ಬಿಹಾರದ ಆಸ್ಪತ್ರೆಯಲ್ಲಿ ಮೃತವ್ಯಕ್ತಿಯ ಕಣ್ಣು ನಾಪತ್ತೆ : ಕುಟುಂಬದಿಂದ ಸಿಬ್ಬಂದಿಗಳ ಕೈವಾಡದ ಆರೋಪ
ಪಾಟ್ನಾ : ಗುಂಡೇಟಿನಿಂದ ಗಾಯಗೊಂಡಿದ್ದ ವ್ಯಕ್ತಿಯೋರ್ವ ಇಲ್ಲಿಯ ನಲಂದಾ ಮೆಡಿಕಲ್ ಕಾಲೇಜು ಆಸ್ಪತ್ರೆ(ಎನ್‌ಎಂಸಿಎಚ್)ಯಲ್ಲಿ ಮೃತಪಟ್ಟ ಕೆಲವೇ ಗಂಟೆಗಳಲ್ಲಿ ಒಂದು ಕಣ್ಣು ನಾಪತ್ತೆಯಾಗಿದ್ದು ಬೆಳಕಿಗೆ ಬಂದಿದೆ. ಇಲಿಗಳು ಕಣ್ಣನ್ನು ಕಿತ್ತಿವೆ ಎಂದು ವೈದ್ಯರು ಸಮಜಾಯಿಷಿ ನೀಡಿದ್ದರೆ ಮೃತನ ಕುಟುಂಬದವರು ಸಿಬ್ಬಂದಿಗಳ ಕೈವಾಡವನ್ನು ಶಂಕಿಸಿದ್ದಾರೆ.
ಶುಕ್ರವಾರ ಅಪರಿಚಿತ ದುಷ್ಕರ್ಮಿಗಳು ಫಂಟೂಶ ಕುಮಾರ ಎಂಬ ವ್ಯಕ್ತಿಯ ಮೇಲೆ ಗುಂಡುಗಳನ್ನು ಹಾರಿಸಿದ್ದು, ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಎನ್‌ಎಂಸಿಎಚ್‌ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅಂದೇ ರಾತ್ರಿ ಅವರು ಮೃತಪಟ್ಟಿದ್ದರು.
ರಾತ್ರಿ ಮರಣೋತ್ತರ ಪರೀಕ್ಷೆ ನಡೆಸಲು ಸಾಧ್ಯವಿಲ್ಲದ್ದರಿಂದ ಮೃತದೇಹವನ್ನು ಐಸಿಯು ವಾರ್ಡ್‌ನ ಹಾಸಿಗೆಯಲ್ಲಿಯೇ ಇರಿಸಲಾಗಿದ್ದು, ಶನಿವಾರ ಬೆಳಿಗ್ಗೆ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿತ್ತು.
‘ಶವವನ್ನು ಮರಣೋತ್ತರ ಪರೀಕ್ಷೆಗೆ ತರುತ್ತಿದ್ದಾಗ ಒಂದು ಕಣ್ಣು ನಾಪತ್ತೆಯಾಗಿದ್ದನ್ನು ನಾವು ಗಮನಿಸಿದ್ದೆವು. ಸ್ಟ್ರೆಚರ್‌ನಲ್ಲಿ ಶವದ ಪಕ್ಕ ಸರ್ಜಿಕಲ್ ಬ್ಲೇಡ್ ಇತ್ತು ’ ಎಂದು ಕುಟುಂಬ ಸದಸ್ಯರೋರ್ವರು ತಿಳಿಸಿದರು.
ಇಲಿಗಳು ಕಣ್ಣನ್ನು ಕಿತ್ತಿರಬಹುದು ಎಂದು ಕೆಲವು ವೈದ್ಯರು ಶಂಕಿಸಿದ್ದರೆ, ಕುಟುಂಬವು ನಿರ್ಲಕ್ಷ್ಯ ಮತ್ತು ಸಿಬ್ಬಂದಿಗಳ ಕೈವಾಡವನ್ನು ಆರೋಪಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಎನ್‌ಎಂಸಿಎಚ್‌ನ ವೈದ್ಯಕೀಯ ಅಧೀಕ್ಷಕ ಬಿನೋದ್ ಕುಮಾರ್ ಸಿಂಗ್ ಅವರು, ಈ ಬಗ್ಗೆ ತನಿಖೆಗೆ ವೈದ್ಯಕೀಯ ತಂಡವನ್ನು ರಚಿಸಲಾಗಿದೆ. ಇದು ಗಂಭೀರ ವಿಷಯವಾಗಿದೆ ಮತ್ತು ತಪ್ಪಿತಸ್ಥರು ಎಂದು ಕಂಡು ಬಂದವರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
‘ಇಲಿಗಳು ಕಣ್ಣನ್ನು ಕಿತ್ತಿರಬಹುದೆಂದು ಕೆಲವು ವೈದ್ಯರು ಶಂಕಿಸಿದ್ದಾರೆ. ಘಟನೆಗೆ ಸಂಬಂಧಿಸಿದ ಎಲ್ಲ ಅಂಶಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಮರಣೋತ್ತರ ಪರೀಕ್ಷಾ ವರದಿಗಾಗಿ ನಾವು ಕಾಯುತ್ತಿದ್ದೇವೆ. ಈ ಬಗ್ಗೆ ನಾವು ಪೋಲಿಸ್ ದೂರನ್ನೂ ದಾಖಲಿಸಿದ್ದೇವೆ ’ ಎಂದರು.