ಎಟಿಪಿ ಫೈನಲ್ಸ್-2024 | ಜನ್ನಿಕ್ ಸಿನ್ನರ್ ಚಾಂಪಿಯನ್

Update: 2024-11-18 15:14 GMT

ಜನ್ನಿಕ್ ಸಿನ್ನರ್ |  PC : X  \ @janniksin

ಟರಿನ್(ಇಟಲಿ): ಟೇಲರ್ ಫ್ರಿಟ್ಝ್ರನ್ನು 6-4, 6-4 ನೇರ ಸೆಟ್ಗಳ ಅಂತರದಿಂದ ಮಣಿಸಿರುವ ಜನ್ನಿಕ್ ಸಿನ್ನರ್ ಎಟಿಪಿ ಫೈನಲ್ಸ್ ಪ್ರಶಸ್ತಿಯನ್ನು ಎತ್ತಿ ಹಿಡಿದಿದ್ದಾರೆ. ವರ್ಷಾಂತ್ಯದಲ್ಲಿ ನಡೆಯುವ ಟೂರ್ನಿಯಲ್ಲಿ ಇದೇ ಮೊದಲ ಬಾರಿ ಸಿನ್ನರ್ ಪ್ರಶಸ್ತಿ ಗೆದ್ದಿದ್ದಾರೆ.

ಇಟಲಿಯ ಸಿನ್ನರ್ ತವರು ನೆಲದಲ್ಲಿ ಜಯ ಸಾಧಿಸಿದ್ದಾರೆ. 23ರ ಹರೆಯದ ಸಿನ್ನರ್ ಈ ವರ್ಷ ಆಸ್ಟ್ರೇಲಿಯನ್ ಓಪನ್ ಹಾಗೂ ಯು.ಎಸ್. ಓಪನ್ ಸಹಿತ 8 ಪಂದ್ಯಾವಳಿಗಳನ್ನು ಗೆದ್ದಿದ್ದಾರೆ.

ಇದು ಅದ್ಭುತ. ಇಟಲಿಯಲ್ಲಿ ಇದು ನನ್ನ ಮೊದಲ ಪ್ರಶಸ್ತಿಯಾಗಿದೆ. ಹೀಗಾಗಿ ನನಗಿದು ಅಮೂಲ್ಯ. ಇದು ನನ್ನ ಪಾಲಿಗೆ ತುಂಬಾ ವಿಶೇಷವಾದುದು. ಪ್ರತೀ ಎದುರಾಳಿಗಳ ಎದುರು ಸಾಧ್ಯವಾದಷ್ಟು ಶ್ರೇಷ್ಠ ಟೆನಿಸ್ ಆಡಲು ಯತ್ನಿಸಿದ್ದೇನೆ. ಇದೊಂದು ಉನ್ನತ ಮಟ್ಟದ ಟೂರ್ನಿಯಾಗಿದೆ ಎಂದು ಸಿನ್ನರ್ ಹೇಳಿದ್ದಾರೆ.

ವಿಶ್ವದ ನಂ.1 ಆಟಗಾರ ಸಿನ್ನರ್ ಮತ್ತೊಮ್ಮೆ ಫ್ರಿಟ್ಝ್ ವಿರುದ್ಧ ನೇರ ಸೆಟ್ಗಳಿಂದ ಜಯ ಸಾಧಿಸಿದರು. ಗ್ರೂಪ್ ಹಂತದಲ್ಲಿ ಹಾಗೂ ಸೆಪ್ಟಂಬರ್ ನಲ್ಲಿ ನಡೆದಿದ್ದ ಯು.ಎಸ್. ಓಪನ್ ಫೈನಲ್ನಲ್ಲೂ ಕೂಡ ಫ್ರಿಟ್ಝ್ಗೆ ಸೋಲುಣಿಸಿದ್ದರು.

ಸಿನ್ನರ್ ಅವರು ಎಟಿಪಿ ಫೈನಲ್ಸ್ ಜಯಿಸಿರುವ ಇಟಲಿಯ ಮೊದಲ ಆಟಗಾರರಾಗಿದ್ದಾರೆ. ಎಟಿಪಿಯ ವರ್ಷಾಂತ್ಯದ ರ‍್ಯಾಂಕಿಂಗ್ನಲ್ಲಿ ಅಗ್ರ ಸ್ಥಾನವನ್ನು ಪಡೆದ ಇಟಲಿಯ ಮೊದಲ ಆಟಗಾರ ಎನಿಸಿಕೊಂಡ ಕೆಲವೇ ದಿನಗಳ ನಂತರ ಈ ಸಾಧನೆ ಮಾಡಿದ್ದಾರೆ.

ಈ ವರ್ಷ 70ನೇ ಗೆಲುವು ದಾಖಲಿಸಿರುವ ಸಿನ್ನರ್ 1986ರ ನಂತರ ಒಂದೂ ಸೆಟ್ಟನ್ನು ಸೋಲದೆ ಟೂರ್ನಮೆಂಟ್ ಗೆದ್ದಿರುವ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. 1986ರಲ್ಲಿ ಇವಾನ್ ಲೆಂಡ್ಲ್ ಈ ಸಾಧನೆ ಮಾಡಿದ್ದರು.

ಫ್ರಿಟ್ಝ್ 1999ರ ನಂತರ ಎಟಿಪಿ ಫೈನಲ್ಸ್ ಜಯಿಸಿದ ಅಮೆರಿಕದ ಮೊದಲ ಆಟಗಾರ ಎನಿಸಿಕೊಳ್ಳುವುದರಿಂದ ವಂಚಿತರಾದರು. 1999ರಲ್ಲಿ ಪೀಟ್ ಸಾಂಪ್ರಾಸ್ ಈ ಸಾಧನೆ ಮಾಡಿದ್ದರು. ಸೋಮವಾರ ಬಿಡುಗಡೆಯಾಗಿರುವ ಎಟಿಪಿ ರ‍್ಯಾಂಕಿಂಗ್ನಲ್ಲಿ 4ನೇ ಸ್ಥಾನಕ್ಕೇರಿ ಜೀವನಶ್ರೇಷ್ಠ ಸಾಧನೆ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News