'ಮುಹೂರ್ತ'ಕ್ಕೆ ಸರಿಯಾಗಿ ವರನನ್ನು ಕರೆತಂದ ರೈಲು!
ಕೋಲ್ಕತ್ತಾ/ಗುವಾಹಟಿ : ಸಿನಿಮಾವೊಂದರ ಕ್ಲೈಮ್ಯಾಕ್ಸ್ ಗೆ ವಸ್ತುವಾಗಬಲ್ಲಂಥ ಘಟನೆಯೊಂದು ಹೌರಾ ರೈಲ್ವೆ ನಿಲ್ದಾಣದಲ್ಲಿ ನಡೆದಿದ್ದು, ತಾನು ಪ್ರೀತಿಸಿದ ಯುವತಿಯನ್ನು ವರಿಸಲು ಮದುವೆ ಮಂಟಪಕ್ಕೆ ತೆರಳುತ್ತಿದ್ದ ವರ ಹಾಗೂ ಆತನ ಸಂಬಂಧಿಕರನ್ನು ಸೂಕ್ತ ಸಮಯದಲ್ಲಿ ತಲುಪಲು ನೆರವಿನ ಹಸ್ತ ಚಾಚುವ ಮೂಲಕ ರೈಲ್ವೆ ಇಲಾಖೆ ಸಹಕರಿಸಿರುವ ಘಟನೆ ನಡೆದಿದೆ.
ಐಐಟಿ ಗುವಾಹಟಿಯಿಂದ ಪಿಎಚ್ಡಿ ಪದವಿ ಪಡೆದಿರುವ 30 ವರ್ಷದ ಚಂದ್ರಶೇಖರ್ ವಾಘ್ ಎಂಬ ಯುವಕ ತನ್ನೊಂದಿಗೆ ವ್ಯಾಸಂಗ ಮಾಡುತ್ತಿದ್ದ ಯುವತಿಯೋರ್ವಳನ್ನು ಪ್ರೀತಿಸಿದ್ದರು. ಅವರಿಬ್ಬರ ವಿವಾಹ ಕಾರ್ಯಕ್ರಮವು ಗುವಾಹಟಿಯಲ್ಲಿ ನಿಗದಿಯಾಗಿತ್ತು.
ವಿವಾಹ ಕಾರ್ಯಕ್ರಮಕ್ಕೆ ತೆರಳಲು ಮುಂಬೈನಿಂದ ಗೀತಾಂಜಲಿ ಎಕ್ಸ್ ಪ್ರೆಸ್ ರೈಲಿನಲ್ಲಿ ಹೊರಟಿದ್ದ ವರ ಚಂದ್ರಶೇಖರ್ ವಾಘ್ ಹಾಗೂ ಅವರ ಸಂಬಂಧಿಕರಿಗೆ ಹೌರಾ ತಲುಪುವುದು ವಿಳಂಬವಾಗಿ, ಸಂಪರ್ಕ ರೈಲು ಸರಾಯಿಘಾಟ್ ಎಕ್ಸ್ ಪ್ರೆಸ್ ತಪ್ಪಿ ಹೋಗಬಹುದು ಎಂಬ ಚಡಪಡಿಕೆ ಪ್ರಾರಂಭವಾಗಿದೆ. ಈ ವೇಳೆ ವಾಘ್ ರೈಲ್ವೆ ಇಲಾಖೆಯ ಎಕ್ಸ್ ಖಾತೆಯಲ್ಲಿ ಕಾಮೆಂಟ್ ಒಂದನ್ನು ಹಾಕಿ, ತಮಗೆ ನೆರವು ನೀಡುವಂತೆ ಮನವಿ ಮಾಡಿದ್ದಾರೆ.
ವರ ಚಂದ್ರಶೇಖರ್ ವಾಘ್ ಮತ್ತು ಸಂಬಂಧಿಕರು ಪ್ರಯಾಣಿಸುತ್ತಿದ್ದ ಗೀತಾಂಜಲಿ ಎಕ್ಸ್ ಪ್ರೆಸ್ ಶುಕ್ರವಾರ ಮಧ್ಯಾಹ್ನ 1.05 ಗಂಟೆ ವೇಳೆಗೆ ಹೌರಾ ರೈಲ್ವೆ ನಿಲ್ದಾಣ ತಲುಪಬೇಕಿತ್ತು. ಹಾಗೆಯೇ ಸರಾಯಿಘಾಟ್ ಎಕ್ಸ್ ಪ್ರೆಸ್ ರೈಲು 4.05 ಗಂಟೆಗೆ ಹೌರಾ ರೈಲು ನಿಲ್ದಾಣದಿಂದ ನಿರ್ಗಮಿಸಬೇಕಿತ್ತು.
