ಎಂ.ಎಸ್. ಧೋನಿ ದಾಖಲೆ ಮುರಿದ ವಿರಾಟ್ ಕೊಹ್ಲಿ
ಬೆಂಗಳೂರು : ಮಾಜಿ ನಾಯಕ ಎಂ.ಎಸ್. ಧೋನಿ ಅವರ ದಾಖಲೆಯನ್ನು ಮುರಿದ ವಿರಾಟ್ ಕೊಹ್ಲಿ ಎಲ್ಲ ಮಾದರಿಯ ಕ್ರಿಕೆಟ್ ನಲ್ಲಿ ಅತ್ಯಂತ ಹೆಚ್ಚು ಪಂದ್ಯಗಳನ್ನು ಆಡಿದ ಭಾರತದ ಎರಡನೇ ಆಟಗಾರನೆಂಬ ಹಿರಿಮೆಗೆ ಪಾತ್ರರಾದರು.
ಗುರುವಾರ ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ವೇಳೆ ಕೊಹ್ಲಿ ಈ ದಾಖಲೆ ನಿರ್ಮಿಸಿದರು. ಕೊಹ್ಲಿ ಇದೀಗ ಭಾರತದ ಪರ 536ನೇ ಪಂದ್ಯವನ್ನು ಆಡಿದರೆ, ಧೋನಿ 535 ಪಂದ್ಯ ಆಡಿದ್ದಾರೆ.
ಕೊಹ್ಲಿ ಇದೀಗ ಸಚಿನ್ ತೆಂಡುಲ್ಕರ್ ನಂತರದ ಸ್ಥಾನದಲ್ಲಿದ್ದಾರೆ. ತೆಂಡುಲ್ಕರ್ ಒಟ್ಟು 664 ಪಂದ್ಯಗಳನ್ನು ಆಡಿದ್ದಾರೆ. ವಿಶ್ವದಲ್ಲಿ ಅತ್ಯಂತ ಹೆಚ್ಚು ಪಂದ್ಯಗಳನ್ನು ಆಡಿರುವ ಅಂತರರಾಷ್ಟ್ರೀಯ ಕ್ರಿಕೆಟಿಗನೆಂಬ ದಾಖಲೆಯನ್ನು ಹೊಂದಿದ್ದಾರೆ.
ಭಾರತದ ಮಾಜಿ ನಾಯಕ ಕೊಹ್ಲಿ ಅವರು 115 ಟೆಸ್ಟ್, 295 ಏಕದಿನ ಹಾಗೂ 125 ಟಿ-20 ಪಂದ್ಯಗಳನ್ನು ಆಡಿದ್ದಾರೆ. ಒಟ್ಟಾರೆ ಅವರು 27,041 ಅಂತರರಾಷ್ಟ್ರೀಯ ರನ್ ಗಳಿಸಿದ್ದಾರೆ. ಈ ವೇಳೆ ಕೊಹ್ಲಿ 213 ಪಂದ್ಯಗಳಲ್ಲಿ(68 ಟೆಸ್ಟ್, 95 ಏಕದಿನ, 50 ಟಿ20)ಭಾರತದ ನಾಯಕತ್ವವಹಿಸಿದ್ದರು.
►ಎಲ್ಲ ಮಾದರಿಯ ಕ್ರಿಕೆಟ್ ನಲ್ಲಿ ಹೆಚ್ಚು ಪಂದ್ಯಗಳನ್ನು ಆಡಿದ ಭಾರತದ ಆಟಗಾರರು
1. ಸಚಿನ್ ತೆಂಡುಲ್ಕರ್-664
2. ವಿರಾಟ್ ಕೊಹ್ಲಿ-536
3. ಎಂ. ಎಸ್. ಧೋನಿ-535
4. ರಾಹುಲ್ ದ್ರಾವಿಡ್-504
5. ರೋಹಿತ್ ಶರ್ಮಾ-486