ವಿಶ್ವ ದಾಖಲೆಯೊಂದಿಗೆ ಭಾರತದ ಚಿನ್ನದ ಖಾತೆ ತೆರೆದ ಶೂಟರ್ ಗಳು
ಹಾಂಗ್ಝೌ : ಏಶ್ಯನ್ ಗೇಮ್ಸ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತೀಯ ಶೂಟರ್ಗಳು ಟೀಮ್ ವಿಭಾಗದಲ್ಲಿ ಚಿನ್ನದ ಪದಕ ಸಹಿತ ಒಟ್ಟು 3 ಪದಕಗಳನ್ನು ಬಾಚಿಕೊಂಡರು. ಸ್ಪರ್ಧಾವಳಿ ಆರಂಭವಾದ ಎರಡೇ ದಿನಗಳಲ್ಲಿ ಐದು ಪದಕಗಳನ್ನು ಜಯಿಸಿರುವ ಶೂಟರ್ಗಳು ತಮ್ಮ ಪ್ರಾಬಲ್ಯ ಮೆರೆದರು.
ವಿಶ್ವ ಚಾಂಪಿಯನ್ ರುದ್ರಾಂಕ್ಷ್ ಪಾಟೀಲ್ ನೇತೃತ್ವದ ಭಾರತೀಯ 10 ಮೀ. ರೈಫಲ್ ತಂಡವು ಈ ಬಾರಿಯ ಏಶ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ ಮೊತ್ತ ಮೊದಲ ಚಿನ್ನದ ಪದಕ ಗೆದ್ದುಕೊಟ್ಟಿದೆ. ಸೋಮವಾರ ವಿಶ್ವ ದಾಖಲೆಯ ಸ್ಕೋರ್ ಗಳಿಸುವ ಮೂಲಕ ಈ ಸಾಧನೆ ಮಾಡಿದೆ. ರುದ್ರಾಂಕ್ಷ್, ಒಲಿಂಪಿಯನ್ ದಿವ್ಯಾಂಶ್ ಸಿಂಗ್ ಪನ್ವರ್ ಹಾಗೂ ಐಶ್ವರ್ಯಾ ಪ್ರತಾಪ್ ಸಿಂಗ್ ತೋಮರ್ ಅರ್ಹತಾ ಸುತ್ತಿನಲ್ಲಿ ಒಟ್ಟು 1893.7 ಅಂಕ ಗಳಿಸಿದರು.
19ರ ಹರೆಯದ ರುದ್ರಾಂಕ್ಷ್ 632.5 ಅಂಕ, ಐಶ್ವರ್ಯ ಪ್ರತಾಪ್ ಸಿಂಗ್ ತೋಮರ್ 631.6 ಅಂಕ ಹಾಗೂ ದಿವ್ಯಾಂಶ್ ಸಿಂಗ್ 629.6 ಅಂಕ ಗಳಿಸಿ ನೂತನ ವಿಶ್ವ ದಾಖಲೆ ನಿರ್ಮಿಸಿದರು. ದಕ್ಷಿಣ ಕೊರಿಯಾವು 1890.1 ಅಂಕ ಗಳಿಸಿ 2ನೇ ಸ್ಥಾನ ಪಡೆದರೆ, ಚೀನಾ ತಂಡವು ಒಟ್ಟು 1888.2 ಸ್ಕೋರ್ ಮೂಲಕ ಮೂರನೇ ಸ್ಥಾನ ಪಡೆಯಿತು.
ಅತ್ಯಂತ ಪೈಪೋಟಿಯಿಂದ ಕೂಡಿದ್ದ ಸ್ಪರ್ಧೆಯಲ್ಲಿ ಐಶ್ವರ್ಯ ಪ್ರತಾಪ್ ಸಿಂಗ್ ತೋಮರ್ ವೈಯಕ್ತಿಕ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದರು. ಈ ಮೂಲಕ ಗೇಮ್ಸ್ನಲ್ಲಿ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತಕ್ಕೆ 4ನೇ ಪದಕ ಗೆದ್ದುಕೊಟ್ಟರು. ತೋಮರ್ ತನ್ನ ಸಹ ಶೂಟರ್ ರುದ್ರಾಂಕ್ಷ್ರಿಂದ ತೀವ್ರ ಪೈಪೋಟಿ ಎದುರಿಸಿದ್ದು ಅವರು 4ನೇ ಸ್ಥಾನ ಪಡೆದರು.
