ಐಪಿಎಲ್ ಹರಾಜು: ರೂ. 1.1 ಕೋಟಿಗೆ ರಾಜಸ್ಥಾನ ಪಾಲಾದ 13 ವರ್ಷದ ವೈಭವ್ ಸೂರ್ಯವಂಶಿ

Update: 2024-11-25 16:32 GMT

ವೈಭವ್ ಸೂರ್ಯವಂಶಿ | PC : NDTV

ಜಿದ್ದಾ: ಐಪಿಎಲ್ 2025 ಹರಾಜು ಪ್ರಕ್ರಿಯೆಯ ಎರಡನೆ ದಿನವಾದ ಇಂದು 13 ವರ್ಷದ ಬಿಹಾರ ಕ್ರಿಕೆಟಿಗ ವೈಭವ್ ಸೂರ್ಯವಂಶಿ ರೂ. 1.1 ಕೋಟಿಗೆ ಮಾರಾಟವಾಗುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.ಈ ಮೂಲಕ ಬಿಹಾರದ ಬಾಲಕ ರಾತ್ರೋರಾತ್ರಿ ಕೋಟ್ಯಧಿಪತಿಯಾಗಿ ಇತಿಹಾಸ ನಿರ್ಮಿಸಿದರು. ಸೋಮವಾರ ಇಲ್ಲಿ ನಡೆದ ಮೆಗಾ ಹರಾಜಿನಲ್ಲಿ ವೈಭವ್ ಸೂರ್ಯವಂಶಿಯನ್ನು ರಾಜಸ್ಥಾನ್ ರಾಯಲ್ಸ್ ತಂಡವು ರೂ. 1.1 ಕೋಟಿ ಮೊತ್ತ ತೆತ್ತು ಖರೀದಿಸಿತು.

ವೈಭವ್ ಸೂರ್ಯವಂಶಿಗಾಗಿ ರಾಜಸ್ಥಾನ್ ರಾಯಲ್ಸ್ ಹಾಗೂ ದಿಲ್ಲಿ ಕ್ಯಾಪಿಟಲ್ಸ್ ನಡುವೆ ಪೈಪೋಟಿಯೇ ಏರ್ಪಟ್ಟಿತು. ಆದರೆ, ರಾಜಸ್ಥಾನ್ ರಾಯಲ್ಸ್ ತಂಡವು ವೈಭವ್ ಸೂರ್ಯವಂಶಿಯನ್ನು ಖರೀದಿಸಲು ರೂ. 1.10 ಕೋಟಿ ಮೊತ್ತವನ್ನು ಬಿಡ್ ಮಾಡಿದ್ದರಿಂದ, ದಿಲ್ಲಿ ಕ್ಯಾಪಿಟಲ್ಸ್ ತಂಡವು ಬಿಡ್ ನಿಂದ ಹಿಂದೆ ಸರಿಯಿತು.

2011ರಲ್ಲಿ ಜನಿಸಿದ ವೈಭವ್ ಸೂರ್ಯವಂಶಿ ನಾಲ್ಕು ವರ್ಷದ ಬಾಲಕರಾಗಿರುವಾಗಲೇ ತಮ್ಮ ಕ್ರಿಕೆಟ್ ಪ್ರತಿಭೆಯನ್ನು ಪ್ರದರ್ಶಿಸಿದ್ದರು. ಕ್ರಿಕೆಟ್ ನೆಡೆಗಿನ ವೈಭವ್ ಸೂರ್ಯವಂಶಿಯ ವ್ಯಾಮೋಹವನ್ನು ಗುರುತಿಸಿದ ಅವರ ತಂದೆ ಸಂಜೀವ್, ಮನೆಯ ಹಿಂಬದಿಯಲ್ಲಿ ಆತನಿಗಾಗಿ ಸಣ್ಣ ಆಟದ ಮೈದಾನವನ್ನು ನಿರ್ಮಿಸಲು ನಿರ್ಧರಿಸಿದರು.

ವೈಭವ್ ಸೂರ್ಯವಂಶಿ 9 ವರ್ಷದವರಾಗಿದ್ದಾಗ, ಅವರ ತಂದೆ ಹತ್ತಿರದ ಸಮಷ್ಠಿಪುರ್ ನಗರದ ಕ್ರಿಕೆಟ್ ಅಕಾಡೆಮಿಯೊಂದಕ್ಕೆ ಅವರನ್ನು ಸೇರ್ಪಡೆ ಮಾಡಿದರು. ವೈಭವ್ ಸೂರ್ಯವಂಶಿಯಲ್ಲಿ ತನ್ನ ವಯಸ್ಸಿಗೆ ಮೀರಿದ ಕ್ರಿಕೆಟ್ ಪ್ರತಿಭೆಯಿದೆ ಎಂಬುದನ್ನು ಗುರುತಿಸಲು ಅವರ ಸುತ್ತಲಿದ್ದ ಜನರಿಗೆ ಹೆಚ್ಚು ಸಮಯ ಹಿಡಿಯಲಿಲ್ಲ.

