ರೋಹಿತ್ ಶರ್ಮಾ, ಶುಭಮನ್ ಗಿಲ್ ಮೊದಲ ಟೆಸ್ಟ್‌ಗೆ ಅಲಭ್ಯ

Update: 2024-11-17 16:56 GMT

 ರೋಹಿತ್ ಶರ್ಮಾ ,  ಶುಭಮನ್ ಗಿಲ್ | PTI

ಮುಂಬೈ, : ನಾಯಕ ರೋಹಿತ್ ಶರ್ಮಾ ಹಾಗೂ 3ನೇ ಕ್ರಮಾಂಕದ ಬ್ಯಾಟರ್ ಶುಭಮನ್ ಗಿಲ್(ಬೆರಳಿಗೆ ಗಾಯ)ಆಸ್ಟ್ರೇಲಿಯ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಲಭ್ಯವಿರದ ಕಾರಣ ಭಾರತ ಎ ತಂಡದೊಂದಿಗೆ ಎರಡು ಚತುರ್ದಿನ ಪಂದ್ಯಗಳನ್ನಾಡಲು ಆಸ್ಟ್ರೇಲಿಯಕ್ಕೆ ಪ್ರವಾಸಕೈಗೊಂಡಿದ್ದ ಕರ್ನಾಟಕದ ಅಗ್ರ ಸರದಿಯ ಬ್ಯಾಟರ್ ದೇವದತ್ತ ಪಡಿಕ್ಕಲ್‌ಗೆ ಅಲ್ಲೇ ಉಳಿದುಕೊಳ್ಳಲು ಬಿಸಿಸಿಐ ರವಿವಾರ ಸೂಚಿಸಿದೆ.

ರೋಹಿತ್ ಅನುಪಸ್ಥಿತಿಯಲ್ಲಿ ವೇಗದ ಬೌಲರ್ ಹಾಗೂ ಉಪ ನಾಯಕ ಜಸ್‌ಪ್ರಿತ್ ಬುಮ್ರಾ ಭಾರತ ಕ್ರಿಕೆಟ್ ತಂಡ ನಾಯಕತ್ವವಹಿಸಿಕೊಳ್ಳಲಿದ್ದಾರೆ.

ಬುಮ್ರಾ ಈ ಹಿಂದೆ 2022ರಲ್ಲಿ ಇಂಗ್ಲೆಂಡ್ ವಿರುದ್ಧ ಎಜ್‌ಬಾಸ್ಟನ್‌ನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಭಾರತದ ನಾಯಕತ್ವವಹಿಸಿದ್ದರು. ಆ ಪಂದ್ಯವನ್ನು ಭಾರತವು 7 ವಿಕೆಟ್‌ಗಳಿಂದ ಸೋತಿತ್ತು.

ಪರ್ತ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕಾಗಿ ರೋಹಿತ್ ಸ್ಥಾನಕ್ಕೆ ಪಡಿಕ್ಕಲ್‌ರನ್ನು 18 ಸದಸ್ಯರ ಭಾರತ ತಂಡಕ್ಕೆ ಸೇರಿಸಲಾಗಿದೆ.

ಇತ್ತೀಚೆಗೆ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕರ್ನಾಟಕ ತಂಡದಲ್ಲಿ ಸ್ಥಾನ ಪಡೆದಿರುವ ಎಡಗೈ ಬ್ಯಾಟರ್ ಪಡಿಕ್ಕಲ್ ಆಸ್ಟ್ರೇಲಿಯ ಪ್ರವಾಸದ ವೇಳೆ ಭಾರತ ಎ ತಂಡದ ಪರ 36, 88, 26,1 ರನ್ ಗಳಿಸಿದ್ದರು.

