ನೋವಿನಲ್ಲೂ ಏಕಾಂಗಿ ಹೋರಾಟ ನೀಡಿ ಐತಿಹಾಸಿಕ ದ್ವಿಶತಕ ಗಳಿಸಿದ ಮ್ಯಾಕ್ಸ್ ವೆಲ್

Update: 2023-11-08 14:30 GMT

ಮುಂಬೈ : ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ಏಕದಿನ ಕ್ರಿಕೆಟ್ ನಲ್ಲಿ ಸಾರ್ವಕಾಲಿಕ ಶ್ರೇಷ್ಠ ಇನಿಂಗ್ಸ್ ಆಡಿ ಪಂದ್ಯದ ಚಿತ್ರಣವನ್ನೇ ಬದಲಿಸಿ ಅಫ್ಗಾನ್ ಕೈಯಿಂದ ಗೆಲುವನ್ನು ಕಸಿದುಕೊಂಡರು. ಮಾತ್ರವಲ್ಲ 3.1 ಓವರ್ ಬಾಕಿ ಇರುವಾಗಲೇ ಆಸ್ಟ್ರೇಲಿಯವನ್ನು ಗೆಲುವಿನ ದಡ ಸೇರಿಸಿ ಸೆಮಿ ಫೈನಲ್ ಗೆ ತಲುಪಿಸಿದರು.

ಅಫ್ಗಾನಿಸ್ತಾನದ ವಿರುದ್ಧ 292 ರನ್ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯ ಒಂದು ಹಂತದಲ್ಲಿ 18.3 ಓವರ್ ಗಳಲ್ಲಿ 91 ರನ್ ಗೆ 7 ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಆಗ ಆಸ್ಟ್ರೇಲಿಯ ಸೋಲಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಅತ್ಯಂತ ಒತ್ತಡದ ಪರಿಸ್ಥಿತಿಯಲ್ಲೂ ಬೆನ್ನುನೋವು, ಸ್ನಾಯು ಸೆಳೆತವನ್ನು ಲೆಕ್ಕಿಸದೆ ಛಲ ಬಿಡದೆ ಏಕಾಂಗಿ ಹೋರಾಟ ನೀಡಿದ ಮ್ಯಾಕ್ಸ್ ವೆಲ್ ವಾಂಖೆಡೆ ಸ್ಟೇಡಿಯಮ್ ನಲ್ಲಿ ಸಿಕ್ಸರ್ ಹಾಗೂ ಬೌಂಡರಿಗಳ ಸುರಿಮಳೆಗೈದು ಐತಿಹಾಸಿಕ ದ್ವಿಶತಕದ ಸಾಧನೆ ಮಾಡಿದರು. 128 ಎಸೆತಗಳನ್ನು ಎದುರಿಸಿದ್ದ ಮ್ಯಾಕ್ಸ್ ವೆಲ್ 21 ಬೌಂಡರಿ ಹಾಗೂ 10 ಸಿಕ್ಸರ್ ಸಹಾಯದಿಂದ 201 ರನ್ ಗಳಿಸಿ ಔಟಾಗದೆ ಉಳಿದು ವಿಸ್ಫೋಟಕ ಬ್ಯಾಟಿಂಗ್ ಮಾಡಿದರು.

ಸ್ನಾಯು ಸೆಳೆತದಿಂದಾಗಿ ಕುಂಟುತ್ತಿದ್ದ ಮ್ಯಾಕ್ಸ್ ವೆಲ್ ಒಂಟಿ ಕಾಲಲ್ಲಿ ನಿಂತು ಚೆಂಡನ್ನು ಸಿಕ್ಸರ್ ಹಾಗೂ ಬೌಂಡರಿಗೆ ಅಟ್ಟುತ್ತಾ ಆಸ್ಟ್ರೇಲಿಯವನ್ನು ಗೆಲುವಿನ ದಡ ಸೇರಿಸಿದ ರೀತಿ ಅವರ ಸಮರ್ಪಣಾಭಾವ ಹಾಗೂ ಸಾಮರ್ಥ್ಯಕ್ಕೆ ಸಾಕ್ಷಿಯಾಗಿತ್ತು.

