ವಿಜಯ್ ಹಝಾರೆ ಟ್ರೋಫಿ | ಒಂದೇ ಓವರ್‌ನಲ್ಲಿ 29 ರನ್ ಗಳಿಸಿದ ಜಗದೀಶನ್!

Update: 2025-01-09 15:04 GMT

 ಎನ್.ಜಗದೀಶನ್ | PC : NDTV 

ವಡೋದರ: ರಾಜಸ್ಥಾನದ ವಿರುದ್ಧ ಗುರುವಾರ ನಡೆದ ವಿಜಯ್ ಹಝಾರೆ ಟ್ರೋಫಿಯ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ತಮಿಳುನಾಡಿನ ಆರಂಭಿಕ ಬ್ಯಾಟರ್ ಎನ್.ಜಗದೀಶನ್ ಒಂದೇ ಓವರ್‌ನಲ್ಲಿ 29 ರನ್ ಗಳಿಸಿ ಅಬ್ಬರದ ಬ್ಯಾಟಿಂಗ್ ಮಾಡಿದ್ದಾರೆ. ಆದರೆ ತಮಿಳುನಾಡು ಗೆಲುವಿನ ದಡ ಸೇರುವಲ್ಲಿ ವಿಫಲವಾದ ಕಾರಣ ಜಗದೀಶನ್ ಪ್ರಯತ್ನ ವ್ಯರ್ಥವಾಯಿತು.

ಜಗದೀಶನ್ ಒಂದೇ ಓವರ್‌ನಲ್ಲಿ ಸತತ ಆರು ಬೌಂಡರಿಗಳನ್ನು ಬಾರಿಸಿ ಈ ಸಾಧನೆ ಮಾಡಿದ್ದಾರೆ.

ಎರಡನೇ ಓವರ್‌ನಲ್ಲಿ ರಾಜಸ್ಥಾನದ ವೇಗದ ಬೌಲರ್ ಅಮನ್ ಸಿಂಗ್ ಶೆಖಾವತ್‌ರನ್ನು ಎದುರಿಸಿದ ಜಗದೀಶನ್ ಒಟ್ಟು 29 ರನ್ ಗಳಿಸಿದರು. ಇದರಲ್ಲಿ ವೈಡ್ ಎಸೆತದಲ್ಲಿ ಬಂದಿರುವ ಬೌಂಡರಿ ಕೂಡ ಸೇರಿದೆ.

ವೈಡ್ ಎಸೆತದಲ್ಲಿ ಬೌಂಡರಿ ಬಂದ ನಂತರ ಜಗದೀಶನ್ ಅವರು ಅಮನ್ ಬೌಲಿಂಗ್‌ನಲ್ಲಿ ಸತತ 6 ಬೌಂಡರಿಗಳನ್ನು ಗಳಿಸಿದರು. ಭರ್ಜರಿ ಬ್ಯಾಟಿಂಗ್‌ನ ಮೂಲಕ ತಮಿಳುನಾಡು ರನ್ ಚೇಸ್‌ಗೆ ಬಲ ತುಂಬಿದರು. ಜಗದೀಶನ್ 9 ಬೌಂಡರಿಗಳ ನೆರವಿನಿಂದ 33 ಎಸೆತಗಳಲ್ಲಿ ಅರ್ಧಶತಕ ತಲುಪಿದರು. ಜಗದೀಶನ್ 52 ಎಸೆತಗಳಲ್ಲಿ 10 ಬೌಂಡರಿಗಳ ಸಹಿತ 65 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ವಿಕೆಟ್‌ಕೀಪರ್-ಬ್ಯಾಟರ್ ಜಗದೀಶನ್ ಅವರ ಸ್ಫೋಟಕ ಶೈಲಿಯ ಬ್ಯಾಟಿಂಗ್ ನೆರವಿನಿಂದ 268 ರನ್ ಚೇಸ್ ವೇಳೆ ತಮಿಳುನಾಡು ಉತ್ತಮ ಆರಂಭ ಪಡೆಯಿತು. ಆದರೆ, ವಿಜಯ್ ಶಂಕರ್(49 ರನ್) , ಬಾಬಾ ಇಂದ್ರಜಿತ್(37 ರನ್) ಹಾಗೂ ಮುಹಮ್ಮದ್ ಅಲಿ(34 ರನ್)ಹೊರತುಪಡಿಸಿ ಉಳಿದ ಆಟಗಾರರ ವೈಫಲ್ಯದಿಂದಾಗಿ 47.1 ಓವರ್‌ಗಳಲ್ಲಿ 248 ರನ್‌ಗೆ ಆಲೌಟಾಗಿ 19 ರನ್ ಅಂತರದಿಂದ ಸೋಲುಂಡಿದೆ.

