ರಣಜಿ ಟ್ರೋಫಿ ಫೈನಲ್ | ವಿದರ್ಭ ವಿರುದ್ಧ ಮುಂಬೈ 224 ರನ್‌ ಗೆ ಆಲೌಟ್

Update: 2024-03-10 17:26 GMT

Photo: PTI

ಮುಂಬೈ : ಶ್ರೇಯಸ್ ಅಯ್ಯರ್ ಹಾಗೂ ಅಜಿಂಕ್ಯ ರಹಾನೆ ಬ್ಯಾಟ್‌ ನಲ್ಲಿ ರನ್ ಬರ ಮುಂದುವರಿದರೆ ಶಾರ್ದೂಲ್ ಠಾಕೂರ್ ಆಲ್ರೌಂಡರ್ ಸಾಮರ್ಥ್ಯದ ಮೂಲಕ ಆತಿಥೇಯ ಮುಂಬೈ ತಂಡ ವಿದರ್ಭ ವಿರುದ್ಧ ರವಿವಾರ ಆರಂಭವಾದ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಗೌರವಾರ್ಹ ಮೊತ್ತ ಗಳಿಸಲು ನೆರವಾದರು.

ಶಾರ್ದೂಲ್ ಕೇವಲ 69 ಎಸೆತಗಳಲ್ಲಿ 8 ಬೌಂಡರಿ ಹಾಗೂ 3 ಸಿಕ್ಸರ್ಗಳ ಸಹಾಯದಿಂದ 75 ರನ್ ಗಳಿಸಿ ಮುಂಬೈ ತಂಡವು ಮೊದಲ ಇನಿಂಗ್ಸ್ ನಲ್ಲಿ 224 ರನ್ ಗಳಿಸಲು ಮಹತ್ವದ ಕೊಡುಗೆ ನೀಡಿದರು.

ಮೊದಲ ಇನಿಂಗ್ಸ್ ಆರಂಭಿಸಿದ ವಿದರ್ಭ ತಂಡದ ಹಿರಿಯ ಆರಂಭಿಕ ಬ್ಯಾಟರ್ ಧ್ರುವ್ ಶೋರೆ(0)ವಿಕೆಟನ್ನು ಉರುಳಿಸಿದ ಶಾರ್ದೂಲ್ ಮುಂಬೈಗೆ ಆರಂಭಿಕ ಮೇಲುಗೈ ಒದಗಿಸಿದರು. ವಿದರ್ಭ ತಂಡವು ರವಿವಾರ ಮೊದಲ ದಿನದಾಟದ ಅಂತ್ಯಕ್ಕೆ 31 ರನ್‌ ಗೆ 3 ವಿಕೆಟ್‌ ಗಳನ್ನು ಕಳೆದುಕೊಂಡಿದೆ. ಮುಂಬೈನ ಮೊದಲ ಇನಿಂಗ್ಸ್ ಮೊತ್ತವನ್ನು ಹಿಂದಿಕ್ಕಲು ಇನ್ನೂ 193 ರನ್ ಗಳಿಸಬೇಕಾಗಿದೆ.

ಅಥರ್ವ ಟೈಡ್(ಔಟಾಗದೆ 21) ಹಾಗೂ ನೈಟ್ ವಾಚ್ಮ್ಯಾನ್ ಆದಿತ್ಯ ಠಾಕ್ರೆ (0)ಕ್ರೀಸ್ನಲ್ಲಿದ್ದಾರೆ.

ತನ್ನ ವೃತ್ತಿಜೀವನದಲ್ಲಿ ಕೊನೆಯ ಪ್ರಥಮ ದರ್ಜೆ ಪಂದ್ಯವನ್ನಾಡುತ್ತಿರುವ ಮಧ್ಯಮ ವೇಗದ ಬೌಲರ್ ಧವಳ್ ಕುಲಕರ್ಣಿ ಔಟ್ ಸ್ವಿಂಗ್ ಮೂಲಕ ಅಮನ್ ಮೊಖಾಡೆ(8 ರನ್) ಹಾಗೂ ಟೆಸ್ಟ್ ಕ್ರಿಕೆಟ್‌ ನಲ್ಲಿ ತ್ರಿಶತಕ ಸಿಡಿಸಿರುವ ಕರುಣ್ ನಾಯರ್(0)ವಿಕೆಟ್‌ ಗಳನ್ನು ಉರುಳಿಸಿದ್ದಾರೆ.

