ಬಾಕ್ಸಿಂಗ್ ಡೇ ಟೆಸ್ಟ್ ಗೆ 'ಹೆಡ್' ಫಿಟ್: ಭಾರತಕ್ಕೆ ತಲೆನೋವು
ಮೆಲ್ಬೋರ್ನ್: ಬಾರ್ಡರ್- ಗಾವಸ್ಕರ್ ಟ್ರೋಫಿ ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ ಭಾರತದ ಬೌಲರ್ ಗಳ ಬೆವರಿಳಿಸಿದ ಆಸೀಸ್ ದಾಂಡಿಗ ಟ್ರಾವಿಸ್ ಹೆಡ್ ಗಾಯದಿಂದ ಚೇತರಿಸಿಕೊಂಡಿದ್ದು ಬಾಕ್ಸಿಂಗ್ ಡೇ ಟೆಸ್ಟ್ ಗೆ ಲಭ್ಯರಿದ್ದಾರೆ. ಮಹತ್ವದ ಮೆಲ್ಬೋರ್ನ್ ಟೆಸ್ಟ್ ಆಡುವ 11ರ ಬಳಗವನ್ನು ಆಸ್ಟ್ರೇಲಿಯಾ ಘೋಷಿಸಿದ್ದು, ಟ್ರಾವಿಸ್ ಹೆಡ್ ಈ ಬಳಗದಲ್ಲಿದ್ದಾರೆ.
ಗುರುವಾರದಿಂದ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಆರಂಭವಾಗುವ ಟೆಸ್ಟ್ ನ ಮುನ್ನಾ ದಿನ ನಾಯಕ ಪ್ಯಾಟ್ ಕಮಿನ್ಸ್ ಎರಡು ನಿರೀಕ್ಷಿತ ಬದಲಾವಣೆಗಳನ್ನು ದೃಢಪಡಿಸಿದ್ದಾರೆ. "ಟ್ರಾವಿಸ್ ಸುಧಾರಿಸಿಕೊಂಡಿದ್ದು, ಪಂದ್ಯ ಆಡಲಿದ್ದಾರೆ" ಎಂದು ಅತಿಥೇಯ ತಂಡದ ನಾಯಕ ಘೋಷಿಸಿದರು. "ಇಂದು ಹಾಗೂ ನಿನ್ನೆ ಅವರು ಅಂತಿಮ ಅಭ್ಯಾಸ ನಡೆಸಿದ್ದಾರೆ. ಟ್ರಾವಿಸ್ ಅವರ ಗಾಯದ ಬಗ್ಗೆ ಯಾವುದೇ ಆತಂಕ ಇಲ್ಲ. ಅವರು ಪಂದ್ಯಕ್ಕೆ ಸಂಪೂರ್ಣ ಸಮರ್ಥರಿದ್ದಾರೆ" ಎಂದು ಹೇಳಿದ್ದಾರೆ
ಆರಂಭಿಕ ಬ್ಯಾಟ್ಸ್ ಮನ್ ಸ್ಯಾಮ್ ಕೊನ್ ಸ್ಟಾಸ್ ಚೊಚ್ಚಲ ಪಂದ್ಯ ಆಡುವ ಅವಕಾಶ ಪಡೆದಿದ್ದು, ನ್ಯಾಥನ್ ಮೆಕ್‌ಸ್ವೀನಿ ಹೊಸ ಆಟಗಾರನಿಗೆ ಸ್ಥಾನ ಕಲ್ಪಿಸಿದ್ದಾರೆ. ವೇಗದ ಬೌಲರ್ ಸ್ಕಾಟ್ ಬೊಲಾಂಡ್ ಆಡುವ 11ರ ಬಳಗಕ್ಕೆ ಮರಳಿದ್ದು, ಗಾಯದ ಸಮಸ್ಯೆಯಿಂದ ಜೋಶ್ ಹೇಝಲ್ ವುಡ್ ಪಂದ್ಯದಿಂದ ಹೊರಗುಳಿಯುವರು.
ಬ್ರಿಸ್ಬೇನ್ ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡಿದ್ದ ಹೆಡ್ ಅವರ ದೈಹಿಕ ಸಾಮರ್ಥ್ಯದ ಬಗ್ಗೆ ಅನುಮಾನ ಇತ್ತು. ಓಟದ ಅಭ್ಯಾಸ ಸೇರಿದಂತೆ ಐಚ್ಛಿಕ ತರಬೇತಿ ಸೆಷನ್ ನಲ್ಲಿ ಪಾಲ್ಗೊಂಡು ಫಿಟ್ನೆಸ್ ಪ್ರದರ್ಶಿಸಿದರು. ಹೆಡ್ ಅಲ್ಪಕಾಲ ನೆಟ್ ಪ್ರಾಕ್ಟೀಸ್ ನಲ್ಲೂ ಪಾಲ್ಗೊಂಡಿದ್ದನ್ನು ಕಮಿನ್ಸ್ ದೃಢಪಡಿಸಿದ್ದಾರೆ. ಪಂದ್ಯದ ಫೀಲ್ಡಿಂಗ್ ವೇಳೆ ತೊಂದರೆ ಕಾಣಿಸಿಕೊಂಡರೆ ಅದನ್ನು ತಂಡ ನಿಭಾಯಿಸಲಿದೆ.