ಐಪಿಎಲ್ | ಕೆ.ಎಲ್.ರಾಹುಲ್ ಗಾಗಿ ಮೂರು ತಂಡಗಳ ಪೈಪೋಟಿ?
ಹೊಸದಿಲ್ಲಿ: ಲಕ್ನೊ ಸೂಪರ್ ಜಯಂಟ್ಸ್ ತಂಡವನ್ನು ಎರಡು ಬಾರಿ ಪ್ಲೇ ಆಫ್ ಗೆ ತಲುಪಲು ನೇತೃತ್ವವಹಿಸಿ ಹಿಂದಿನ 3 ವರ್ಷ ಸಾಧಾರಣ ಯಶಸ್ಸು ಕಂಡಿರುವ ಕೆ.ಎಲ್.ರಾಹುಲ್ ಈ ವರ್ಷದ ಮೆಗಾ ಹರಾಜಿಗಿಂತ ಮೊದಲು ಲಕ್ನೊ ಫ್ರಾಂಚೈಸಿಯಿಂದ ಬೇರ್ಪಟ್ಟಿದ್ದಾರೆ.
ಹರಾಜಿನ ಕಣದಲ್ಲಿರುವ ವಿಕೆಟ್ಕೀಪರ್-ಬ್ಯಾಟರ್ ರಾಹುಲ್ ಅವರು ಎಲ್ಲರ ಗಮನ ಸೆಳೆದಿದ್ದಾರೆ. ಮುಂಬರುವ ಐಪಿಎಲ್ ಮೆಗಾ ಹರಾಜಿನಲ್ಲಿ ರಾಹುಲ್ರನ್ನು ಸೆಳೆಯಲು ಪ್ರಯತ್ನಿಸುತ್ತಿರುವ ಮೂರು ತಂಡಗಳತ್ತ ಒಂದು ನೋಟ.
►ರಾಯಲ್ ಚಾಲೆಂಜರ್ಸ್ ಬೆಂಗಳೂರು
ಪ್ರತೀ ತಂಡವು ಹರಾಜಿಗೆ ಮುಂಚಿತವಾಗಿ ಪಟ್ಟಿಯನ್ನು ಬಿಡುಗಡೆ ಮಾಡಿದರೆ ಕೆ.ಎಲ್.ರಾಹುಲ್ ಉನ್ನತ ಸ್ಥಾನ ಪಡೆಯುವ ಸಾಧ್ಯತೆಯಿದೆ. ದಿನೇಶ್ ಕಾರ್ತಿಕ್ ನಿವೃತ್ತಿಯಾಗಿರುವ ಕಾರಣ ಆರ್ಸಿಬಿಗೆ ವಿಕೆಟ್ ಕೀಪರ್ನ ಅಗತ್ಯವಿದೆ. ಸ್ಥಳೀಯ ಪ್ರತಿಭೆಗಳು ಈ ಪಾತ್ರಕ್ಕೆ ಸೂಕ್ತವಾಗುತ್ತಾರೆ.
ರಾಹುಲ್ಗೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಿರುವ ಅಪಾರ ಅನುಭವವಿದೆ. ಆರ್ಸಿಬಿಗೆ ಉತ್ತಮ ಆಯ್ಕೆಯಾಗಬಹುದು.
►ಕೋಲ್ಕತಾ ನೈಟ್ ರೈಡರ್ಸ್
ಶ್ರೇಯಸ್ ಅಯ್ಯರ್ ನಿರ್ಗಮನದೊಂದಿಗೆ ಕೋಲ್ಕತಾ ನೈಟ್ ರೈಡರ್ಸ್ನಲ್ಲಿ ದೊಡ್ಡ ಹುದ್ದೆ ಖಾಲಿ ಇದೆ. ಕಳೆದ ಕೆಲವು ಋತುಗಳಲ್ಲಿ ಆರಂಭಿಕ ಆಟಗಾರನಾಗಿರುವ ರಾಹುಲ್ ಈ ಪಾತ್ರಕ್ಕೆ ಉತ್ತಮ ಅಭ್ಯರ್ಥಿಯಾಗಿದ್ದಾರೆ. ಕೆಕೆಆರ್ ತಂಡವು ಅಗ್ರ ಸರದಿಯಲ್ಲಿ ಸುನೀಲ್ ನರೇನ್ರೊಂದಿಗೆ ರಾಹುಲ್ರನ್ನು ಕಣಕ್ಕಿಳಿಸಿ ಕಳೆದ ವರ್ಷದ ಪ್ರಶಸ್ತಿ ಗೆಲುವಿನ ಅಭಿಯಾನವನ್ನು ಕಾಯ್ದುಕೊಳ್ಳುವ ಸಾಧ್ಯತೆಯಿದೆ.
►ಡೆಲ್ಲಿ ಕ್ಯಾಪಿಟಲ್ಸ್
ಡೆಲ್ಲಿ ಕ್ಯಾಪಿಟಲ್ಸ್ ತಂಡವು ತನ್ನ ಮಾಜಿ ನಾಯಕ ರಿಷಭ್ ಪಂತ್ರನ್ನು ತಂಡದಲ್ಲಿ ಉಳಿಸಿಕೊಳ್ಳದೆ ಕೈಬಿಟ್ಟಿದೆ. ಹೀಗಾಗಿ ಪಂತ್ರಿಂದ ಪ್ರಮುಖ ಸ್ಥಾನ ತೆರವಾಗಿದೆ. ಮೊದಲ ಆಯ್ಕೆಯ ವಿಕೆಟ್ಕೀಪರ್ ಅಭಿಷೇಕ್ ಪೊರೆಲ್ರನ್ನು ಡೆಲ್ಲಿ ತನ್ನಲ್ಲೇ ಉಳಿಸಿಕೊಂಡಿದ್ದರೂ ಕೆ.ಎಲ್.ರಾಹುಲ್ ಅವರು ಪಂತ್ ಸ್ಥಾನ ತುಂಬುವ ಉತ್ತಮ ಆಟಗಾರನಾಗಿದ್ದಾರೆ.