ಮುಂಬೈನ ಅನುಭವಿ ಆಟಗಾರರಾದ ಅಜಿಂಕ್ಯ ರಹಾನೆ ಹಾಗೂ ಶ್ರೇಯಸ್ ಅಯ್ಯರ್ ತಲಾ 7 ರನ್ ಗಳಿಸಿದ ಹಿನ್ನೆಲೆಯಲ್ಲಿ ವಿಕೆಟ್ ನಷ್ಟವಿಲ್ಲದೆ 81 ರನ್ ಗಳಿಸಿದ್ದ 41 ಬಾರಿಯ ಚಾಂಪಿಯನ್ ಮುಂಬೈ ತಂಡ ಊಟದ ವಿರಾಮದ ವೇಳೆಗೆ 111 ರನ್‌ ಗೆ 6 ವಿಕೆಟ್‌ ಗಳನ್ನು ಕಳೆದುಕೊಂಡಿತು. 40 ರನ್ ಸೇರಿಸುವಷ್ಟರಲ್ಲಿ ಆರು ವಿಕೆಟ್‌ ಗಳು ಪತನಗೊಂಡವು.

ಮುಂಬೈ ತಂಡದ ನಾಯಕ ರಹಾನೆ ರಣಜಿ ಟ್ರೋಫಿ ಟೂರ್ನಿಯಲ್ಲಿ ತನ್ನ ಕಳಪೆ ಪ್ರದರ್ಶನ ಮುಂದುವರಿಸಿದರು. ಮುಂಬೈ ತಂಡಕ್ಕೆ ಅಗತ್ಯವಿದ್ದಾಗ ರಹಾನೆ ಅಲ್ಪ ಮೊತ್ತಕ್ಕೆ ಹರ್ಷ್ ದುಬೆಗೆ(3-62)ವಿಕೆಟ್ ಒಪ್ಪಿಸಿದರು.

ಕಳೆದ ವರ್ಷ ಇದೇ ಸಮಯದಲ್ಲಿ ರಹಾನೆ ರಾಷ್ಟ್ರೀಯ ತಂಡದಲ್ಲಿ ಮತ್ತೊಮ್ಮೆ ಸ್ಥಾನ ಪಡೆಯುವ ಸ್ಪರ್ಧೆಯಲ್ಲಿದ್ದರು. ಫೈನಲ್ ಪಂದ್ಯದ ಫಲಿತಾಂಶ ಏನೇ ಆಗಿದ್ದರೂ ಮುಂಬೈ ಆಯ್ಕೆ ಸಮಿತಿಯು 35ರ ಹರೆಯದ ರಹಾನೆ ಅವರನ್ನು ಮುಂದಿನ ವರ್ಷಕ್ಕೆ ತಂಡದಲ್ಲಿ ಉಳಿಸಿಕೊಳ್ಳುವುದೇ ಎಂಬ ಕುತೂಹಲವಿದೆ.

ಫಾರ್ಮ್ನಲ್ಲಿಲ್ಲದ, ರಾಷ್ಟ್ರೀಯ ತಂಡಕ್ಕೆ ಮತ್ತೊಮ್ಮೆ ವಾಪಸಾಗಲು ಯತ್ನಿಸುತ್ತಿರುವ ಶ್ರೇಯಸ್ ಅಯ್ಯರ್ ಇನ್ನೊಮ್ಮೆ ಬ್ಯಾಟಿಂಗ್ನಲ್ಲಿ ವೈಫಲ್ಯ ಅನುಭವಿಸಿ ಮುಂಬೈ ತಂಡವನ್ನು ಸಂಕಷ್ಟದಿಂದ ಪಾರು ಮಾಡುವಲ್ಲಿ ವಿಫಲರಾಗಿದ್ದಾರೆ. 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಅಯ್ಯರ್ 15 ಎಸೆತಗಳನ್ನು ಎದುರಿಸಿ ಕೇವಲ 7 ರನ್ ಗಳಿಸಿ ಔಟಾದರು.

ಬೆಳಗ್ಗಿನ ಅವಧಿಯಲ್ಲಿ ಉಮೇಶ್ ಯಾದವ್(2-43)ಆರಂಭಿಕ ಆಟಗಾರರಾದ ಪೃಥ್ವಿ ಶಾ(46 ರನ್) ಹಾಗೂ ಭೂಪೆನ್ ಲಾಲ್ವಾಣಿ(37 ರನ್) ಅವರಿಗೆ ಹೊಸ ಚೆಂಡಿನಲ್ಲಿ ಸವಾಲೊಡ್ಡಿದರು. ಟೆಸ್ಟ್ ಕ್ರಿಕೆಟ್‌ ನಲ್ಲಿ 170 ವಿಕೆಟ್‌ ಗಳನ್ನು ಪಡೆದಿರುವ ಯಾದವ್ ಊಟದ ವಿರಾಮದ ನಂತರ ಅಯ್ಯರ್ ವಿಕೆಟ್ ಪಡೆದು ಮುಂಬೈನ ಸಂಕಷ್ಟ ಹೆಚ್ಚಿಸಿದರು.