ಬೆನ್ನು, ಸ್ನಾಯು ಸೆಳತದಲ್ಲೂ ಕೆಚ್ಚೆದೆಯ ಹೋರಾಟ ನೀಡಿದ ಮ್ಯಾಕ್ಸ್ ವೆಲ್ ರನ್ನು ಹೊಗಳಿದ ಪಾಕ್ ಮಾಜಿ ಕ್ರಿಕೆಟಿಗ ವಸೀಂ ಅಕ್ರಮ್, ಮ್ಯಾಕ್ಸ್ ವೆಲ್ ಆಲ್ ರೌಂಡ್ ವ್ಯಕ್ತಿ. ಅವರು ಬಾಲ್ಯದಲ್ಲಿ ಕೇವಲ ಒಂದು ಕ್ರೀಡೆಯನ್ನು ಆಡಿಲ್ಲ. ಅವರು ಟೆನಿಸ್ ಆಟಗಾರನಾಗುವ ಅಂಚಿನಲ್ಲಿದ್ದರು. ನಂತರ ಅವರು ಸ್ಕ್ರ್ಯಾಚ್ ಗಾಲ್ಫ್ ಆಟಗಾರನಾಗಿದ್ದರು ಎಂದರು.

ಅಫ್ಘಾನ್ ಆಟಗಾರರಿಂದ ಹಲವು ಬಾರಿ ಜೀವದಾನ ಪಡೆದಿದ್ದ ಮಾಕ್ಸ್ ವೆಲ್ ನಾಯಕ ಪ್ಯಾಟ್ ಕಮಿನ್ಸ್ ಜೊತೆ 8ನೇ ವಿಕೆಟ್ ಗೆ ಮುರಿಯದ ಜೊತೆಯಾಟದಲ್ಲಿ 170 ಎಸೆತಗಳಲ್ಲಿ 202 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಇದರಲ್ಲಿ ಕಮಿನ್ಸ್ ಕೊಡುಗೆ 12 ರನ್ ಮಾತ್ರ.

ಅಮೋಘ ದ್ವಿಶತಕ ಗಳಿಸಿದ ಮ್ಯಾಕ್ಸ್ ವೆಲ್ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.

► ರನ್ ಚೇಸ್ ವೇಳೆ ದ್ವಿಶತಕ ದಾಖಲಿಸಿದ ಮೊದಲ ಆಟಗಾರ

ಮ್ಯಾಕ್ಸ್ ವೆಲ್ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ರನ್ ಚೇಸ್ ವೇಳೆ ದ್ವಿಶತಕ ದಾಖಲಿಸಿದ ಮೊದಲ ಆಟಗಾರನೆಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ದ್ವಿಶತಕ ಗಳಿಸಿದ ಆಸ್ಟ್ರೇಲಿಯದ ಮೊದಲ ಬ್ಯಾಟರ್ ನೆಂಬ ಹಿರಿಮೆಗೂ ಭಾಜನರಾದ ಮ್ಯಾಕ್ಸ್ ವೆಲ್ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ದ್ವಿಶತಕ ಗಳಿಸಿದ್ದು ಮತ್ತೊಂದು ವಿಶೇಷವಾಗಿದೆ.

ಮ್ಯಾಕ್ಸ್ ವೆಲ್ ಏಕದಿನ ಕ್ರಿಕೆಟ್ ವಿಶ್ವಕಪ್ ನಲ್ಲಿ ದ್ವಿಶತಕ ಸಿಡಿಸಿದ 3ನೇ ಬ್ಯಾಟರ್ ಆಗಿದ್ದಾರೆ. 2015ರ ವಿಶ್ವಕಪ್ ನಲ್ಲಿ ನ್ಯೂಝಿಲ್ಯಾಂಡ್ ನ ಮಾರ್ಟಿನ್ ಗಪ್ಟಿಲ್ ಹಾಗೂ ವೆಸ್ಟ್ ಇಂಡೀಸ್ ನ ಕ್ರಿಸ್ ಗೇಲ್ ದ್ವಿಶತಕ ಗಳಿಸಿದ್ದರು.

