ಆಸ್ಟ್ರೇಲಿಯನ್ ಓಪನ್ ಡ್ರಾ ಕಾರ್ಯಕ್ರಮ | ನೊವಾಕ್ ಜೊಕೊವಿಕ್‌ಗೆ ಕ್ವಾರ್ಟರ್ ಫೈನಲ್‌ನಲ್ಲಿ ಅಲ್ಕರಾಝ್ ಎದುರಾಳಿ?
ಸಿಡ್ನಿ: ಮೆಲ್ಬರ್ನ್‌ನಲ್ಲಿ ಗುರುವಾರ ನಡೆದ ಡ್ರಾ ಕಾರ್ಯಕ್ರಮದ ಪ್ರಕಾರ ವಿಶ್ವದ ನಂ.1 ಆಟಗಾರ ಜನ್ನಿಕ್ ಸಿನ್ನರ್ ಅವರು ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಮೊದಲ ಸುತ್ತಿನಲ್ಲಿ ಚಿಲಿಯ ನಿಕೊಲಸ್ ಜರ್ರಿ ಅವರನ್ನು ಎದುರಿಸುವ ಮೂಲಕ ಪ್ರಶಸ್ತಿ ತನ್ನಲ್ಲೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ತನ್ನ ಹೋರಾಟ ಆರಂಭಿಸಲಿದ್ದಾರೆ.
10 ಬಾರಿಯ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ನೊವಾಕ್ ಜೊಕೊವಿಕ್ ಅಮೆರಿಕದ ಉದಯೋನ್ಮುಖ ಆಟಗಾರ ನಿಶೇಶ್ ಬಸವರೆಡ್ಡಿ ಅವರನ್ನು ಎದುರಿಸಲಿದ್ದಾರೆ. ಬಸವರೆಡ್ಡಿಗೆ ವೈಲ್ಡ್‌ಕಾರ್ಡ್ ನೀಡಲಾಗಿದೆ. ಜೊಕೊವಿಕ್ ಕ್ವಾರ್ಟರ್ ಫೈನಲ್‌ನಲ್ಲಿ ಅಲ್ಕರಾಝ್‌ರನ್ನು ಹಾಗೂ ಸೆಮಿ ಫೈನಲ್‌ನಲ್ಲಿ ಝ್ವೆರೆವ್‌ರನ್ನು ಎದುರಿಸುವ ಸಾಧ್ಯತೆ ಇದೆ.
3ನೇ ಶ್ರೇಯಾಂಕದ ಸ್ಪೇನ್ ಆಟಗಾರ ಕಾರ್ಲೊಸ್ ಅಲ್ಕರಾಝ್ ಅವರು ಮೊದಲ ಸುತ್ತಿನಲ್ಲಿ ಕಝಕ್‌ಸ್ತಾನದ ಅಲೆಕ್ಸಾಂಡರ್ ಶೆವ್‌ಚೆಂಕೊರನ್ನು ಎದುರಿಸಲಿದ್ದಾರೆ.
ಜರ್ಮನಿಯ 2ನೇ ಶ್ರೇಯಾಂಕದ ಅಲೆಕ್ಸಾಂಡರ್ ಝ್ವೆರೆವ್ ಫ್ರೆಂಚ್‌ನ ವೈಲ್ಡ್‌ಕಾರ್ಡ್ ಆಟಗಾರ ಲುಕಾಸ್ ಪೌಲಿ ಅವರ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದ್ದಾರೆ.
ಕಳೆದ ವರ್ಷ ಯು.ಎಸ್. ಓಪನ್ ರನ್ನರ್ಸ್ ಅಪ್ ಟೇಲರ್ ಫ್ರಿಟ್ಜ್ ಅವರು ಮೊದಲ ಸುತ್ತಿನಲ್ಲಿ ಅಮೆರಿಕದ ಜಿನ್ಸನ್ ಬ್ರೂಕ್ಸ್‌ಬೈ ಅವರ ಸವಾಲನ್ನು ಎದುರಿಸಲಿದ್ದಾರೆ. ಫ್ರಿಟ್ಝ್ ಅವರು ಸೆಮಿ ಫೈಲ್‌ನಲ್ಲಿ ಸಿನ್ನರ್‌ರನ್ನು ಎದುರಿಸಬಹುದು. 2024ರ ಯು.ಎಸ್. ಓಪನ್ ಫೈನಲ್‌ನಲ್ಲೂ ಈ ಇಬ್ಬರು ಸೆಣಸಾಡಿದ್ದರು.
3 ಬಾರಿ ಆಸ್ಟ್ರೇಲಿಯನ್ ಓಪನ್ ರನ್ನರ್ಸ್ ಅಪ್ ಡೇನಿಯಲ್ ಮೆಡ್ವೆಡೆವ್ ಥಾಯ್ಲೆಂಡ್‌ನ ವೈಲ್ಡ್‌ಕಾರ್ಡ್ ಆಟಗಾರ ಕಾಸಿಡಿಟ್ ಸಮ್ರೆಜ್‌ರನ್ನು ಎದುರಿಸುವ ಮೂಲಕ ತಮ್ಮ ಅಭಿಯಾನ ಆರಂಭಿಸಲಿದ್ದಾರೆ.
ಆಸ್ಟ್ರೇಲಿಯನ್ ಓಪನ್‌ನಂತಹ ಗ್ರ್ಯಾನ್‌ಸ್ಲಾಮ್ ಪಂದ್ಯಾವಳಿಯ ಡ್ರಾ ಸಮಾರಂಭವು ಬಹು ಹಂತದ ಪ್ರಕ್ರಿಯೆಯಾಗಿದ್ದು, ಇದು ಪಂದ್ಯಾವಳಿಗೆ ಆರು ವಾರಗಳ ಮೊದಲು ನಡೆಯುತ್ತದೆ. ಡ್ರಾ ಪ್ರಕ್ರಿಯೆಯಲ್ಲಿ ಶ್ರೇಯಾಂಕ ಆಟಗಾರರನ್ನು ಆಯಾ ವಿಭಾಗಗಳಲ್ಲಿ, ಶ್ರೇಯಾಂಕರಹಿತರನ್ನು ಯಾದೃಚ್ಚಿಕವಾಗಿ ಇಡಲಾಗುತ್ತದೆ. ಡ್ರಾ ಸಮಾರಂಭವು ಅಭಿಮಾನಿಗಳಿಗೆ ರೋಮಾಂಚಕ ಕಾರ್ಯಕ್ರಮವಾಗಿದೆ. ಇದು ಏನಾಗಬಹುದೆಂದು ಊಹಿಸಲು ಅವಕಾಶ ನೀಡುತ್ತದೆ.