ಚಾಂಪಿಯನ್ಸ್ ಟ್ರೋಫಿಗೂ ಮೊದಲು ಇಂಗ್ಲೆಂಡ್ ವಿರುದ್ಧ ಸರಣಿಗೆ ಟೀಮ್ ಇಂಡಿಯಾ ಸಿದ್ಧತೆ
ಹೊಸದಿಲ್ಲಿ: ನ್ಯೂಝಿಲ್ಯಾಂಡ್ ಹಾಗೂ ಆಸ್ಟ್ರೇಲಿಯ ವಿರುದ್ಧದ ಹಿಂದಿನ ಎರಡು ಟೆಸ್ಟ್ ಸರಣಿಗಳಲ್ಲಿ ಹೀನಾಯವಾಗಿ ಸೋತಿರುವ ಟೀಮ್ ಇಂಡಿಯಾವು ಜನವರಿ 22ರಿಂದ ಫೆಬ್ರವರಿ 12ರ ತನಕ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಗೆ ಸಿದ್ಧತೆ ನಡೆಸುತ್ತಿದೆ.
ಫೆಬ್ರವರಿ 19ರಿಂದ ಆರಂಭವಾಗಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಈ ಸರಣಿಯು ಭಾರತದ ಪಾಲಿಗೆ ಪೂರ್ವ ತಯಾರಿಯಾಗಿದೆ. ಚಾಂಪಿಯನ್ಸ್ ಟ್ರೋಫಿಯ ಪಂದ್ಯಗಳನ್ನು ಭಾರತ ತಂಡವು ಪಾಕಿಸ್ತಾನದ ಬದಲಿಗೆ ದುಬೈನಲ್ಲಿ ಆಡಲಿದೆ.
ಕಳೆದ ವರ್ಷದ ಆಗಸ್ಟ್‌ನಿಂದ ಭಾರತ ತಂಡವು 50 ಓವರ್ ಪಂದ್ಯವನ್ನು ಆಡಿಲ್ಲ. ಶ್ರೀಲಂಕಾದಲ್ಲಿ 3 ಪಂದ್ಯಗಳ ಏಕದಿನ ಸರಣಿಯನ್ನು ಭಾರತವು 0-2 ಅಂತರದಿಂದ ಸೋತಿತ್ತು. ಆ ಸರಣಿಯಲ್ಲಿ ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕೂಡ ಇದ್ದರು.
ರೋಹಿತ್ ಶರ್ಮಾ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡದ ನಾಯಕತ್ವ ವಹಿಸುವುದು ಖಚಿತವಾಗಿದೆ. ಜಸ್‌ಪ್ರಿತ್ ಬುಮ್ರಾ ಉಪ ನಾಯಕನಾಗಿರುತ್ತಾರೆ. ವೈಟ್-ಬಾಲ್ ಸ್ಪೆಷಲಿಸ್ಟ್‌ಗಳಾದ ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ ಹಾಗೂ ಅರ್ಷದೀಪ್ ಸಿಂಗ್ ತಂಡದಲ್ಲಿ ಲಭ್ಯವಿರಲಿದ್ದಾರೆ.
ಎರಡು ಬಾರಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಚಾಂಪಿಯನ್ ಆಗಿರುವ ಭಾರತ ತಂಡವು ಮುಂಬರುವ ಟೂರ್ನಿಯಲ್ಲಿ ಬಾಂಗ್ಲಾದೇಶ, ನ್ಯೂಝಿಲ್ಯಾಂಡ್ ಹಾಗೂ ಪಾಕಿಸ್ತಾನ ಒಳಗೊಂಡ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ.
ಚಾಂಪಿಯನ್ಸ್ ಟ್ರೋಫಿಗಿಂತ ಮೊದಲು ಆತಿಥೇಯ ಪಾಕಿಸ್ತಾನಕ್ಕೆ ಭಾರತದ ಪ್ರವಾಸದ ಯೋಜನೆಯು ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. ಭದ್ರತೆಯ ಕಾರಣಗಳಿಂದಾಗಿ ತಾನು ನೆರೆ ದೇಶಕ್ಕೆ ಪ್ರಯಾಣಿಸಲಾರೆ ಎಂದು ಭಾರತ ಸ್ಪಷ್ಟಪಡಿಸಿದ ನಂತರ ಎರಡೂ ದೇಶಗಳ ಕ್ರಿಕೆಟ್ ಮಂಡಳಿಗಳು ಹಾಗೂ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಯ ನಡುವೆ ದೀರ್ಘ ಮಾತುಕತೆ ನಡೆದಿತ್ತು.
ಅಂತಿಮವಾಗಿ ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಡಲು ನಿರ್ಧರಿಸಲಾಯಿತು. ಈ ಮಾದರಿಯ ಪ್ರಕಾರ ಭಾರತ ತನ್ನೆಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಉಳಿದ ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯಲಿದೆ.
2027ರ ತನಕ ಐಸಿಸಿ ಸ್ಪರ್ಧೆಗಳಿಗೆ ಉಭಯ ತಂಡಗಳು ಪರಸ್ಪರರ ದೇಶಕ್ಕೆ ಪ್ರಯಾಣಿಸದಿರಲು ನಿರ್ಧರಿಸಿವೆ.
ಚಾಂಪಿಯನ್ಸ್ ಟ್ರೋಫಿಗೆ ತಂಡವನ್ನು ಪ್ರಕಟಿಸಲು ಭಾರತದ ಪುರುಷರ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಅವರು ಮುಖ್ಯ ಕೋಚ್ ಗೌತಮ್ ಗಂಭೀರ್‌ರೊಂದಿಗೆ ಚರ್ಚೆ ಆರಂಭಿಸಿದ್ದಾರೆ.
