ಲಾಭದಾಯಕ ಹುದ್ದೆ : 65 ವರ್ಷ ಹಿಂದಿನ ಸಂಸದರ ಅನರ್ಹತೆ ಕಾನೂನಿನ ಬದಲು ಹೊಸ ಕಾನೂನು ತರಲು ಕೇಂದ್ರದ ಚಿಂತನೆ
ಹೊಸದಿಲ್ಲಿ : ಲಾಭದಾಯಕ ಹುದ್ದೆಗಳನ್ನು ಹೊಂದಿರುವ ಸಂಸದರ ಅನರ್ಹತೆಗೆ ಸಂಬಂಧಿಸಿದ 65 ವರ್ಷಗಳಷ್ಟು ಹಳೆಯದಾದ ಕಾನೂನನ್ನು ರದ್ದುಗೊಳಿಸಲು ಮತ್ತು ಕೇಂದ್ರ ಕಾನೂನು ಸಚಿವಾಲಯದ ಶಾಸಕಾಂಗ ಇಲಾಖೆಯು ಸೂಚಿಸಿರುವ ಪ್ರಸ್ತುತ ಅಗತ್ಯಗಳಿಗೆ ಅನುಗುಣವಾಗಿ ಹೊಸ ಶಾಸನವನ್ನು ತರಲು ಕೇಂದ್ರ ಸರಕಾರವು ಉದ್ದೇಶಿಸಿದೆ.
ಕರಡು ‘ಸಂಸತ್(ಅನರ್ಹತೆ ತಡೆಗಟ್ಟುವಿಕೆ) ಮಸೂದೆ, 2024’ 16ನೇ ಲೋಕಸಭೆಯ ಅವಧಿಯಲ್ಲಿ ಕಲರಾಜ್ ಮಿಶ್ರಾ ನೇತೃತ್ವದ ಲಾಭದಾಯಕ ಹುದ್ದೆಗಳ ಕುರಿತು ಜಂಟಿ ಸಮಿತಿ (ಜೆಸಿಒಪಿ)ಯ ಶಿಫಾರಸುಗಳನ್ನು ಆಧರಿಸಿದೆ.
ನೂತನ ಶಾಸನವು ಪ್ರಸ್ತುತ ಸಂಸತ್(ಅನರ್ಹತೆ ತಡೆಗಟ್ಟುವಿಕೆ) ಕಾಯ್ದೆಯ ಕಲಂ 3ನ್ನು ಸರಳಗೊಳಿಸುವ ಮತ್ತು ಪಟ್ಟಿಯಲ್ಲಿನ ಅನರ್ಹತೆಗೆ ಕಾರಣವಾಗುವ ಋಣಾತ್ಮಕ ಹುದ್ದೆಗಳನ್ನು ತೆಗೆದುಹಾಕಲು ಉದ್ದೇಶಿಸಿದೆ.
ಉದ್ದೇಶಿತ ಪ್ರಸ್ತಾವವು ಪ್ರಸ್ತುತ ಕಾಯ್ದೆ ಮತ್ತು ಅನರ್ಹತೆಯಿಂದ ವಿನಾಯಿತಿಗಳನ್ನು ಸ್ಪಷ್ಟವಾಗಿ ಒದಗಿಸುವ ಇತರ ಶಾಸನಗಳ ನಡುವಿನ ಅಸಮಂಜಸತೆಗಳನ್ನು ತೊಡೆದು ಹಾಕಲೂ ಬಯಸಿದೆ
ಕರಡು ಶಾಸನವು ನಿರ್ದಿಷ್ಟ ಪ್ರಕರಣಗಳಲ್ಲಿ ಅನರ್ಹತೆಯ ‘ತಾತ್ಕಾಲಿಕ ಅಮಾನತ್’ಗೆ ಸಂಬಂಧಿಸಿದ ಪ್ರಸ್ತುತ ಕಾಯ್ದೆಯಲ್ಲಿನ ಕಲಂ 4ನ್ನು ತೆಗೆದುಹಾಕುತ್ತದೆ ಮತ್ತು ಅಧಿಸೂಚನೆಗಳ ಮೂಲಕ ಪರಿಚ್ಛೇದವನ್ನು ಪರಿಷ್ಕರಿಸಲು ಕೇಂದ್ರ ಸರಕಾರಕ್ಕೆ ಅಧಿಕಾರವನ್ನು ನೀಡುತ್ತದೆ.
ಪ್ರಸ್ತುತ ಕಾಯ್ದೆಯು ಅನರ್ಹತೆಗೆ ಕಾರಣವಾಗುವ ಮತ್ತು ಕಾರಣವಾಗದ, ಹೀಗೆ ಎರಡೂ ವಿಧಗಳ ಹುದ್ದೆಗಳನ್ನು ಒಳಗೊಂಡಿದೆ. ಕಾಲಾಂತರದಲ್ಲಿ ಸಂಸತ್ತು ಕಾಯ್ದೆಗೆ ವಿವಿಧ ತಿದ್ದುಪಡಿಗಳನ್ನು ತಂದಿದೆ.