ರೋಹಿತ್ ಶರ್ಮಾ ಮೊದಲ ಟೆಸ್ಟ್‌ನಿಂದ ಹೊರಗುಳಿಯುವರೇ?
ಮುಂಬೈ : ಬಾರ್ಡರ್-ಗವಾಸ್ಮರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಮುನ್ನ, ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ತಂಡದ ಇತರ ಸದಸ್ಯರ ಜೊತೆಗೆ ಆಸ್ಟ್ರೇಲಿಯಕ್ಕೆ ಪ್ರಯಾಣಿಸುವುದಿಲ್ಲ ಎಂದು ರೆವ್ ಸ್ಪೋರ್ಟ್ಸ್ ವರದಿ ಮಾಡಿದೆ.
ಭಾರತೀಯ ಕ್ರಿಕೆಟ್ ತಂಡವು ಎರಡು ತಂಡಗಳಲ್ಲಿ ರವಿವಾರ ಮತ್ತು ಸೋಮವಾರ ಆಸ್ಟ್ರೇಲಿಯಕ್ಕೆ ಪ್ರಯಾಣಿಸಲು ಎಲ್ಲಾ ಸಿದ್ಧತೆಗಳು ನಡೆದಿವೆ. ಆದರೆ, ರೋಹಿತ್ ಶರ್ಮಾ ಪ್ರಯಾಣದ ವಿಷಯದಲ್ಲಿ ಅಂತಿಮ ನಿರ್ಧಾರವೊಂದು ಇನ್ನೂ ಹೊರಹೊಮ್ಮಿಲ್ಲ.
‘‘ವೈಯಕ್ತಿಕ ಕಾರಣಗಳಿಗಾಗಿ’’ ರೋಹಿತ್ ತಂಡದೊಂದಿಗೆ ಪ್ರಯಾಣಿಸುತ್ತಿಲ್ಲ ಎಂದು ವರದಿ ಹೇಳಿಕೊಂಡಿದೆ.
ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಸರಣಿಯ ಮೊದಲ ಪಂದ್ಯವು ಪರ್ತ್‌ನಲ್ಲಿ ನವೆಂಬರ್ 22ರಂದು ಆರಂಭಗೊಳ್ಳಲಿದೆ.
ಇದಕ್ಕೂ ಮುನ್ನ, ಮೊದಲ ಟೆಸ್ಟ್ ನಿಂದ ರೋಹಿತ್ ಶರ್ಮ ಹೊರಗುಳಿದರೆ ನಾಯಕತ್ವವನ್ನು ಜಸ್‌ಪ್ರೀತ್ ಬುಮ್ರಾ ವಹಿಸಬಹುದು ಎಂಬ ಸಲಹೆಯನ್ನು ಆಸ್ಟ್ರೇಲಿಯದ ಮಾಜಿ ಆಟಗಾರ ರಿಕಿ ಪಾಂಟಿಂಗ್ ನೀಡಿದ್ದಾರೆ.
ಮೊದಲ ಟೆಸ್ಟ್‌ಗೆ ರೋಹಿತ್ ಲಭ್ಯತೆ ಬಗ್ಗೆ ಸಂಶಯಗಳಿವೆ. ಮೊದಲ ಟೆಸ್ಟ್‌ನಲ್ಲಿ ಆಡುವ ಬಗ್ಗೆ ಇನ್ನೂ ತನಗೆ ಖಚಿತವಿಲ್ಲ ಎಂಬುದಾಗಿ ಸ್ವತಃ ರೋಹಿತ್ ಇತ್ತೀಚೆಗೆ ಹೇಳಿದ್ದರು.
ಉಪ ನಾಯಕ ಬುಮ್ರಾ ಬೌಲಿಂಗ್ ಮಾಡುವುದರ ಜೊತೆಗೆ ನಾಯಕತ್ವವನ್ನೂ ನಿಭಾಯಿಸಲು ಸಾಕಷ್ಟು ಅನುಭವವನ್ನು ಹೊಂದಿದ್ದಾರೆ ಎಂದು ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ.