ಅಮೃತಕಾಲದಲ್ಲಿ ಮಹಿಳೆಯರಿಗೆ ಕಳೆದ 6 ವರ್ಷಗಳಿಗಿಂತ ಕಡಿಮೆ ವೇತನ : ಕಾಂಗ್ರೆಸ್

Update: 2024-11-17 15:48 GMT

ಸಾಂದರ್ಭಿಕ ಚಿತ್ರ | PC : PTI 

ಹೊಸದಿಲ್ಲಿ : ಉದ್ಯೋಗ ಸ್ಥಳಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯು ಸ್ಥಿರವಾಗಿ ಬೆಳವಣಿಗೆ ಸಾಧಿಸುತ್ತಿದೆ ಎಂಬ ಬಿಜೆಪಿಯ ಪ್ರತಿಪಾದನೆಯನ್ನು ಅಲ್ಲಗಳೆದಿರುವ ಕಾಂಗ್ರೆಸ್, ಉದ್ಯೋಗಸ್ಥ ಹಾಗೂ ಸ್ವ ಉದ್ಯೋಗಿ ಮಹಿಳೆಯರು ಆರು ವರ್ಷಗಳ ಹಿಂದೆ ಪಡೆಯುತ್ತಿದ್ದ ವೇತನಕ್ಕಿಂತ ಕಡಿಮೆ ವೇತನ ಪಡೆಯುತ್ತಿರುವುದೇ ಅಮೃತ ಕಾಲದ ವಿಷಾದಕರ ಸತ್ಯ ಎಂದು ಆರೋಪಿಸಿದೆ.

“ಗ್ರಾಮೀಣ ಭಾಗದ ಸಂಕಷ್ಟದ ಕಾರಣಕ್ಕೆ ಉದ್ಯೋಗ ಸ್ಥಳಗಳಲ್ಲಿ ಮಹಿಳೆಯರ ಸಂಖ್ಯೆಯಲ್ಲಿ ಏರಿಕೆಯಾಗಿದೆ ಎಂದು ಸ್ವಯಂ ಸರಕಾರದ ದತ್ತಾಂಶಗಳೇ ಹೇಳುತ್ತಿದ್ದು, ಮೂಲ ವೇತನದ ಇಳಿಕೆಯೊಂದಿಗೆ ಉದ್ಯೋಗದ ಗುಣಮಟ್ಟ ತೀವ್ರ ಸ್ವರೂಪದಲ್ಲಿ ಕಳಪೆಯಾಗಿದೆ. ಆ ಮೂಲಕ ಸರಕಾರದ ಪ್ರತಿಪಾದನೆಯು ಯಾವುದೇ ದುರಂತಕ್ಕಿಂತ ಕಡಿಮೆ ಇಲ್ಲ ಹಾಗೂ ಇದೊಂದು ಸರಕಾರದ ವಿಫಲ ಜುಮ್ಲಾ ಎಂಬುದನ್ನು ತೋರಿಸುತ್ತಿದೆ” ಎಂದೂ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ನರೇಂದ್ರ ಮೋದಿಯ ಹತ್ತು ವರ್ಷಗಳ ಅವಧಿಯಲ್ಲಿ ಆದಂತೆ ಯಾವ ಅವಧಿಯಲ್ಲೂ ಆರ್ಥಿಕ ದತ್ತಾಂಶಗಳನ್ನು ಈ ಪ್ರಮಾಣದಲ್ಲಿ ತಿರುಚಲಾಗಿರಲಿಲ್ಲ. 2017-18ರಿಂದ 2023-24ರ ನಡುವೆ ಮಹಿಳಾ ಉದ್ಯೋಗಿಗಳ ಪಾಲ್ಗೊಳ್ಳುವಿಕೆ ಶೇ. 27ರಿಂದ ಶೇ. 41.7ಕ್ಕೆ ಏರಿಕೆಯಾಗಿದೆ ಎಂಬ ಸರಕಾರದ ಪ್ರತಿಪಾದನೆಯನ್ನು ಮಾಮೂಲಿ ಕತೆ ಎಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ಂ ವ್ಯಂಗ್ಯವಾಡಿದ್ದಾರೆ.

ಸರಕಾರದ ಆರ್ಥಿಕ ದತ್ತಾಂಶವನ್ನು ಸಂಪೂರ್ಣ ನಕಲಿ ಎಂದು ತಿರಸ್ಕರಿಸಿರುವ ಅವರು, ಉದ್ಯೋಗ ಸ್ಥಳಗಳಲ್ಲಿ ಮಹಿಳಾ ಉದ್ಯೋಗಿಗಳ ಏರಿಕೆ ಪ್ರಮಾಣವು ಗ್ರಾಮೀಣ ಮಹಿಳೆಯರಿಂದ ಹಾಗೂ ಗ್ರಾಮೀಣ ಭಾಗದ ಆರ್ಥಿಕ ಸಂಕಷ್ಟದಿಂದ ಚಾಲಿತವಾಗಿದೆ ಎಂದು ದೂರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News