸ್ಪರ್ಧಾವಳಿಯಿಂದ ಈಗಾಗಲೇ ಹೊರ ನಡೆದಿದ್ದಾರೆ.

► ಹ್ಯಾರಿ ಬ್ರೂಕ್(ಡೆಲ್ಲಿ ಕ್ಯಾಪಿಟಲ್ಸ್): ರಾಷ್ಟ್ರೀಯ ತಂಡದ ಬದ್ದತೆಗೆ ಹೆಚ್ಚಿನ ಆದ್ಯತೆ ನೀಡಿರುವ ಇಂಗ್ಲೆಂಡ್ ಬ್ಯಾಟರ್ ಹ್ಯಾರಿ ಬ್ರೂಕ್ 2025ರ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹೊರಗುಳಿದಿದ್ದಾರೆ. ಗಾಯದ ಸಮಸ್ಯೆಯನ್ನು ಹೊರತುಪಡಿಸಿ ಬೇರ್ಯಾವುದೇ ಕಾರಣಗಳಿಗೆ ಅಲಭ್ಯರಾಗುವ ಆಟಗಾರನನ್ನು ಎರಡು ವರ್ಷಗಳ ಕಾಲ ಡಿಬಾರ್ಗೊಳಿಸುವ ಲೀಗ್ ನ ಆಡಳಿತ ಮಂಡಳಿಯ ನಿಯಮದ ಪ್ರಕಾರ ಬ್ರೂಕ್ ಗೆ ಎರಡು ವರ್ಷಗಳ ಕಾಲ ಟೂರ್ನಿಯಿಂದ ನಿಷೇಧಿಸಲಾಗಿದೆ. 2024ರ ಐಪಿಎಲ್ ನಿಂದಲೂ ಹೊರಗುಳಿದಿದ್ದ ಮಧ್ಯಮ ಸರದಿಯ ಬ್ಯಾಟರ್ನನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ 6.25 ಕೋಟಿ ರೂ.ಗೆ ತನ್ನ ತೆಕ್ಕೆಗೆ ಸೇರಿಸಿಕೊಂಡಿತ್ತು. ಬ್ರೂಕ್ ಬದಲಿ ಆಟಗಾರನನ್ನು ಇನ್ನೂ ಆಯ್ಕೆ ಮಾಡಲಾಗಿಲ್ಲ.

► ಬ್ರೈಡನ್ ಕಾರ್ಸ್(ಸನ್ರೈಸರ್ಸ್ ಹೈದರಾಬಾದ್): ಆಸ್ಟ್ರೇಲಿಯದ ವಿರುದ್ಧ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯದ ವೇಳೆ ಕಾಲ್ಬೆರಳಿನ ಗಾಯಕ್ಕೆ ಒಳಗಾಗಿರುವ ಇಂಗ್ಲೆಂಡ್ ಆಟಗಾರ ಬ್ರೈಡನ್ ಕಾರ್ಸ್ ಅವರು ಮುಂಬರುವ ಐಪಿಎಲ್ ಋತುವಿನಿಂದ ಹೊರಗುಳಿದಿದ್ದಾರೆ. ಕಳೆದ ವರ್ಷದ ಆಟಗಾರರ ಹರಾಜಿನ ವೇಳೆ ಹೈದರಾಬಾದ್ ತಂಡವು ಆಲ್ರೌಂಡರ್ ಕಾರ್ಸ್ರನ್ನು 1 ಕೋಟಿ ರೂ.ಗೆ ತನ್ನ ತೆಕ್ಕೆಗೆ ಸೇರಿಸಿಕೊಂಡಿತ್ತು. 29ರ ಹರೆಯದ ಕಾರ್ಸ್ ಬದಲಿಗೆ ದಕ್ಷಿಣ ಆಫ್ರಿಕಾದ ವಿಯಾನ್ ಮುಲ್ದರ್ 75 ಲಕ್ಷ ರೂ.ಗೆ ಹೈದರಾಬಾದ್ ತಂಡ ಸೇರಲು ಸಜ್ಜಾಗಿದ್ದಾರೆ.

► ಲಿಝಾದ್ ವಿಲಿಯಮ್ಸ್(ಮುಂಬೈ ಇಂಡಿಯನ್ಸ್): ಗಾಯದ ಸಮಸ್ಯೆಯ ಕಾರಣಕ್ಕೆ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ವಿಲಿಯಮ್ಸ್ ಮುಂಬರುವ ಐಪಿಎಲ್ಗೆ ಲಭ್ಯ ಇರುವುದಿಲ್ಲ. ಹರಾಜಿನ ವೇಳೆ ಮುಂಬೈ ತಂಡವು ಅವರನ್ನು 75 ಲಕ್ಷ ರೂ.ಗೆ ಖರೀದಿಸಿತ್ತು. ವಿಲಿಯಮ್ಸ್ ಬದಲಿಗೆ ಅವರದೇ ದೇಶದ ಕಾರ್ಬಿನ್ ಬಾಷ್ ಆಯ್ಕೆಯಾಗಿದ್ದಾರೆ. ಬಾಷ್ ಈ ಹಿಂದೆ ರಾಜಸ್ಥಾನ ತಂಡದ ನೆಟ್ ಬೌಲರ್ ಆಗಿದ್ದರು.

► ಘಝನ್ಫರ್(ಮುಂಬೈ ಇಂಡಿಯನ್ಸ್): ಅಫ್ಘಾನಿಸ್ತಾನದ ಲೆಗ್-ಸ್ಪಿನ್ನರ್ ಘಝನ್ಫರ್ ಐಸಿಸಿ ಚಾಂಪಿಯನ್ಸ್ ಟ್ರೋಫಿಗಿಂತ ಮೊದಲೇ ಗಾಯಗೊಂಡು ಈ ವರ್ಷದ ಐಪಿಎಲ್ನಿಂದ ಹೊರಗುಳಿದಿದ್ದಾರೆ. ಹರಾಜಿನಲ್ಲಿ ಮುಂಬೈ ತಂಡವು 4.80 ಕೋಟಿ ರೂ. ನೀಡಿ ಘಝನ್ಫರ್ರನ್ನು ತನ್ನತ್ತ ಸೆಳೆದಿತ್ತ್ತು. ಘಝನ್ಫರ್ ಬದಲಿಗೆ ಅವರದೇ ದೇಶದ ಮುಜೀಬ್ ಉರ್ ರೆಹ್ಮಾನ್ 2 ಕೋಟಿ ರೂ.ಗೆ ಫ್ರಾಂಚೈಸಿಗೆ ಸೇರಲಿದ್ದಾರೆ. ಆಫ್ ಸ್ಪಿನ್ನರ್ ಮುಜೀಬ್ 2018 ಹಾಗೂ 2021ರ ಮಧ್ಯೆ 19 ಐಪಿಎಲ್ ಪಂದ್ಯಗಳನ್ನು ಆಡಿದ್ದು, ಪಂಜಾಬ್ ಕಿಂಗ್ಸ್ ಹಾಗೂ ಹೈದರಾಬಾದ್ ತಂಡಗಳನ್ನು ಪ್ರನಿಧಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News