ಮ್ಯಾಕ್ಸ್ ವೆಲ್ ನಾಯಕ ಕಮಿನ್ಸ್ ಜೊತೆ 8ನೇ ವಿಕೆಟ್ ಗೆ ಮುರಿಯದ ಜೊತೆಯಾಟದಲ್ಲಿ 202 ರನ್ ಗಳಿಸಿದರು. ಇದು 7 ಅಥವಾ ಅದಕ್ಕಿಂತಲೂ ಕೆಳ ವಿಕೆಟ್ ನಲ್ಲಿ ದಾಖಲಾದ ಗರಿಷ್ಟ ಜೊತೆಯಾಟವಾಗಿದೆ.

► ಎರಡನೇ ವೇಗದ ದ್ವಿಶತಕ

ಮ್ಯಾಕ್ಸ್ ವೆಲ್ 128 ಎಸೆತಗಳಲ್ಲಿ ದ್ವಿಶತಕ ದಾಖಲಿಸಿದರು. ಆ ಮೂಲಕ ಏಕದಿನ ಕ್ರಿಕೆಟ್ ನಲ್ಲಿ 2ನೇ ವೇಗದ ದ್ವಿಶತಕ ಗಳಿಸಿದ ದಾಖಲೆಗೆ ಭಾಜನರಾದರು. ಭಾರತದ ಇಶಾನ್ ಕಿಶನ್ (126 ಎಸೆತ) ಕಳೆದ ವರ್ಷದ ಡಿಸೆಂಬರ್ ನಲ್ಲಿ ಬಾಂಗ್ಲಾದೇಶ ವಿರುದ್ಧ ಏಕದಿನ ಕ್ರಿಕೆಟ್ ನಲ್ಲಿ ವೇಗದ ದ್ವಿಶತಕ ದಾಖಲಿಸಿದ ಸಾಧನೆ ಮಾಡಿದ್ದಾರೆ.

► ನೆದರ್ ಲ್ಯಾಂಡ್ಸ್ ವಿರುದ್ಧ ವೇಗದ ಶತಕ

ಮ್ಯಾಕ್ಸ್ ವೆಲ್ ಅ.25ರಂದು ಹೊಸದಿಲ್ಲಿಯಲ್ಲಿ ನೆದರ್ ಲ್ಯಾಂಡ್ಸ್ ವಿರುದ್ಧ ವಿಶ್ವಕಪ್ ಇತಿಹಾಸದಲ್ಲಿ ವೇಗದ ಶತಕ ದಾಖಲಿಸಿದ್ದರು. ಕೇವಲ 40 ಎಸೆತಗಳಲ್ಲಿ ಶತಕ ಗಳಿಸಿದ್ದ ಮ್ಯಾಕ್ಸ್ ವೆಲ್ ಪ್ರಸಕ್ತ ವಿಶ್ವಕಪ್ ನಲ್ಲಿ ದಕ್ಷಿಣ ಆಪ್ರಿಕಾದ ಐಡೆನ್ ಮಾರ್ಕ್ರಾಮ್ 49 ಎಸೆತಗಳಲ್ಲಿ ಗಳಿಸಿದ್ದ ಶತಕದ ದಾಖಲೆಯನ್ನು ಮುರಿದರು. ದಕ್ಷಿಣ ಆಫ್ರಿಕಾದ ಎಬಿ ಡಿವಿಯರ್ಸ್ ಏಕದಿನ ಕ್ರಿಕೆಟ್ ನಲ್ಲಿ 31 ಎಸೆತಗಳಲ್ಲಿ ವೇಗದ ಶತಕದ ದಾಖಲೆ ನಿರ್ಮಿಸಿದ್ದಾರೆ.

