ಪ್ರವಾಸದ ವೇಳೆ ಆಟಗಾರರು ಕುಟುಂಬದ ಸದಸ್ಯರನ್ನು ಕರೆದೊಯ್ಯಬಾರದು ಎಂಬ ಬಿಸಿಸಿಐ ನಿಯಮಕ್ಕೆ ಕೊಹ್ಲಿ ಅಸಮಾಧಾನ; ವರದಿ

Update: 2025-03-16 12:52 IST
Photo of Virat Kohli

ವಿರಾಟ್ ಕೊಹ್ಲಿ (Photo credit: X/@RCBTweets)

  • whatsapp icon

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಪ್ರವಾಸದ ವೇಳೆ ಆಟಗಾರರೊಂದಿಗೆ ಅವರ ಕುಟುಂಬದ ಸದಸ್ಯರ ಉಪಸ್ಥಿತಿ ಇರಬೇಕು ಎಂದು ಪ್ರತಿಪಾದಿಸಿರುವ ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ಕುಟುಂಬದ ಸದಸ್ಯರು ತಮ್ಮ ಸುತ್ತಮುತ್ತ ಇದ್ದಾಗ, ಆಟಗಾರರಲ್ಲಿ ಸಮತೋಲನ ಹಾಗೂ ಸಹಜತೆ ಮೂಡಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ ಎಂದು ESPNCricinfo.com ವರದಿ ಮಾಡಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ 2025 ಆರಂಭಗೊಳ್ಳುವುದಕ್ಕೂ ಮುನ್ನ, ಬೆಂಗಳೂರಿನಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇನೋವೇಶನ್ ಲ್ಯಾಬ್ ಇಂಡಿಯನ್ ಸ್ಪೋರ್ಟ್ಸ್ ಸಮಿತ್ ನಲ್ಲಿ ಪಾಲ್ಗೊಂಡು ಮಾತನಾಡಿದ ವಿರಾಟ್ ಕೊಹ್ಲಿ, “ಆಟಗಾರರು ತಮ್ಮ ಕುಟುಂಬದ ಸದಸ್ಯರೊಂದಿಗಿದ್ದಾಗ, ಅದರಿಂದ ಅವರಿಗೆ ಎಷ್ಟು ದೊಡ್ಡ ಸಮಾಧಾನ ಉಂಟಾಗುತ್ತದೆ ಎಂಬುದು ಜನರಿಗೆ ಅರ್ಥವಾಗಲಾರದು. ಆದರೆ, ಮುಂದೇನಾಗಬಹುದು ಎಂಬುದರ ಅಂದಾಜಿಲ್ಲದವರು, ಇಂತಹ ವಿಚಾರಗಳನ್ನು ಚರ್ಚೆಯ ಮುನ್ನೆಲೆಗೆ ಎಳೆದು ತಂದು, “ಬಹುಶಃ ಆಟಗಾರರನ್ನು ಅವರ ಕುಟುಂಬಗಳಿಂದ ದೂರವಿಡಬೇಕು” ಎಂಬ ಅಭಿಪ್ರಾಯ ಮೂಡಿಸುತ್ತಿರುವುದರಿಂದ ನನಗೆ ನಿಜಕ್ಕೂ ಅಸಮಾಧಾನವಾಗಿದೆ” ಎಂದೂ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರವಾಸದ ವೇಳೆ ಕಳಪೆ ಪ್ರದರ್ಶನ ನೀಡಿದಾಗ ಯಾವ ಆಟಗಾರನೂ ಒಂಟಿಯಾಗಿ ಕುಳಿತುಕೊಂಡು ವೈರಾಗ್ಯ ಅನುಭವಿಸಲು ಬಯಸುವುದಿಲ್ಲ ಎಂದು ವಿರಾಟ್ ಕೊಹ್ಲಿ ಮಾರ್ಮಿಕವಾಗಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಇತ್ತೀಚಿನ ಭಾರತ ತಂಡದ ಆಸ್ಟ್ರೇಲಿಯ ಪ್ರವಾಸದ ವೇಳೆ, ಭಾರತ ತಂಡದ ಆಟಗಾರರೊಂದಿಗೆ ಅವರ ಕುಟುಂಬಗಳ ಸದಸ್ಯರು ತೆರಳುವುದನ್ನು ನಿರ್ಬಂಧಿಸಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮಾರ್ಗಸೂಚಿ ಬಿಡುಗಡೆ ಮಾಡಿತ್ತು. ಸುಮಾರು 45ಕ್ಕೂ ಹೆಚ್ಚು ದಿನಗಳ ಅವಧಿಯ ಆಸ್ಟ್ರೇಲಿಯ ಪ್ರವಾಸದ ಸಂದರ್ಭದಲ್ಲಿ, ಪ್ರವಾಸ ಪ್ರಾರಂಭಗೊಂಡ ಮೊದಲೆರಡು ವಾರಗಳ ನಂತರ, ಆಟಗಾರರ ಕುಟುಂಬದ ಸದಸ್ಯರು, ಸಂಗಾತಿಗಳು ಹಾಗೂ ಮಕ್ಕಳು ಅವರನ್ನು ಸೇರಿಕೊಳ್ಳಬಹುದು ಎಂದು ಆ ಮಾರ್ಗಸೂಚಿಯಲ್ಲಿ ನಿರ್ಬಂಧ ವಿಧಿಸಲಾಗಿತ್ತು. ಸಣ್ಣ ಅವಧಿಯ ಪ್ರವಾಸದ ಸಂದರ್ಭಗಳಲ್ಲಿ ಆಟಗಾರರು ತಮ್ಮ ಕುಟುಂಬದ ಸದಸ್ಯರೊಂದಿಗೆ ಒಂದು ವಾರದವರೆಗೆ ಇರುವ ಅವಕಾಶ ನೀಡಲಾಗಿತ್ತು.

ಇತ್ತೀಚೆಗೆ ಮುಕ್ತಾಯಗೊಂಡ ಆಸ್ಟ್ರೇಲಿಯ ಪ್ರವಾಸದ ವೇಳೆ ನಡೆದಿದ್ದ ಐದು ಪಂದ್ಯಗಳ ಬಾರ್ಡರ್-ಗಾವಸ್ಕರ್ ಟ್ರೋಫಿಯಲ್ಲಿ ಭಾರತ ತಂಡವು 1-3 ಅಂತರದಲ್ಲಿ ಆಸ್ಟ್ರೇಲಿಯ ತಂಡದೆದುರು ಪರಾಭವಗೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News