ವೇಗದ ಬೌಲರ್ ಯಶ್ ಠಾಕೂರ್ ಅವರು ಮುಂಬೈ ಓಪನರ್ ಭೂಪೆನ್ ಲಾಲ್ವಾಣಿ(37 ರನ್)ವಿಕೆಟ್ ಉರುಳಿಸಿ ವಿದರ್ಭಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ವಿದರ್ಭದ ನಾಯಕ ಅಕ್ಷಯ್ ವಾಡ್ಕರ್ ತನ್ನ ಬಲಬದಿಗೆ ಜಿಗಿದು ಒಂದೇ ಕೈಯಲ್ಲಿ ಕ್ಯಾಚ್ ಪಡೆದು ಗಮನ ಸೆಳೆದರು.

ಭೂಪೆನ್ ಔಟಾಗುವ ಮೊದಲು ಪೃಥ್ವಿ ಶಾ ಜೊತೆ ಮೊದಲ ವಿಕೆಟ್ಗೆ 81 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ಒದಗಿಸಿದರು.

ವಿದರ್ಭ ತಂಡ 9ನೇ ಓವರ್ನಲ್ಲಿಯೇ ಸ್ಪಿನ್ ಬೌಲರ್ನ್ನು ದಾಳಿಗಿಳಿಸಿತು. ಶಾ ಎಡಗೈ ಸ್ಪಿನ್ನರ್ ಹರ್ಷ್ ದುಬೆ(3-62)ಬೌಲಿಂಗ್ನಲ್ಲಿ ಸ್ವೀಪ್ ಮಾಡಲು ಹೋಗಿ ಕ್ಲೀನ್ಬೌಲ್ಡಾದರು.

ವಿಶ್ವಕಪ್ ಫಾರ್ಮನ್ನು ನಾಕೌಟ್ ಪಂದ್ಯದಲ್ಲಿ ಮುಂದುವರಿಸಿದ್ದ ಭಾರತದ ಅಂಡರ್-19 ವಿಶ್ವಕಪ್ ಹೀರೋ ಮುಶೀರ್ ಖಾನ್ ಕೇವಲ 6 ರನ್ ಗಳಿಸಿ ದುಬೆ ಬೀಸಿದ ಎಲ್ಬಿಡಬ್ಲ್ಯು ಬಲೆಗೆ ಬಿದ್ದರು.

ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಮುಂಬೈ ಸುಮಾರು 18 ಓವರ್ಗಳಲ್ಲಿ ಬೌಂಡರಿ ಗಳಿಸಲಿಲ್ಲ. ಶಾರ್ದೂಲ್ ಠಾಕೂರ್ ಆಗಮನದ ನಂತರ ಪಂದ್ಯದ ಚಿತ್ರಣ ಬದಲಿಸಿದರು. 8 ಬೌಂಡರಿಗಳನ್ನು ಸಿಡಿಸುವ ಮೂಲಕ ವಿದರ್ಭದ ಮೇಲೆ ಒತ್ತಡ ಹೇರಿದರು.

ಶಾರ್ದೂಲ್ ಸತತ ಎರಡನೇ ಶತಕ ಗಳಿಸುವ ಹಾದಿಯಲ್ಲಿದ್ದಾಗ ಜೊತೆಗಾರರು ಪೆವಿಲಿಯನ್‌ ಗೆ ಪೆವಿಲಿಯನ್‌ ಗೆ ಪರೇಡ್ ನಡೆಸಿದರು. ಶಾರ್ದೂಲ್ ಕೊನೆಯ ಬ್ಯಾಟರ್ ಆಗಿ ಪೆವಿಲಿಯನ್ ಸೇರಿದರು.

ಹಲವು ಬಾರಿ ಉಪಯುಕ್ತ ರನ್ ಗಳಿಸಿ ಮುಂಬೈಯನ್ನು ದುಸ್ಥಿತಿಯಿಂದ ಪಾರಾಗಿಸಿದ್ದ ತ್ರಿವಳಿ ಬ್ಯಾಟರ್ಗಳಾದ ತನುಷ್ ಕೋಟ್ಯಾನ್(8 ರನ್), ತುಷಾರ್ ದೇಶಪಾಂಡೆ(14 ರನ್) ಹಾಗೂ ಶಮ್ಸ್ ಮುಲಾನಿ(13 ರನ್)ಇಂದು ಪ್ರಮುಖ ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.

ವಿದರ್ಭದ ಪರ ಯಶ್ ಠಾಕೂರ್(3-54) ಹಾಗೂ ಹರ್ಷ್ ದುಬೆ (3-62)ತಲಾ ಮೂರು ವಿಕೆಟ್‌ ಗಳನ್ನು ಪಡೆದರು. ಉಮೇಶ್ ಯಾದವ್ (2-43) ಎರಡು ವಿಕೆಟ್ ಕಬಳಿಸಿ ಗಮನ ಸೆಳೆದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News