ದುಲೀಪ್ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಏಕೆ ಆಡುತ್ತಿಲ್ಲ? : ಸುನೀಲ್ ಗವಾಸ್ಕರ್
ಹೊಸದಿಲ್ಲಿ : ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರನ್ನು ಮುಂಬರುವ ದುಲೀಪ್ ಟ್ರೋಫಿಗೆ ಆಯ್ಕೆ ಸಮಿತಿಯು ಆಯ್ಕೆ ಮಾಡಿಲ್ಲ. ಹೀಗಾಗಿ ಈ ಇಬ್ಬರು ಆಟಗಾರರು ಹೆಚ್ಚಿನ ಮ್ಯಾಚ್ ಪ್ರಾಕ್ಟೀಸ್ ಇಲ್ಲದೆ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ತೆರಳುವ ಸಾಧ್ಯತೆ ಇದೆ. ಇದು ಭಾರತಕ್ಕೆ ಹಾಗೂ ಇಬ್ಬರು ಹಿರಿಯ ಆಟಗಾರರ ಪಾಲಿಗೆ ಅಂತರರಾಷ್ಟ್ರೀಯ ಟೂರ್ನಿಗೆ ಮೊದಲು ಉತ್ತಮ ವಿಚಾರವಲ್ಲ. ಕೊಹ್ಲಿ ಹಾಗೂ ರೋಹಿತ್ ಅವರು ದುಲೀಪ್ ಟ್ರೋಫಿಯಲ್ಲಿ ಏಕೆ ಆಡುತ್ತಿಲ್ಲ ಎಂದು ಮಿಡ್ ಡೇ ಪತ್ರಿಕೆಯಲ್ಲಿ ಬರೆದಿರುವ ತನ್ನ ಅಂಕಣಬರಹದಲ್ಲಿ ಭಾರತದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಪ್ರಶ್ನಿಸಿದ್ದಾರೆ.
ಪದೇ ಪದೇ ಬೆನ್ನುನೋವಿಗೆ ಒಳಗಾಗುತ್ತಿರುವ ವೇಗದ ಬೌಲರ್ ಜಸ್ಪ್ರಿತ್ ಬುಮ್ರಾರಂತಹ ಆಟಗಾರರನ್ನು ಕೆಲಸದ ಒತ್ತಡ ನಿಭಾಯಿಸುವ ಭಾಗವಾಗಿ ದುಲೀಪ್ ಟ್ರೋಫಿಯಿಂದ ಹೊರಗಿಡಲಾಗಿದೆ ಎಂಬ ವಿಚಾರ ಎಲ್ಲರಿಗೂ ಮನವರಿಕೆಯಾಗುತ್ತದೆ. ಆದರೆ ಕೊಹ್ಲಿ ಹಾಗೂ ರೋಹಿತ್ ಗೆ ವಿಶ್ರಾಂತಿ ನೀಡಿದ್ದು ಯಾಕೆಂದು ಗೊತ್ತಾಗಲಿಲ್ಲ ಎಂದು ಗವಾಸ್ಕರ್ ಹೇಳಿದ್ದಾರೆ.
ಯಾವುದೇ ಕ್ರೀಡೆಯಲ್ಲಿ ಕ್ರೀಡಾಪಟುವಿನ ವಯಸ್ಸು 30ರ ಆಸುಪಾಸಿನಲ್ಲಿದ್ದಾಗ ನಿಯಮಿತ ಸ್ಪರ್ಧಾವಳಿಯು ಅವರಿಗೆ ತಮ್ಮ ಉನ್ನತ ಮಟ್ಟದ ಫಿಟ್ನೆಸ್ ಕಾಯ್ದುಕೊಳ್ಳಲು ನೆರವಾಗುತ್ತದೆ. ದೀರ್ಘ ವಿಶ್ರಾಂತಿ ಪಡೆದರೆ, ಮಾಂಸಖಂಡಗಳು ದುರ್ಬಲವಾಗುತ್ತವೆ. ಮೊದಲಿನ ಉನ್ನತ ಮಟ್ಟವನ್ನು ತಲುಪುವುದು ಕಷ್ಟಕರವಾಗುತ್ತದೆ ಎಂದು ಗವಾಸ್ಕರ್ ಅಭಿಪ್ರಾಯಪಟ್ಟರು.
