ಎರಡು ದಶಕಗಳ ವೃತ್ತಿಜೀವನಕ್ಕೆ ತೆರೆ ಎಳೆದ ಸ್ಪೇನ್ ಫುಟ್ಬಾಲ್ ಸ್ಟಾರ್ ಇನಿಯೆಸ್ಟಾ

Update: 2024-10-08 15:09 GMT

ಆ್ಯಂಡ್ರೆಸ್ ಇನಿಯೆಸ್ಟಾ |  PC : X 

ಬಾರ್ಸಿಲೋನ: ಸ್ಪೇನ್ ಫುಟ್ಬಾಲ್ ತಂಡದ 2010ರ ವಿಶ್ವಕಪ್ ಗೆಲುವಿನ ರೂವಾರಿ, ಬಾರ್ಸಿಲೋನದ ದಂತಕತೆ ಆ್ಯಂಡ್ರೆಸ್ ಇನಿಯೆಸ್ಟಾ ಸೋಮವಾರದಂದು ವೃತ್ತಿಪರ ಫುಟ್ಬಾಲ್‌ನಿಂದ ನಿವೃತ್ತಿಯಾದರು. ಈ ಮೂಲಕ ಎರಡು ದಶಕಗಳ ಸುದೀರ್ಘ ವೃತ್ತಿಜೀವನಕ್ಕೆ ತೆರೆ ಎಳೆದರು.

ಸ್ಪೇನ್ ಆಟಗಾರ ಇನಿಯೆಸ್ಟಾ ಕಳೆದ ವಾರ ಸಾಮಾಜಿಕ ಮಾಧ್ಯಮದ ಮೂಲಕ ಫುಟ್ಬಾಲ್‌ಗೆ ಗುಡ್‌ಬೈ ಹೇಳುವ ಸುಳಿವು ನೀಡಿದ್ದರು.

18 ವರ್ಷಗಳ ಕಾಲ ಸ್ಪೇನ್ ಕ್ಲಬ್‌ನಲ್ಲಿ ಆಡಿದ್ದ ಇನಿಯೆಸ್ಟಾ ಅವರು 8 ಹಾಗೂ 24 ಸಂಖ್ಯೆಯ ಜೆರ್ಸಿಯನ್ನು ಧರಿಸಿದ್ದರು.

ತನ್ನ ಯಶಸ್ವಿ ಫುಟ್ಬಾಲ್ ಕ್ಲಬ್ ವೃತ್ತಿಜೀವನದಲ್ಲಿ ಇನಿಯೆಸ್ಟಾ ಅವರು ಬಾರ್ಸಿಲೋನದ ಪರ 674 ಪಂದ್ಯಗಳನ್ನು ಆಡಿದ್ದು, 57 ಗೋಲುಗಳನ್ನು ಗಳಿಸಿದ್ದರು. 136 ಅಸಿಸ್ಟ್ ಮಾಡಿದ್ದರು. ಈ ವೇಳೆ ಅವರು ನಾಲ್ಕು ಚಾಂಪಿಯನ್ಸ್ ಲೀಗ್‌ಗಳು, ಮೂರು ಫಿಫಾ ಕ್ಲಬ್ ವಿಶ್ವಕಪ್‌ಗಳು, 9 ಲೀಗ್ ಪ್ರಶಸ್ತಿಗಳು, ಮೂರು ಯುರೋಪಿಯನ್ ಸೂಪರ್ ಕಪ್‌ಗಳು, ಆರು ಕೋಪಾ ಡೆಲ್ ರೇ ಹಾಗೂ 7 ಸ್ಪ್ಯಾನಿಶ್ ಸೂಪರ್ ಕಪ್‌ಗಳನ್ನು ಜಯಿಸಿದ್ದರು.

ವಿಶ್ವ ಫುಟ್ಬಾಲ್‌ನಲ್ಲಿ ಸ್ಪೇನ್ ತಂಡ ಪ್ರಾಬಲ್ಯ ಸಾಧಿಸಲು ಇನಿಯೆಸ್ಟಾ ಸಾಕಷ್ಟು ನೆರವಾಗಿದ್ದರು.

ನೆದರ್‌ಲ್ಯಾಂಡ್ಸ್ ವಿರುದ್ಧ 2010ರ ವಿಶ್ವಕಪ್ ಫೈನಲ್‌ನ ಹೆಚ್ಚುವರಿ ಸಮಯದಲ್ಲಿ ಗೋಲು ಗಳಿಸಿದ ಇನಿಯೆಸ್ಟಾ ಅವರು ಸ್ಪೇನ್ ತಂಡ ಏಕೈಕ ಫಿಫಾ ವಿಶ್ವಕಪ್ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. 2008 ಹಾಗೂ 2012ರಲ್ಲಿ ಯುಇಎಫ್‌ಎ ಯುರೋಪಿಯನ್ ಚಾಂಪಿಯನ್‌ಶಿಪ್ ಗೆದ್ದ ಸ್ಪೇನ್ ತಂಡವನ್ನು ಪ್ರತಿನಿಧಿಸಿದ್ದರು.

40ರ ಹರೆಯದ ಮಿಡ್‌ಫೀಲ್ಡರ್ ಇನಿಯೆಸ್ಟಾ ಅವರು ಇತ್ತೀಚೆಗೆ ಸ್ಪೇನ್‌ನಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಾನು ಮುಂದಿನ ದಿನಗಳಲ್ಲಿ ತರಬೇತುದಾರನಾಗಿದ್ದು, ಲೆಜೆಂಡ್ ಆಗಿ ಕ್ಲಬ್‌ಗೆ ವಾಪಸಾಗುವ ವಿಶ್ವಾಸವಿದೆ ಎಂದಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News