6 ಸಂಸದೀಯ ಕಾರ್ಯದರ್ಶಿಗಳ ನೇಮಕಾತಿ ರದ್ದು | ಸುಪ್ರೀಂ ಮೆಟ್ಟಿಲೇರಿದ ಹಿಮಾಚಲ ಪ್ರದೇಶ ಸರಕಾರ
ಹೊಸದಿಲ್ಲಿ : ಆರು ಸಂಸದೀಯ ಕಾರ್ಯದರ್ಶಿಗಳ ನೇಮಕಾತಿಯನ್ನು ಉಚ್ಚ ನ್ಯಾಯಾಲಯ ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಹಿಮಾಚಲಪ್ರದೇಶ ಸರಕಾರ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದೆ.
ಸುಖ್ವಿಂದರ್ ಸಿಂಗ್ ಸುಖು ನೇತೃತ್ವದ ಹಿಮಾಚಲಪ್ರದೇಶ ಸರಕಾರ ಆರು ಮುಖ್ಯ ಸಂಸದೀಯ ಕಾರ್ಯದರ್ಶಿಗಳನ್ನು ನೇಮಕ ಮಾಡಿರುವುದನ್ನು ಹಿಮಾಚಲಪ್ರದೇಶ ಉಚ್ಚ ನ್ಯಾಯಾಲಯ ನವೆಂಬರ್ 13ರಂದು ರದ್ದುಗೊಳಿಸಿದೆ. ಅಲ್ಲದೆ, ನೇಮಕಾತಿ ಅಸಿಂಧು ಎಂದು ಹೇಳಿದೆ.
ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಮೇಲ್ಮನವಿಯಲ್ಲಿ ಹಿಮಾಚಲಪ್ರದೇಶ ಸರಕಾರ, ಉಚ್ಚ ನ್ಯಾಯಾಲಯದ ಆದೇಶ ಕಾನೂನು ದೃಷ್ಟಿಯಲ್ಲಿ ಕೆಟ್ಟದು ಎಂದು ಹೇಳಿದೆ. ಅಲ್ಲದೆ, ಉಚ್ಚ ನ್ಯಾಯಾಲಯದ ಆದೇಶಕ್ಕೆ ತಡೆ ನೀಡುವಂತೆ ಕೋರಿದೆ.
ಸುಖ್ವಿಂದರ್ ಸಿಂಗ್ ಸುಖು ಅವರು ಆರ್ಕಿ ಕ್ಷೇತ್ರದ ಶಾಸಕ ಸಂಜಯ್ ಅವಸ್ಥಿ, ಕುಲ್ಲುನ ಸುಂದರ್ ಸಿಂಗ್, ಡೂನ್‌ನ ರಾಮ್ ಕುಮಾರ್, ರೋಹ್ರುನ ಮೋಹನ್ ಲಾಲ್ ಬರಾಕ್ತಾ, ಪಾಲಂಪುರದ ಆಶಿಶ್ ಬುತೈಲ್ ಹಾಗೂ ಬೈಜ್ನಾಥ್‌ನ ಕಿಶೋರಿ ಲಾಲ್ ಅವರನ್ನು 2023 ಜನವರಿ 8ರಂದು ಆರು ಮುಖ್ಯ ಸಂಸದೀಯ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಿದ್ದರು.
ಈ ನೇಮಕಾತಿಯನ್ನು ರದ್ದುಗೊಳಿಸಿದ ಉಚ್ಚ ನ್ಯಾಯಾಲಯ ಆರು ಮುಖ್ಯ ಸಂಸದೀಯ ಕಾರ್ಯದರ್ಶಿಗಳ ಸೌಲಭ್ಯಗಳನ್ನು ಕೂಡಲೇ ಹಿಂಪಡೆಯುವಂತೆ ಆದೇಶಿಸಿತ್ತು.