ಸುಮಿತ್ ನಾಗಲ್‌ಗೆ ಮೊದಲ ಸುತ್ತಿನಲ್ಲಿ ಥಾಮಸ್ ಮಚಾಕ್ ಎದುರಾಳಿ
ಮೆಲ್ಬರ್ನ್: ಆಸ್ಟ್ರೇಲಿಯ ಓಪನ್-2025ರ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಏಕೈಕ ಆಟಗಾರ ಸುಮಿತ್ ನಾಗಲ್ ಗುರುವಾರ ಡ್ರಾ ಕಾರ್ಯಕ್ರಮದಲ್ಲಿ ಕಠಿಣ ಎದುರಾಳಿಯನ್ನು ಪಡೆದಿದ್ದಾರೆ.
ವಿಶ್ವದ ನಂ.96ನೇ ಆಟಗಾರ ನಾಗಲ್ ಮೆಲ್ಬರ್ನ್‌ನಲ್ಲಿ ನಡೆಯುವ ಪಂದ್ಯಾವಳಿಯ ಮೊದಲ ಸುತ್ತಿನಲ್ಲಿ 26ನೇ ಶ್ರೇಯಾಂಕದ ಝೆಕ್ ಆಟಗಾರ ಥಾಮಸ್ ಮಚಾಕ್‌ರನ್ನು ಎದುರಿಸಲಿದ್ದಾರೆ.
ಈ ಇಬ್ಬರು ಆಟಗಾರರು ಇದೇ ಮೊದಲ ಬಾರಿ ಮುಖಾಮುಖಿಯಾಗುತ್ತಿದ್ದಾರೆ. ನಾಗಲ್ ಮೊದಲ ಸುತ್ತಿನಲ್ಲಿ ಜಯ ಸಾಧಿಸಿದರೆ 2ನೇ ಸುತ್ತಿನಲ್ಲಿ ಅಮೆರಿಕದ ರಿಲ್ಲಿ ಒಪೆಲ್ಕಾರನ್ನು ಎದುರಿಸಬಹುದು.
24ರ ಹರೆಯದ ಮಚಾಕ್ ಒಲಿಂಪಿಕ್ಸ್‌ನಲ್ಲಿ ಕಟೆರಿನಾ ಸಿನಿಯಾಕೋವಾರೊಂದಿಗೆ ಮಿಶ್ರ ಡಬಲ್ಸ್ ಪ್ರಶಸ್ತಿ ಜಯಿಸಿದ್ದರು. ಜಿನೇವಾದಲ್ಲಿ ಟೂರ್ ಲೆವೆಲ್ ಟೂರ್ನಿಯಲ್ಲಿ ಮೊದಲ ಬಾರಿ ಫೈನಲ್‌ಗೆ ತಲುಪಿದ್ದರು. ಕಳೆದ ವರ್ಷ ಶಾಂಘೈ ಮಾಸ್ಟರ್ಸ್ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ 4 ಬಾರಿಯ ಗ್ರ್ಯಾನ್‌ಸ್ಲಾಮ್ ಚಾಂಪಿಯನ್ ಕಾರ್ಲೊಸ್ ಅಲ್ಕರಾಝ್‌ಗೆ ಸೋಲುಣಿಸಿ ಶಾಕ್ ನೀಡಿದ್ದರು.
ಕಳೆದ ವರ್ಷ ನಾಗಲ್ 31ನೇ ಶ್ರೇಯಾಂಕದ ಅಲೆಕ್ಸಾಂಡರ್ ಬಬ್ಲಿಕ್‌ರನ್ನು ನೇರ ಸೆಟ್‌ಗಳಿಂದ ಸೋಲಿಸಿದ್ದರು. 35 ವರ್ಷಗಳಲ್ಲಿ ಮೊದಲ ಬಾರಿ ಗ್ರ್ಯಾನ್‌ಸ್ಲಾಮ್‌ನ ಪ್ರಧಾನ ಸುತ್ತಿನಲ್ಲಿ ಶ್ರೇಯಾಂಕಿತ ಆಟಗಾರನನ್ನು ಮಣಿಸಿದ ಭಾರತದ ಮೊದಲ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ನಾಗಲ್ ಎರಡು ಚಾಲೆಂಜರ್ ಟೂರ್ ಪ್ರಶಸ್ತಿಗಳನ್ನು ಜಯಿಸಿದ್ದು, ಮೊದಲ ಬಾರಿ ಎಟಿಪಿ ಟಾಪ್-100ರಲ್ಲಿ ಸ್ಥಾನ ಪಡೆದಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ನಾಗಲ್ ಅವರು ಇತರ ಪ್ರಮುಖ ಟೂರ್ನಿಗಳಲ್ಲಿ ನೇರ ಪ್ರವೇಶ ಪಡೆದಿದ್ದಾರೆ. ಆದರೆ ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲಿ ನಾಗಲ್ ಅವರು ಈ ತನಕ 2ನೇ ಸುತ್ತು ದಾಟಿಲ್ಲ.