ಕೇವಲ 12 ವರ್ಷ ವಯಸ್ಸಿನವರಾಗಿದ್ದಾಗ ವಿನೂ ಮಂಕಡ್ ಟ್ರೋಫಿಯಲ್ಲಿ ಬಿಹಾರ ಪರವಾಗಿ ಆಡಿದ್ದ ವೈಭವ್ ಸೂರ್ಯವಂಶಿ, ಐದು ಪಂದ್ಯಗಳಿಂದ ಸುಮಾರು 400 ರನ್ ಕಲೆ ಹಾಕಿದ್ದರು. ಇತ್ತೀಚೆಗೆ ಆಸ್ಟ್ರೇಲಿಯ ಅಂಡರ್ 19 ತಂಡದ ವಿರುದ್ಧ ನಡೆದಿದ್ದ ನಾಲ್ಕು ದಿನಗಳ ಟೆಸ್ಟ್ ಪಂದ್ಯದಲ್ಲಿ ಕೇವಲ 58 ಬಾಲ್ ಗಳಲ್ಲಿ ಶತಕ ಬಾರಿಸಿದ್ದ ವೈಭವ್ ಸೂರ್ಯವಂಶಿ, ತಮ್ಮನ್ನು ತಾವು ಉದಯೋನ್ಮುಖ ತಾರೆಯನ್ನಾಗಿ ಸಾಬೀತು ಮಾಡಿಕೊಂಡಿದ್ದರು.

ನವೆಂಬರ್ 2023ರಲ್ಲಿ ಆಂಧ್ರಪ್ರದೇಶದ ಮಲಪಡುವಿನಲ್ಲಿ ನಡೆದಿದ್ದ ಅಂಡರ್ 19 ಚತುಷ್ಕೋನ ಸರಣಿಯಲ್ಲಿ ಅಂಡರ್ 19 ಭಾರತ ಬಿ ತಂಡವನ್ನು ವೈಭವ್ ಸೂರ್ಯವಂಶಿ ಪ್ರತಿನಿಧಿಸಿದ್ದರು.

ಬಾಂಗ್ಲಾದೇಶ ಹಾಗೂ ಇಂಗ್ಲೆಂಡ್ ತಂಡಗಳ ವಿರುದ್ಧ ನಡೆದಿದ್ದ ಅಂಡರ್ 19 ಕ್ರೀಡಾಕೂಟದಲ್ಲಿ ಭಾರತ ಎ ತಂಡವನ್ನು ಪ್ರತಿನಿಧಿಸಿದ್ದ ವೈಭವ್ ಸೂರ್ಯವಂಶಿ, ಆ ಅವಕಾಶವನ್ನು 2024ರ ಅಂಡರ್ 19 ವಿಶ್ವಕಪ್ ಗಾಗಿ ಆಯ್ಕೆ ಮಾಡಲಾಗಿದ್ದ ಭಾರತ ತಂಡದಲ್ಲಿ ಸ್ಥಾನ ಪಡೆಯುವ ವೇದಿಕೆಯನ್ನಾಗಿ ಬಳಸಿಕೊಂಡಿದ್ದರು.

ಈ ವರ್ಷದ ಜನವರಿ ತಿಂಗಳಲ್ಲಿ ಎಲೈಟ್ ಬಿ ಗುಂಪಿನಲ್ಲಿ ಮುಂಬೈ ತಂಡದ ವಿರುದ್ಧ ನಡೆದಿದ್ದ ರಣಜಿ ಪಂದ್ಯದಲ್ಲಿ ಬಿಹಾರ ತಂಡವನ್ನು ಪ್ರತಿನಿಧಿಸುವ ಮೂಲಕ, ವೈಭವ್ ಸೂರ್ಯವಂಶಿ ಪ್ರಥಮ ದರ್ಜೆ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು.

12 ವರ್ಷ, 284 ದಿನಗಳ ವೈಭವ್ ಸೂರ್ಯವಂಶಿ, 1896ರ ನಂತರ ಪ್ರಥಮ ದರ್ಜೆ ಕ್ರಿಕೆಟ್ ಗೆ ಪದಾರ್ಪಣೆ ಮಾಡಿರುವ ಅತ್ಯಂತ ಕಿರಿಯ ಆಟಗಾರ ಎಂಬ ಹಿರಿಮೆಗೆ ಭಾಜನವಾಗಿದ್ದಾರೆ. ಅಲ್ಲದೆ, ರಣಜಿ ಟ್ರೋಫಿಯಲ್ಲಿ ಬಿಹಾರ ತಂಡವನ್ನು ಪ್ರತಿನಿಧಿಸಿದ ಎರಡನೆ ಅತ್ಯಂತ ಕಿರಿಯ ಆಟಗಾರ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.

ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯ ತಂಡದ ವಿರುದ್ಧ ನಡೆದಿದ್ದ ಅಂಡರ್ 19 ಟೆಸ್ಟ್ ಪಂದ್ಯದ ಮೂಲಕ ವೈಭವ್ ಸೂರ್ಯವಂಶಿ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ಆ ಪಂದ್ಯದಲ್ಲಿ ಕೇವಲ 62 ಎಸೆತಗಳಲ್ಲಿ ಅಮೋಘ 104 ರನ್ ಸಿಡಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News