25 ಮೀ.ರೈಫಲ್ ಟೀಮ್ ಸ್ಪರ್ಧೆಯಲ್ಲಿ ಆದರ್ಶ್ ಸಿಂಗ್, ಅನಿಶ್ ಭನ್ವಾಲಾ ಹಾಗೂ ವಿಜಯವೀರ್ ಸಿಧು ಅವರನ್ನೊಳಗೊಂಡ ತಂಡವು ಇಂಡೋನೇಶ್ಯದೊಂದಿಗೆ ಟೈ-ಬ್ರೇಕರ್ ಸಾಧಿಸಿದ ನಂತರ 1,718 ಅಂಕ ಗಳಿಸಿ ಮೂರನೇ ಸ್ಥಾನ ಪಡೆಯಿತು. 1,765 ಅಂಕ ಗಳಿಸಿದ ಚೀನಾ ಚಿನ್ನದ ಪದಕ ಜಯಿಸಿತು. ದಕ್ಷಿಣ ಕೊರಿಯಾ(1,734 ಅಂಕ)ಬೆಳ್ಳಿ ಜಯಿಸಿತು.
ಟೀಮ್ ವಿಭಾಗದಲ್ಲಿ ಚಿನ್ನ ಗೆದ್ದ ಸಂಭ್ರಮದಲ್ಲಿದ್ದ ಭಾರತ ಶೂಟರ್ಗಳ ತಂಡ ವೈಯಕ್ತಿಕ ವಿಭಾಗದಲ್ಲಿ ನಿರಾಸೆಗೊಂಡಿತು. ಅರ್ಹತಾ ಸುತ್ತಿನಲ್ಲಿ ಭರ್ಜರಿ ಫಾರ್ಮ್ ಪ್ರದರ್ಶಿಸಿದ್ದ ತೋಮರ್ ಹಾಗೂ ರುದ್ರಾಂಕ್ಷ್ ಚಿನ್ನ ಇಲ್ಲವೇ ಬೆಳ್ಳಿ ಪದಕವನ್ನು ಕೂದಲೆಳೆ ಅಂತರದಿಂದ ತಪ್ಪಿಸಿಕೊಂಡರು. 3ನೇ ಸ್ಥಾನಕ್ಕಾಗಿ ನಡೆದ ಶೂಟ್-ಆಫ್ನಲ್ಲಿ 228.8 ಅಂಕ ಗಳಿಸಿದ ತೋಮರ್ ಕಂಚಿನ ಪದಕ ಜಯಿಸಿದರು. ದಕ್ಷಿಣ ಕೊರಿಯಾದ ಪಾರ್ಕ್ ಹಜುನ್ ಹಾಗೂ ಚೀನಾದ ಶೆಂಗ್ ಲಿಹಾವೊ (ವಿಶ್ವ ದಾಖಲೆಯ ಸ್ಕೋರ್ 253.3)ಕ್ರಮವಾಗಿ ಬೆಳ್ಳಿ ಹಾಗೂ ಚಿನ್ನ ಜಯಿಸಿದರು.
ಅರ್ಹತಾ ಸುತ್ತಿನಲ್ಲಿನ ಶ್ರೇಷ್ಠ ಪ್ರದರ್ಶನವನ್ನು ಆಧರಿಸಿ ರುದ್ರಾಂಕ್ಷ್ ಹಾಗೂ ತೋಮರ್ 8 ಶೂಟರ್ಗಳಿದ್ದ ಫೈನಲ್ಗೆ ಅರ್ಹತೆ ಪಡೆದಿದ್ದರು. ಚೀನಾದ ಶೇಂಗ್ ಲಿಯಾವೊ 634.5 ಅಂಕ ಗಳಿಸಿ ಅರ್ಹತಾ ಸುತ್ತಿನಲ್ಲಿ ಮೊದಲ ಸ್ಥಾನ ಪಡೆದರೆ, ರುದ್ರಾಂಕ್ಷ್ ಹಾಗೂ ತೋಮರ್ ಕ್ರಮವಾಗಿ ಮೂರನೇ ಹಾಗೂ 5ನೇ ಸ್ಥಾನ ಪಡೆದರು.