ಭಾರತದ ವಿಕೆಟ್ ಕೀಪರ್ ರಿಷಭ್ ಪಂತ್ ಗೆ ಗಾಯದ ಭೀತಿ
ಬೆಂಗಳೂರು : ನ್ಯೂಝಿಲ್ಯಾಂಡ್ ತಂಡದ ವಿರುದ್ಧ ಮೊದಲ ಟೆಸ್ಟ್ ನ 2ನೇ ದಿನವಾದ ಗುರುವಾರ ವಿಕೆಟ್ ಕೀಪರ್ ವೇಳೆ ಬಲ ಮೊಣಕಾಲಿಗೆ ಚೆಂಡು ಅಪ್ಪಳಿಸಿದ ಪರಿಣಾಮ ರಿಷಭ್ ಪಂತ್ ಮೈದಾನದಿಂದ ಹೊರ ನಡೆದಿದ್ದು, ಈ ಮೂಲಕ ಟೀಮ್ ಇಂಡಿಯಾ ಕಳವಳದ ಕ್ಷಣ ಎದುರಿಸಿತು.
37ನೇ ಓವರ್ ನ ಕೊನೆಯ ಎಸೆತದಲ್ಲಿ ಈ ಘಟನೆ ನಡೆದಿದೆ. ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಎಸೆದ ಚೆಂಡು ನ್ಯೂಝಿಲ್ಯಾಂಡ್ ಬ್ಯಾಟರ್ ಡೆವೊನ್ ಕಾನ್ವೆ ಬ್ಯಾಟಿಗೆ ಸಿಗದೆ ಪಂತ್ ಅವರ ಬಲ ಮೊಣಕಾಲಿಗೆ ಅಪ್ಪಳಿಸಿತು. ಆಗ ತಕ್ಷಣ ಪಂತ್ ನೋವು ತಡೆಯಲಾಗದೆ ಮೈದಾನದಲ್ಲಿ ಕುಸಿದು ಬಿದ್ದರು.
ಫಿಝಿಯೊ, ಪಂತ್ ಅವರತ್ತ ಧಾವಿಸಿ ಬಂದರೂ, ತೀವ್ರ ನೋವು ತಡೆಯಲಾರದೆ ಪಂತ್ ಮೈದಾನದಿಂದ ಹೊರ ನಡೆದರು. ಧ್ರುವ್ ಜುರೆಲ್ ಪ್ಯಾಡ್ಸ್ ಹಾಗೂ ಹೆಲ್ಮೆಟ್ ಧರಿಸಿ ವಿಕೆಟ್ಕೀಪಿಂಗ್ ಮಾಡಲು ಆಗಮಿಸಿದರು.
ಗಾಯದ ಸ್ವರೂಪ ಇನ್ನೂ ಸ್ಪಷ್ಟವಾಗಿಲ್ಲ. ಪಂತ್ ಅವರ ಚೇತರಿಕೆಗೆ ಆಗುವ ಯಾವುದೇ ಹಿನ್ನೆಡೆಯು ಪ್ರಸಕ್ತ ಟೆಸ್ಟ್ ಸರಣಿ ಹಾಗೂ ಮುಂಬರುವ ಆಸ್ಟ್ರೇಲಿಯದಲ್ಲಿ ನಡೆಯುವ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತದ ಯೋಜನೆಯ ಮೇಲೆ ಪ್ರಭಾವ ಬೀರಲಿದೆ.