ಜ.19ರಂದು ವಾಂಖೆಡೆ ಸ್ಟೇಡಿಯಮ್‌ ನ 50ನೇ ವರ್ಷಾಚರಣೆ

Update: 2025-01-10 15:13 GMT

PC : PTI 

ಹೊಸದಿಲ್ಲಿ: ಮುಂಬೈ ಕ್ರಿಕೆಟ್ ಅಸೋಸಿಯೇಶನ್(ಎಂಸಿಎ)ಜನವರಿ 19ರಂದು ಪ್ರತಿಷ್ಠಿತ ವಾಂಖೆಡೆ ಕ್ರೀಡಾಂಗಣದ 50ನೇ ವರ್ಷಾಚರಣೆಯನ್ನು ಆಚರಿಸಲಿದ್ದು, ಮುಂಬೈನ ಲೆಜೆಂಡರಿ ಕ್ರಿಕೆಟ್ ಆಟಗಾರರು ಹಾಗೂ ಭಾರತದ ಮಾಜಿ ನಾಯಕರುಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದೆ.

ಜನವರಿ 12ರಿಂದ ಚಟುವಟಿಕೆಗಳು ಆರಂಭವಾಗಲಿದ್ದು, ಜನವರಿ 19ರಂದು ದೊಡ್ಡ ಕಾರ್ಯಕ್ರಮದೊಂದಿಗೆ ಕೊನೆಗೊಳ್ಳಲಿದ್ದು, ಇದು ಅಭಿಮಾನಿಗಳಿಗೆ ಮನರಂಜನೆ ನೀಡುವ ನಿರೀಕ್ಷೆ ಇದೆ.

ವಾಂಖೆಡೆ ಕ್ರೀಡಾಂಗಣದ ಐತಿಹಾಸಿಕ ಕ್ಷಣವನ್ನು ಆಚರಿಸಲು ಮುಂಬೈ ಐಕಾನ್‌ಗಳು ಹಾಗೂ ಭಾರತದ ಮಾಜಿ ಕ್ರಿಕೆಟ್ ನಾಯಕರುಗಳಾದ ಸಚಿನ್ ತೆಂಡುಲ್ಕರ್, ಸುನೀಲ್ ಗವಾಸ್ಕರ್, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ರವಿ ಶಾಸ್ತ್ರಿ, ಅಜಿಂಕ್ಯ ರಹಾನೆ, ದಿಲಿಪ್ ವೆಂಗ್ ಸರ್ಕಾರ್ ಹಾಗೂ ಡಯಾನಾ ಎಡುಲ್ಜಿ ಒಂದೆಡೆ ಸೇರಲಿದ್ದಾರೆ. ಈ ಸಂದರ್ಭದಲ್ಲಿ ಕ್ರೀಡಾ ಇತಿಹಾಸಕ್ಕೆ ಕ್ರೀಡಾಂಗಣದ ಮಹತ್ವದ ಕೊಡುಗೆಯನ್ನು ಸ್ಮರಿಸಲಾಗುತ್ತದೆ.

ದೇಶೀಯ ಹಾಗೂ ಅಂತರರಾಷ್ಟ್ರೀಯ ಸ್ಪರ್ಧಾವಳಿಗಳ ಮುಂಬೈನ ಖ್ಯಾತ ಪುರುಷರ ಹಾಗೂ ಮಹಿಳೆಯರ ಕ್ರಿಕೆಟ್ ಆಟಗಾರರು ಕೂಡ ಪ್ರಮುಖ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ಅದ್ಭುತವಾದ ಲೇಸರ್ ಪ್ರದರ್ಶನದ ಜೊತೆಗೆ ಅವಧೂತ್ ಗುಪ್ತೆ ಹಾಗೂ ಅಜಯ್-ಅತುಲ್ ಅವರ ಪ್ರದರ್ಶನಗಳನ್ನು ಪ್ರೇಕ್ಷಕರು ನಿರೀಕ್ಷಿಸಬಹುದು.

ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದ 50ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಈ ಸ್ಮರಣೀಯ ಕ್ಷಣದಲ್ಲಿ ಭಾಗವಹಿಸಲು ನಾನು ಎಲ್ಲ ಕ್ರಿಕೆಟ್ ಅಭಿಮಾನಿಗಳನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ನಮ್ಮ ಕ್ರಿಕೆಟ್ ದಂತಕತೆಯ ನಾಯಕರು ಈ ಆಚರಣೆಯಲ್ಲಿ ನಮ್ಮೊಂದಿಗೆ ಸೇರುತ್ತಾರೆ. ಮುಂಬೈನ ಹೆಮ್ಮೆಯಾಗಿರುವ ವಾಂಖೆಡೆ ಕ್ರೀಡಾಂಗಣದ ಶ್ರೀಮಂತ ಪರಂಪರೆಗೆ ನಾವು ಗೌರವ ಸಲ್ಲಿಸಲಿದ್ದು, ಈ ವಾರ್ಷಿಕೋತ್ಸವವನ್ನು ನಿಜವಾಗಿಯೂ ಅವಿಸ್ಮರಣೀಯವಾಗಿಸೋಣ ಎಂದು ಎಂಸಿಎ ಅಧ್ಯಕ್ಷ ಅಜಿಂಕ್ಯ ನಾಯ್ಕ್ ಹೇಳಿದ್ದಾರೆ.

ಸುವರ್ಣ ವಾರ್ಷಿಕೋತ್ಸವದ ಭಾಗವಾಗಿ ಜ.19ರಂದು ಅಪೆಕ್ಸ್ ಕೌನ್ಸಿಲ್ ಸದಸ್ಯರು ಹಾಗೂ ಎಂಸಿಎ ಪದಾಧಿಕಾರಿಗಳು ಕಾಫಿ ಟೇಬಲ್ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ. ಇದರ ಜೊತೆಗೆ ವಾಂಖೆಡೆ ಕ್ರೀಡಾಂಗಣದ ಪ್ರಸಿದ್ಧ ಇತಿಹಾಸ ಸ್ಮರಿಸಲು ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಗುವುದು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News