ಭಾರತವು ಬಾಂಗ್ಲಾದೇಶ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಸೆಪ್ಟಂಬರ್ 19ರಿಂದ ಚೆನ್ನೈನಲ್ಲಿ ಮೊದಲ ಪಂದ್ಯ ಆರಂಭವಾದರೆ, ಸೆಪ್ಟಂಬರ್ 27ರಂದು ಕಾನ್ಪುರದಲ್ಲಿ ಎರಡನೇ ಪಂದ್ಯವು ನಿಗದಿಯಾಗಿದೆ.
ಸೆಪ್ಟಂಬರ್ 5ರಂದು ದುಲೀಪ್ ಟ್ರೋಫಿಯ ಮೂಲಕ ಭಾರತದ 2024-25ರ ದೇಶೀಯ ಕ್ರಿಕೆಟ್ ಋತು ಆರಂಭವಾಗಲಿದೆ. ಸೆಪ್ಟಂಬರ್ 22ರಂದು ಅಂತ್ಯವಾಗಲಿರುವ ಪಂದ್ಯಾವಳಿಯಲ್ಲಿ ಸ್ಪರ್ಧಿಸಲಿರುವ 4 ತಂಡಗಳಲ್ಲಿ ಭಾರತದ ಬಹುತೇಕ ಸ್ಟಾರ್ ಆಟಗಾರರನ್ನು ಆಯ್ಕೆ ಮಾಡಲಾಗಿದೆ.
ಭಾರತದ ಅಂತರರಾಷ್ಟ್ರೀಯ ಅಟಗಾರರಲ್ಲದೆ, ದೇಶೀಯ ಕ್ರಿಕೆಟ್ ನಲ್ಲಿ ಮಿಂಚುತ್ತಿರುವವರು ಹಾಗೂ ಉದಯೋನ್ಮುಖ ಪ್ರತಿಭೆಗಳ ಮಿಶ್ರಣವನ್ನು ಆಯ್ಕೆ ಸಮಿತಿಯು ಸೇರಿಸಿಕೊಂಡಿದೆ. ಆದರೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ,ಜಸ್ಪ್ರಿತ್ ಬುಮ್ರಾ ಹಾಗೂ ಆರ್.ಅಶ್ವಿನ್ ರಂತಹ ಸೀನಿಯರ್ ಆಟಗಾರರಿಗೆ ದುಲೀಪ್ ಟ್ರೋಫಿ ಆಡುವುದರಿಂದ ವಿನಾಯತಿ ನೀಡಲಾಗಿದೆ.
ಜೂನ್ 28ರಂದು ನಡೆದಿದ್ದ ಟಿ20 ವಿಶ್ವಕಪ್ ಹಾಗೂ ಆಗಸ್ಟ್ 7ರಂದು ಶ್ರೀಲಂಕಾದಲ್ಲಿ ನಡೆದಿದ್ದ ಏಕದಿನ ಸರಣಿಯ ಕೊನೆಯ ಪಂದ್ಯದ ನಡುವೆ ರೋಹಿತ್ ಹಾಗೂ ಕೊಹ್ಲಿ ಕೇವಲ 3 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಈ ಇಬ್ಬರು ದಿಗ್ಗಜರು ಬಾಂಗ್ಲಾದೇಶ ವಿರುದ್ಧ ಸ್ವದೇಶದಲ್ಲಿ ನಡೆಯಲಿರುವ ಟೆಸ್ಟ್ ಸರಣಿಗೆ ಯಾವುದೇ ಅಭ್ಯಾಸ ಇಲ್ಲದೆ ತೆರಳುವಂತಾಗಿದೆ.
ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್ , ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್ ಹಾಗೂ ರಿಷಭ್ ಪಂತ್ ಅವರನ್ನು ದುಲೀಪ್ ಟ್ರೋಫಿಗೆ ಆಯ್ಕೆ ಮಾಡಲಾಗಿದೆ. ಆಲ್ ರೌಂಡರ್ಗಳಾದ ರವೀಂದ್ರ ಜಡೇಜ ಹಾಗೂ ಅಕ್ಷರ್ ಪಟೇಲ್, ಸ್ಪಿನ್ನರ್ ಕುಲದೀಪ್ ಯಾದವ್ ಹಾಗೂ ವೇಗದ ಬೌಲರ್ ಮುಹಮ್ಮದ್ ಸಿರಾಜ್ರನ್ನು ದುಲೀಪ್ ಟ್ರೋಫಿ ಪಂದ್ಯಾವಳಿಯ ಮೊದಲ ಸುತ್ತಿಗೆ ಆಯ್ಕೆ ಮಾಡಲಾಗಿದೆ.