ಇದೇ ಮೊದಲ ಬಾರಿ ಏಕದಿನ ವಿಶ್ವಕಪ್‌ನಿಂದ ಹೊರಗುಳಿದ ವೆಸ್ಟ್‌ಇಂಡೀಸ್

Update: 2023-07-01 15:28 GMT

PC: AP

ಹರಾರೆ, ಜು.1: ವಿಶ್ವಕಪ್ ಅರ್ಹತಾ ಸುತ್ತಿನ ಸ್ಪರ್ಧೆಯಿಂದ ನಿರ್ಗಮಿಸಿರುವ ವೆಸ್ಟ್‌ಇಂಡೀಸ್ ಕ್ರಿಕೆಟ್ ತಂಡ ಟೂರ್ನಮೆಂಟ್‌ನ ಇತಿಹಾಸದಲ್ಲಿ ಇದೇ ಮೊದಲ ಬಾರಿ ವಿಶ್ವಕಪ್‌ನಲ್ಲಿ ಭಾಗವಹಿಸುವುದರಿಂದ ವಂಚಿತವಾಗಿದೆ. ಶನಿವಾರ ಸೂಪರ್-6 ಹಂತದಲ್ಲಿ ಮಾಡು-ಮಡಿ ಪಂದ್ಯವನ್ನು ಆಡಿದ ವೆಸ್ಟ್‌ಇಂಡೀಸ್ ತಂಡ ಸ್ಕಾಟ್‌ಲ್ಯಾಂಡ್ ವಿರುದ್ಧ 7 ವಿಕೆಟ್‌ಗಳ ಅಂತರದಿಂದ ಸೋತು ಮುಜುಗರಕ್ಕೆ ಈಡಾಯಿತು.

ಸ್ಕಾಟ್‌ಲ್ಯಾಂಡ್ ಆಲ್‌ರೌಂಡರ್ ಬ್ರೆಂಡನ್ ಮೆಕ್‌ಮುಲ್ಲನ್ ಮೊದಲಿಗೆ 3 ವಿಕೆಟ್ ಕಬಳಿಸಿದರು. ನಂತರ 106 ಎಸೆತಗಳಲ್ಲಿ 69 ರನ್ ಕೊಡುಗೆ ನೀಡಿದರು. ಈ ಸೋಲಿನೊಂದಿಗೆ ವೆಸ್ಟ್‌ಇಂಡೀಸ್ 1975ರಲ್ಲಿ ಏಕದಿನ ವಿಶ್ವಕಪ್ ಆರಂಭವಾದ ನಂತರ ಮೊದಲ ಬಾರಿ ಸ್ಪರ್ಧಿಸುವ ಅವಕಾಶದಿಂದ ವಂಚಿತವಾಯಿತು.

ವಿಶ್ವಕಪ್ ಈ ವರ್ಷದ ಅಕ್ಟೋಬರ್ 5ರಿಂದ ಭಾರತದಲ್ಲಿ ಆರಂಭವಾಗಲಿದೆ. ಸ್ಕಾಟ್‌ಲ್ಯಾಂಡ್ ಇದೇ ಮೊದಲ ಬಾರಿ ವೆಸ್ಟ್‌ಇಂಡೀಸ್ ವಿರುದ್ಧ ಜಯಭೇರಿ ಬಾರಿಸಿದೆ. ಕ್ಲೈವ್ ಲಾಯ್ಡ್ ನೇತೃತ್ವದ ವಿಂಡೀಸ್ 1975 ಹಾಗೂ 1979ರಲ್ಲಿ ಮೊದಲೆರಡು ಏಕದಿನ ವಿಶ್ವಕಪ್‌ಗಳನ್ನು ಜಯಿಸಿತ್ತು. 1983ರಲ್ಲಿ ಫೈನಲ್‌ನಲ್ಲಿ ಆಡಿದ್ದರೂ ಭಾರತ ವಿರುದ್ಧ ಸೋಲುಂಡಿತ್ತು.

ವಿಂಡೀಸ್‌ಗೆ ಇನ್ನೂ 2 ಪಂದ್ಯ ಆಡಲು ಬಾಕಿ ಇದೆ. ಆ ಪಂದ್ಯವನ್ನು ಗೆದ್ದರೂ 4 ಅಂಕ ಲಭಿಸಲಿದೆ. ಶ್ರೀಲಂಕಾ ಹಾಗೂ ಝಿಂಬಾಬ್ವೆ ಈಗಾಗಲೇ 3 ಪಂದ್ಯಗಳಲ್ಲಿ ಆರಂಕವನ್ನು ಗಳಿಸಿವೆ. ಈ ಗೆಲುವಿನೊಂದಿಗೆ ಸ್ಕಾಟ್‌ಲ್ಯಾಂಡ್ ಒಟ್ಟು 4 ಅಂಕ ಗಳಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ವಿಂಡೀಸ್ 43.5 ಓವರ್‌ಗಳಲ್ಲಿ ಕೇವಲ 181 ರನ್ ಗಳಿಸಿ ಆಲೌಟಾಯಿತು. ಜೇಸನ್ ಹೋಲ್ಡರ್(45 ರನ್)ಸರ್ವಾಧಿಕ ಸ್ಕೋರ್ ಗಳಿಸಿದರು.

ಬ್ರೆಂಡನ್ ಮೆಕ್‌ಮುಲ್ಲನ್(3-32) ನೇತೃತ್ವದ ಬೌಲಿಂಗ್ ದಾಳಿಗೆ ವಿಂಡೀಸ್ ನಿರುತ್ತರವಾಯಿತು. ಗೆಲ್ಲಲು 182 ರನ್ ಗುರಿ ಪಡೆದ ಸ್ಕಾಟ್‌ಲ್ಯಾಂಡ್ 43.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿತು. ಆರಂಭಿಕ ಬ್ಯಾಟರ್ ಮ್ಯಾಥ್ಯೂ ಕ್ರಾಸ್(74 ರನ್, 107 ಎಸೆತ)ಹಾಗೂ ಬ್ರೆಂಡನ್ ಮೆಕ್‌ಮುಲ್ಲನ್(69 ರನ್, 106 ಎಸೆತ)ಅರ್ಧಶತಕದ ಕೊಡುಗೆ ನೀಡಿದರು. ಮೆಕ್‌ಮುಲ್ಲನ್ ಆಲ್‌ರೌಂಡ್ ಆಟದ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News