ಫೆಬ್ರವರಿ 19ರಿಂದ ಪಂದ್ಯಾವಳಿ ಆರಂಭವಾಗುತ್ತಿರುವ ಕಾರಣ ತಂಡಗಳು ಜನವರಿ 12ರಂದು 15 ಸದಸ್ಯರ ತಾತ್ಕಾಲಿಕ ತಂಡವನ್ನು ಪ್ರಕಟಿಸುವ ಅಗತ್ಯವಿದೆ. ಫೆಬ್ರವರಿ 13ರೊಳಗೆ ತಂಡವನ್ನು ಬದಲಿಸಬಹುದು.
ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸಲಿರುವ ಭಾರತ ತಂಡದ ಎಲ್ಲ ಆಟಗಾರರು ಇಂಗ್ಲೆಂಡ್ ವಿರುದ್ಧ ಫೆಬ್ರವರಿ 6,9,12ರಂದು ನಾಗ್ಪುರ, ಕಟಕ್ ಹಾಗೂ ಅಹ್ಮದಾಬಾದ್‌ನಲ್ಲಿ ನಡೆಯಲಿರುವ 3 ಏಕದಿನ ಪಂದ್ಯಗಳಲ್ಲಿ ಆಡುವ ನಿರೀಕ್ಷೆ ಇದೆ.
ಜಸ್‌ಪ್ರಿತ್ ಬುಮ್ರಾ ಈ ಸರಣಿಯಿಂದ ಹೊರಗುಳಿಯುವ ಸಾಧ್ಯತೆಯಿದೆ. ವೇಗದ ಬೌಲರ್ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ 151.2 ಓವರ್ ಬೌಲಿಂಗ್ ಮಾಡಿದ್ದು, ಸಿಡ್ನಿಯಲ್ಲಿ ಬೆನ್ನುನೋವಿಗೆ ಒಳಗಾಗಿದ್ದರು. ಸರಣಿಯ ಕೊನೆಯ ಇನಿಂಗ್ಸ್‌ನಲ್ಲಿ ಅವರಿಗೆ ಬೌಲಿಂಗ್ ಮಾಡಲು ಸಾಧ್ಯವಾಗಿರಲಿಲ್ಲ.
ಇಂಗ್ಲೆಂಡ್ ಸರಣಿ ಹಾಗೂ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುವ ರೇಸ್‌ನಲ್ಲಿ ಮುಹಮ್ಮದ್ ಶಮಿ ಕೂಡ ಇದ್ದಾರೆ ಎಂದು ಕ್ರಿಕ್‌ಬಝ್ ವರದಿ ಮಾಡಿದೆ. ಶಮಿ ಅವರು ಆಸ್ಟ್ರೇಲಿಯ ವಿರುದ್ಧ ಸರಣಿಯಲ್ಲಿ ತಂಡಕ್ಕೆ ಸೇರ್ಪಡೆಯಾಗಬೇಕಾಗಿತ್ತು. ಆದರೆ ಅವರನ್ನು ಕೊನೆಯ ತನಕವೂ ಸೇರ್ಪಡೆಗೊಳಿಸಿರಲಿಲ್ಲ.
ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಯ(ಎನ್‌ಸಿಎ) ವೈದ್ಯಕೀಯ ತಂಡವು ಬಲ ಹಿಮ್ಮಡಿಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಶಮಿ ಅವರನ್ನು ನಿರಂತರವಾಗಿ ಪರೀಕ್ಷಿಸುತ್ತಿದೆ. ಅವರ ಶಸ್ತ್ರಚಿಕಿತ್ಸೆಯ ಗಾಯ ಗುಣಮುಖವಾಗಿದ್ದರೂ ಮೊಣಕಾಲಿನಲ್ಲಿ ಸ್ವಲ್ಪ ಊತ ಕಾಣಿಸಿಕೊಂಡಿದೆ.
ಶಮಿ ಅವರು ಇತ್ತೀಚೆಗೆ ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಬಂಗಾಳದ ಪರ ಕೆಲವು ಪಂದ್ಯಗಳನ್ನು ಆಡಿದ್ದಾರೆ. ಗುರುವಾರ ಹರ್ಯಾಣದ ವಿರುದ್ಧದ ಪ್ರಿಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮತ್ತೊಮ್ಮೆ ಆಡಿದ್ದಾರೆ.
ವಡೋದರದಲ್ಲಿ ನಡೆದಿರುವ ಪಂದ್ಯದಲ್ಲಿ ಬೌಲಿಂಗ್ ದಾಳಿ ಆರಂಭಿಸಿರುವ ಶಮಿ ಅವರು 10 ಓವರ್‌ಗಳಲ್ಲಿ ಹಿಮಾಂಶು ರಾಣಾ, ದಿನೇಶ್ ಬಾನಾ ಹಾಗೂ ಅಂಶುಲ್ ಕಾಂಬೋಜ್ ವಿಕೆಟ್‌ಗಳನ್ನು ಉರುಳಿಸಿ 61 ರನ್‌ಗೆ 3 ವಿಕೆಟ್‌ಗಳನ್ನು ಪಡೆದಿದ್ದಾರೆ. ಆದರೆ ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾದ ಬಂಗಾಳ ತಂಡ 72 ರನ್‌ಗಳಿಂದ ಸೋತಿದೆ.