ಈ ಪ್ರದರ್ಶನ ಉತ್ತಮವಾಗಿರದಿದ್ದರೂ ಆಸ್ಟ್ರೇಲಿಯ ವಾತಾರಣದಲ್ಲಿ ಆಡಿ ಅನುಭವ ಹೊಂದಿರುವ ಕಾರಣಕ್ಕೆ ಪಡಿಕ್ಕಲ್‌ರನ್ನು ಆಯ್ಕೆ ಮಾಡಲಾಗಿದೆ. ಪಡಿಕ್ಕಲ್ ಧರ್ಮಶಾಲಾದಲ್ಲಿ ಈ ವರ್ಷಾರಂಭದಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟಿಗೆ ಕಾಲಿಟ್ಟಿದ್ದರು. ಆಗ ಅವರು 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 65 ರನ್ ಗಳಿಸಿದ್ದರು.

 ಹರ್ಷಿತ್ ರಾಣಾ ಟೆಸ್ಟ್ ಕ್ರಿಕೆಟಿಗೆ ಪಾದಾರ್ಪಣೆ ಸಾಧ್ಯತೆ

ದಿಲ್ಲಿ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ವೇಗಿ ಹರ್ಷಿತ್ ರಾಣಾ ಪರ್ತ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟಿಗೆ ಕಾಲಿಡುವ ಉತ್ತಮ ಅವಕಾಶವಿದೆ ಎಂದು ಮೂಲಗಳು ತಿಳಿಸಿವೆ.

ರಾಣಾ ಇನ್ನಷ್ಟೇ ಭಾರತದ ಪರ ಮೊದಲ ಪಂದ್ಯ ಆಡಬೇಕಾಗಿದೆ. ಪರ್ತ್‌ನಲ್ಲಿ ಇತ್ತೀಚೆಗೆ ನಡೆದಿರುವ ಅಭ್ಯಾಸ ಪಂದ್ಯದಲ್ಲಿ ರಾಣಾ ಉತ್ತಮ ಪ್ರದರ್ಶನ ನೀಡಿದ್ದು, ಅವರು ಪರ್ತ್‌ನಲ್ಲಿ ಆಡುವ ಹೆಚ್ಚಿನ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ರಾಣಾ ಈ ತನಕ 10 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. 24ರ ಸರಾಸರಿಯಲ್ಲಿ 43 ವಿಕೆಟ್‌ಗಳನ್ನು ಪಡೆದಿದ್ದಾರೆ. ಇನಿಂಗ್ಸ್‌ವೊಂದರಲ್ಲಿ 45 ರನ್‌ಗೆ 7 ವಿಕೆಟ್‌ಗಳನ್ನು ಪಡೆದು ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ.

ನ್ಯೂಝಿಲ್ಯಾಂಡ್ ವಿರುದ್ಧ ಸ್ವದೇಶದಲ್ಲಿ ನಡೆದಿರುವ ಟೆಸ್ಟ್ ಸರಣಿಯ ವೇಳೆ 22ರ ಹರೆಯದ ರಾಣಾರನ್ನು ನೆಟ್ ಬೌಲರ್ ಆಗಿ ಸೇರಿಸಿಕೊಳ್ಳಲಾಗಿತ್ತು.

ಮುಂಬೈ ಟೆಸ್ಟ್‌ಗಿಂತ ಮೊದಲು ವಾಂಖೆಡೆ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾಕ್ಕೆ ನೆಟ್‌ನಲ್ಲಿ ಬೌಲಿಂಗ್ ಮಾಡಲು ರಾಣಾರನ್ನು ಕರೆಸಲಾಗಿತ್ತು.

ಯುವ ವೇಗಿ ರಾಣಾ ಐಪಿಎಲ್‌ನಲ್ಲಿ ಕೆಕೆಆರ್ ಪರ 13 ಪಂದ್ಯಗಳಲ್ಲಿ 19 ವಿಕೆಟ್‌ಗಳನ್ನು ಉರುಳಿಸಿದ್ದರು. 3ಕ್ಕೆ 24 ಶ್ರೇಷ್ಠ ಬೌಲಿಂಗ್ ಆಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News