► ಪತ್ನಿ ವಿನಿ ರಾಮನ್ ಸಂಭ್ರಮ

ಮ್ಯಾಕ್ಸ್ ವೆಲ್ ಸಿಕ್ಸರ್ ಸಿಡಿಸಿ ತನ್ನ 200 ರನ್ ಪೂರೈಸುವ ಜೊತೆಗೆ ತನ್ನ ತಂಡಕ್ಕೆ ಗೆಲುವನ್ನು ತಂದುಕೊಟ್ಟರು. ಈ ಅಪೂರ್ವ ಕ್ಷಣಕ್ಕೆ ವಾಂಖೆಡೆ ಸ್ಟೇಡಿಯಮ್ ನಲ್ಲಿದ್ದ ಮ್ಯಾಕ್ಸ್ ವೆಲ್ ಪತ್ನಿ ವಿನಿ ರಾಮನ್ ಸಾಕ್ಷಿಯಾದರು. ಭಾರತ ಮೂಲದ ಮೆಲ್ಬೋರ್ನ್ ನಿವಾಸಿ ವಿನಿ ರಾಮನ್ ಕಳೆದ ವರ್ಷ ಮ್ಯಾಕ್ಸ್ ವೆಲ್ ರನ್ನು ವಿವಾಹವಾಗಿದ್ದು, ಈ ದಂಪತಿಗೆ ಗಂಡು ಮಗುವಿದೆ.

ತನ್ನ ಇನ್ ಸ್ಟಾಗ್ರಾಮ್ ನಲ್ಲಿ ವಿನಿ ರಾಮನ್ ಅವರು ‘ಆಲ್ ದಿ ಎಮೋಶನ್ಸ್ 201’ ಎಂದು ಬರೆದಿದ್ದಾರೆ. ಅವರ ಸಾಮಾಜಿಕ ಮಾಧ್ಯಮದ ಪೋಸ್ಟ್ ಇಂಟರ್ ನೆಟ್ ನಲ್ಲಿ ವೈರಲ್ ಆಗಿದೆ.

► 1983ರ ವಿಶ್ವಕಪ್ ನ ಕಪಿಲ್ ದೇವ್ ಇನಿಂಗ್ಸ್ ನೆನಪಿಸಿದ ಮ್ಯಾಕ್ಸ್ ವೆಲ್

ಅಫ್ಘಾನ್ ವಿರುದ್ಧ ಮ್ಯಾಕ್ಸ್ ವೆಲ್ ನೀಡಿರುವ ವೀರಾವೇಶದ ಬ್ಯಾಟಿಂಗ್ 40 ವರ್ಷಗಳ ಹಿಂದಿನ ಕ್ರಿಕೆಟಿನ ಐತಿಹಾಸಿಕ ದಿನವನ್ನು ನೆನಪಿಸಿತು. 1983 ರಲ್ಲಿ ಟನ್ ಬ್ರಿಡ್ಜ್ ವೆಲ್ಸ್ನಲ್ಲಿ ಝಿಂಬಾಬ್ವೆ ವಿರುದ್ಧ ಕಪಿಲ್ ದೇವ್ ಅವರ ದಿಟ್ಟ ಇನ್ನಿಂಗ್ಸ್ ಭಾರತಕ್ಕೆ ಗೆಲುವನ್ನು ತಂದುಕೊಟ್ಟಿತ್ತು. ಆಗ ಭಾರತವು 17 ರನ್ ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ಎದುರಾಳಿ ತಂಡದ ಬೌಲರ್ಗಳನ್ನು ದಂಡಿಸಿದ್ದ ಕಪಿಲ್ ದೇವ್ ಅಂತಿಮವಾಗಿ ಭಾರತವನ್ನು ಗೆಲುವಿನತ್ತ ಮುನ್ನಡೆಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News