ಚಂದ್ರಶೇಖರ್ ವಾಘ್ ರ ಎಕ್ಸ್ ಪೋಸ್ಟ್ ಹಿನ್ನೆಲೆಯಲ್ಲಿ, ಸಾಧ್ಯವಾದ ನೆರವು ನೀಡಿ ಎಂದು ಹೌರಾ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಗೆ ಉನ್ನತ ಅಧಿಕಾರಿಗಳಿಂದ ತುರ್ತು ಸಂದೇಶ ಬಂದಿತು ಎಂದು ಪೂರ್ವ ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದರ ಬೆನ್ನಿಗೇ, ಸರಾಯಿಘಾಟ್ ಎಕ್ಸ್ ಪ್ರೆಸ್ ರೈಲು ನಿರ್ಗಮನವನ್ನು ವಿಳಂಬಗೊಳಿಸಲು ಹಾಗೂ ಗೀತಾಂಜಲಿ ಎಕ್ಸ್ ಪ್ರೆಸ್ ರೈಲು ಕ್ಷಿಪ್ರವಾಗಿ ಹೌರಾ ರೈಲು ನಿಲ್ದಾಣಕ್ಕೆ ಆಗಮಿಸುವುದನ್ನು ಖಾತರಿ ಪಡಿಸಲು ರೈಲ್ವೆ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಗೀತಾಂಜಲಿ ಎಕ್ಸ್ ಪ್ರೆಸ್ ರೈಲು ಸಂಜೆ 4.08 ಗಂಟೆಗೆ ಹೌರಾಗೆ ಆಗಮಿಸಿದ್ದು, ರೈಲ್ವೆ ಅಧಿಕಾರಿಗಳು ವರನ ಕಡೆಯವರು ಕ್ಷಿಪ್ರವಾಗಿ ಪ್ಲಾಟ್ ಫಾರ್ಮ್ ಸಂಖ್ಯೆ 9ರಿಂದ 24ಕ್ಕೆ ತಲುಪಲು ಬ್ಯಾಟರಿ ಚಾಲಿತ ವಾಹನದ ವ್ಯವಸ್ಥೆಗೊಳಿಸಿದ್ದಾರೆ.
ನಂತರ ವರ ಹಾಗೂ ಅವರ ಸಂಬಂಧಿಕರು ಸಮಾಧಾನದ ನಿಟ್ಟುಸಿರಿನೊಂದಿಗೆ ಕೆಲವು ನಿಮಿಷಗಳ ವಿಳಂಬದ ನಂತರ ಗುವಾಹಟಿಯತ್ತ ಪ್ರಯಾಣ ಬೆಳೆಸಿದ್ದಾರೆ.
ಸಮಯಕ್ಕೆ ಸರಿಯಾಗಿ ವಿವಾಹ ಸ್ಥಳಕ್ಕೆ ತಲುಪಿದ ವರ ಚಂದ್ರಶೇಖರ್ ವಾಘ್, ತಮ್ಮ ಪ್ರೇಯಸಿಯನ್ನು ರವಿವಾರ ವರಿಸಿದ್ದಾರೆ. ಈ ವಿವಾಹೋತ್ಸವವು ಮರಾಠಿ ಹಾಗೂ ಅಸ್ಸಾಮಿ ಸಂಪ್ರದಾಯಗಳೆರಡರ ಪ್ರಕಾರವೂ ಜರುಗಿತು ಎಂದು ವರದಿಯಾಗಿದೆ.
ರೈಲ್ವೆ ಇಲಾಖೆ ನೀಡಿದ ನೆರವಿಗೆ ವರನ ತಾಯಿ ಸೇರಿದಂತೆ ಅವರ ಸಂಬಂಧಿಕರು ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಹಾಗೂ ಉನ್ನತ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.