ಮೀರತ್: ಗಂಡ, ಹೆಂಡತಿ, 3 ಮಕ್ಕಳ ಭೀಕರ ಹತ್ಯೆ
ಮೀರತ್ : ಉತ್ತರಪ್ರದೇಶದ ಮೀರತ್‌ನಲ್ಲಿ ಮೂವರು ಮಕ್ಕಳು ಸೇರಿದಂತೆ ಕುಟುಂಬವೊಂದರ ಐವರು ಸದಸ್ಯರು ತಮ್ಮ ಮನೆಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಶುಕ್ರವಾರ ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ.
ಗಂಡ ಮತ್ತು ಹೆಂಡತಿಯ ಮೃತದೇಹಗಳು ಬೆಡ್ ಶೀಟ್‌ವೊಂದರಲ್ಲಿ ಸುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಎಂಟು, ನಾಲ್ಕು ಮತ್ತು ಒಂದು ವರ್ಷ ಪ್ರಾಯದ ಅವರ ಮೂವರು ಮಕ್ಕಳ ಶವಗಳನ್ನು ಗೋಣಿಗಳಲ್ಲಿ ಹಾಕಿ ಮಂಚದ ಅಡಿ ಭಾಗದ ಬಾಕ್ಸ್‌ನಲ್ಲಿ ಇಡಲಾಗಿತ್ತು.
ಮೃತರನ್ನು ಮೊಯಿನ್ ಯಾನೆ ಮೊಯಿನುದ್ದೀನ್ (52), ಅವರ ಪತ್ನಿ ಆಸ್ಮಾ (45) ಹಾಗೂ ಅವರ ಪುತ್ರಿಯರಾದ ಅಫ್ಸಾ (8), ಅಝೀಝಾ (4) ಮತ್ತು ಅದೀಬಾ (1) ಎಂಬುದಾಗಿ ಗುರುತಿಸಲಾಗಿದೆ.
ಸಾಮೂಹಿಕ ಹತ್ಯಾಕಾಂಡ ಗುರುವಾರ ರಾತ್ರಿ ಬೆಳಕಿಗೆ ಬಂದಿದೆ. ಆಸ್ಮಾರ ಸಹೋದರ ಶಮೀಮ್ ಗುರುವಾರ ತಡ ರಾತ್ರಿ ಪೊಲೀಸರಿಗೆ ದೂರು ನೀಡಿದ್ದಾರೆ. ಆಸ್ಮಾ ಅವರ ಕಿರಿಯ ನಾದಿನಿ ನಝ್ರಾನಾ ಮತ್ತು ಆಕೆಯ ಇಬ್ಬರು ಸಹೋದರರು ಈ ಹತ್ಯಾಕಾಂಡ ನಡೆಸಿದ್ದಾರೆ ಎಂಬುದಾಗಿ ಅವರು ಆರೋಪಿಸಿದ್ದಾರೆ.