ಅಮನ್ ಶೆಖಾವತ್(3-60) ಯಶಸ್ವಿ ಬೌಲರ್ ಎನಿಸಿಕೊಂಡರು. ಅನಿಕೇತ್(2-40)ಹಾಗೂ ಅಜಯ್ ಸಿಂಗ್(2-59)ತಲಾ ಎರಡು ವಿಕೆಟ್‌ಗಳನ್ನು ಪಡೆದರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಾಜಸ್ಥಾನ ತಂಡ 267 ರನ್ ಗಳಿಸಿ ಆಲೌಟಾಯಿತು. ಆರಂಭಿಕ ಬ್ಯಾಟರ್ ಅಭಿಜೀತ್ ತೋಮರ್(111 ರನ್, 125 ಎಸೆತ)ಹಾಗೂ ನಾಯಕ ಮಹಿಪಾಲ್ ಲಾಮ್ರೊರ್(60 ರನ್, 49 ಎಸೆತ)2ನೇ ವಿಕೆಟ್‌ಗೆ ಗಳಿಸಿದ 160 ರನ್ ಜೊತೆಯಾಟದ ನೆರವಿನಿಂದ ರಾಜಸ್ಥಾನ ಉತ್ತಮ ಆರಂಭ ಪಡೆಯಿತು.

32ನೇ ಓವರ್‌ನಲ್ಲಿ 1 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿದ್ದ ರಾಜಸ್ಥಾನ ತಂಡ ದೊಡ್ಡ ಮೊತ್ತ ಗಳಿಸುವ ವಿಶ್ವಾಸ ಮೂಡಿಸಿತ್ತು. ತಮಿಳುನಾಡು ಸ್ಪಿನ್ನರ್ ವರುಣ್ ಚಕ್ರವರ್ತಿ ಐದು ವಿಕೆಟ್ ಗೊಂಚಲು ಪಡೆದು ಪಂದ್ಯದ ದಿಕ್ಕನ್ನು ಬದಲಿಸಿದರು. ಲಾಮ್ರೋರ್‌ರ ಬಿರುಸಿನ ಇನಿಂಗ್ಸ್‌ಗೆ ತೆರೆ ಎಳೆದ ವರುಣ್ ಆ ನಂತರ ಕ್ಷಿಪ್ರವಾಗಿ ದೀಪಕ್ ಹೂಡಾ(7 ರನ್)ಹಾಗೂ ತೋಮರ್ ವಿಕೆಟ್‌ಗಳನ್ನು ಪಡೆದರು. ಅಜಯ್ ಸಿಂಗ್ ಹಾಗೂ ಖಲೀಲ್ ಅಹ್ಮದ್ ವಿಕೆಟನ್ನು ಪಡೆದು 9 ಓವರ್‌ಗಳಲ್ಲಿ 52 ರನ್‌ಗೆ 5 ವಿಕೆಟ್‌ಗಳನ್ನು ಪಡೆದರು.

ಸುಸ್ಥಿತಿಯಲ್ಲಿದ್ದ ರಾಜಸ್ಥಾನ ಇನಿಂಗ್ಸ್ ದಿಢೀರ್ ಕುಸಿತ ಕಂಡಿದ್ದು, 16.1 ಓವರ್‌ಗಳಲ್ಲಿ ಕೇವಲ 83 ರನ್‌ಗೆ ಕೊನೆಯ 9 ವಿಕೆಟ್‌ಗಳನ್ನು ಕಳೆದುಕೊಂಡಿತು.

ನಿರ್ಣಾಯಕ ಸಮಯದಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ವರುಣ್, ಇಂಗ್ಲೆಂಡ್ ವಿರುದ್ಧದ ಮುಂಬರುವ ಸರಣಿಗೆ ಭಾರತದ ಸೀಮಿತ ಓವರ್ ತಂಡದಲ್ಲಿ ಸ್ಥಾನ ಪಡೆಯುವತ್ತ ಚಿತ್ತಹರಿಸಿದ್ದಾರೆ. ವರುಣ್ ಪ್ರಸಕ್ತ ಟೂರ್ನಿಯಲ್ಲಿ 2ನೇ ಬಾರಿ ಐದು ವಿಕೆಟ್ ಗೊಂಚಲು ಪಡೆದಿದ್ದಾರೆ.

ಶತಕ ಗಳಿಸಿದ ರಾಜಸ್ಥಾನ ಆರಂಭಿಕ ಆಟಗಾರ ಅಭಿಜೀತ್ ತೋಮರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News