ಆಲ್ ಇಂಗ್ಲೆಂಡ್ ಚಾಂಪಿಯನ್ ಶಿಪ್ | ಹಾಲಿ ಚಾಂಪಿಯನ್ ಜೋನಾಥನ್ ಕ್ರಿಸ್ಟಿಗೆ ಸೋಲುಣಿಸಿದ ಲಕ್ಷ್ಯ ಸೇನ್

Lakshya Sen (PTI Photo)
ಬರ್ಮಿಂಗ್ಹ್ಯಾಮ್: ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ನಲ್ಲಿ ಹಾಲಿ ಚಾಂಪಿಯನ್ ಜೋನಾಥನ್ ಕ್ರಿಸ್ಟಿ ಅವರನ್ನು ನೇರ ಗೇಮ್ ಗಳ ಅಂತರದಿಂದ ಸದೆಬಡಿದ ಭಾರತದ ಯುವ ಆಟಗಾರ ಲಕ್ಷ್ಯ ಸೇನ್ ಕಳೆದ ಕೆಲವು ತಿಂಗಳುಗಳಿಂದ ಎದುರಿಸುತ್ತಿದ್ದ ಸತತ ಹಿನ್ನಡೆಯಿಂದ ಹೊರ ಬಂದು ಪ್ರಶಸ್ತಿ ಗೆಲ್ಲುವ ವಿಶ್ವಾಸ ಮೂಡಿಸಿದ್ದಾರೆ.
ಗುರುವಾರ ಕೇವಲ 39 ನಿಮಿಷಗಳಲ್ಲಿ ಅಂತ್ಯಗೊಂಡ ಪುರುಷರ ಸಿಂಗಲ್ಸ್ ವಿಭಾಗದ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಶ್ವದ ನಂ.15ನೇ ಆಟಗಾರ ಲಕ್ಷ್ಯ ಸೇನ್ ಅವರು ವಿಶ್ವದ ನಂ.2ನೇ ಆಟಗಾರ ಕ್ರಿಸ್ಟಿ ಅವರನ್ನು 21-13, 21-10 ಗೇಮ್ ಗಳ ಅಂತರದಿಂದ ಮಣಿಸಿದರು. ಈ ಮೂಲಕ ಕ್ವಾರ್ಟರ್ ಫೈನಲ್ ಗೆ ಲಗ್ಗೆ ಇಟ್ಟರು.
ಕಳೆದ ವರ್ಷ ಆಗಸ್ಟ್ ನಲ್ಲಿ ನಡೆದಿದ್ದ ಪ್ಯಾರಿಸ್ ಒಲಿಂಪಿಕ್ಸ್ ನಂತರ ಇದೀಗ ಎರಡನೇ ಬಾರಿ ಲಕ್ಷ್ಯ ಸೇನ್ ಅವರು ಪ್ರಮುಖ ಟೂರ್ನಿಯಲ್ಲಿ ಕ್ರಿಸ್ಟಿಗೆ ಸೋಲಿನ ಕಹಿ ಉಣಿಸಿದರು.
ಆರಂಭದಲ್ಲಿ 6-1 ಮುನ್ನಡೆ ಪಡೆದ ಉತ್ತರಾಖಂಡದ ಆಟಗಾರ ಲಕ್ಷ್ಯ ಸೇನ್ ಮೊದಲ ಗೇಮ್ ನುದ್ದಕ್ಕೂ ಇದೇ ಪ್ರದರ್ಶನ ಕಾಯ್ದುಕೊಂಡರು. ಕ್ರಿಸ್ಟಿ ಎರಡನೇ ಗೇಮ್ ನಲ್ಲಿ ಮೇಲುಗೈ ಸಾಧಿಸಲು ಕಠಿಣ ಶ್ರಮಪಟ್ಟರು. 6-6ರ ನಂತರ ಲಕ್ಷ್ಯ ತನ್ನ ಆಟದ ಲಯ ಬದಲಿಸಿದರು. ಕ್ರಿಸ್ಟಿ ಅವರಿಗೆ ಲಕ್ಷ್ಯ ಅವರ ವೇಗದ ಆಟಕ್ಕೆ ಪೈಪೋಟಿ ನೀಡಲು ಸಾಧ್ಯವಾಗಲಿಲ್ಲ.
ಇದೊಂದು ಉತ್ತಮ ಪಂದ್ಯ. ನಾನು ಈ ಕ್ಷಣಕ್ಕಾಗಿ ತಯಾರಿ ನಡೆಸಿದ್ದೆ. ನಾನು ಆಡಿರುವ ರೀತಿ ನನಗೆ ಖುಷಿಕೊಟ್ಟಿದೆ. ಉತ್ತಮ ವಿಧಾನದೊಂದಿಗೆ ಪಂದ್ಯ ಆರಂಭಿಸಿದೆ. ಇದೇ ರೀತಿಯ ಪ್ರದರ್ಶನವನ್ನು ಮುಂದುವರಿಸಲು ಎದುರು ನೋಡುತ್ತಿರುವೆ ಎಂದು ಲಕ್ಷ್ಯ ಸೇನ್ ಹೇಳಿದ್ದಾರೆ.