ಎಲ್ಲ ಮಾದರಿಯ ಕ್ರಿಕೆಟ್‌ನಿಂದ ಭಾರತದ ವೇಗದ ಬೌಲರ್ ವರುಣ್ ಆ್ಯರೊನ್ ವಿದಾಯ
ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ವರುಣ್ ಆ್ಯರೊನ್ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ. ಶುಕ್ರವಾರ ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ಈ ನಿರ್ಧಾರ ಪ್ರಕಟಿಸಿದರು.
ನಾನು ಕಳೆದ 20 ವರ್ಷಗಳಿಂದ ವೇಗದ ಬೌಲಿಂಗ್‌ನ ಧಾವಂತದಲ್ಲಿ ಬದುಕಿದ್ದೇನೆ, ಉಸಿರಾಡಿದ್ದೇನೆ ಹಾಗೂ ಅಭಿವೃದ್ದಿ ಹೊಂದಿದ್ದೇನೆ. ಇಂದು ಅಪಾರ ಕೃತಜ್ಞತೆಯೊಂದಿಗೆ ಕ್ರಿಕೆಟ್‌ನಿಂದ ನನ್ನ್ನ ನಿವೃತ್ತಿಯನ್ನು ಅಧಿಕೃತವಾಗಿ ಘೋಷಿಸುತ್ತೇನೆ ಎಂದು ಆ್ಯರೊನ್ ಅವರು ಇನ್‌ಸ್ಟಾಗ್ರಾಮ್ ನಲ್ಲಿ ಬರೆದಿದ್ದಾರೆ.
ವರುಣ್ ಅವರು ತನ್ನ ಪೋಸ್ಟ್‌ನಲ್ಲಿ ಬಿಸಿಸಿಐ ಹಾಗೂ ರಾಜ್ಯ ತಂಡ ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಕೃತಜ್ಞತೆ ಅರ್ಪಿಸಿದರು. ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಯ ಫಿಸಿಯೋಗಳು, ಟ್ರೈನರ್‌ಗಳು ಹಾಗೂ ಕೋಚ್‌ಗಳಿಗೂ ಧನ್ಯವಾದಗಳನ್ನು ಸಮರ್ಪಿಸಿದರು.
ವರುಣ್ ಅವರು ಭಾರತದ ಪರ 9 ಟೆಸ್ಟ್ ಹಾಗೂ 9 ಏಕದಿನ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಎರಡೂ ಮಾದರಿಯ ಕ್ರಿಕೆಟ್‌ನಲ್ಲಿ ಒಟ್ಟು 29 ವಿಕೆಟ್‌ಗಳನ್ನು ಪಡೆದಿದ್ದಾರೆ. 9 ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯವನ್ನಾಡಿದ್ದು, ಇದು ಅವರ ಕೊನೆಯ ಪಂದ್ಯವಾಗಿದೆ.
35ರ ಹರೆಯದ ವರುಣ್ ಕಳೆದ ವರ್ಷ ಕೆಂಪು-ಚೆಂಡಿನ ಕ್ರಿಕೆಟಿಗೆ ನಿವೃತ್ತಿ ಪ್ರಕಟಿಸಿದ್ದರು. ಈಗ ನಡೆಯುತ್ತಿರುವ ವಿಜಯ್ ಹಝಾರೆ ಟ್ರೋಫಿಯಲ್ಲಿ ಜಾರ್ಖಂಡ್ ತಂಡ ನಿರ್ಗಮಿಸಿದ ನಂತರ ಬಿಳಿ-ಚೆಂಡಿನ ಕ್ರಿಕೆಟ್ ವೃತ್ತಿಬದುಕಿಗೆ ತೆರೆ ಎಳೆದಿದ್ದಾರೆ.
ತನ್ನ ಕ್ರೀಡಾಜೀವನದ ಭಾಗವಾಗಿದ್ದ ತನ್ನ ಕುಟುಂಬ, ಸ್ನೇಹಿತರು, ಕೋಚ್‌ಗಳು, ಸಹ ಆಟಗಾರರು ಹಾಗೂ ಇತರರಿಗೆ ಕೃತಜ್ಞತೆ ಸಲ್ಲಿಸಿದರು.