ಅಫ್ಘಾನ್ ವಿರುದ್ಧ ಪ್ರಯಾಸದ ಗೆಲುವು ಕಂಡ ದಕ್ಷಿಣ ಆಫ್ರಿಕಾ
ಅಹಮದಾಬಾದ್ : ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಅಫ್ಘಾನಿಸ್ತಾನ ವಿರುದ್ಧ 5 ವಿಕೆಟ್ ಗಳ ಜಯ ಸಾಧಿಸಿದೆ.
ಸೆಮೀಸ್ ಗೇರಲು ಕಷ್ಟ ಸಾಧ್ಯವಾದ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಬಲಿಷ್ಟ ಆಫ್ರಿಕಾ ವಿರುದ್ಧ ಸೋಲುವುದರೊಂದಿಗೆ 2023 ಏಕದಿನ ವಿಶ್ವಕಪ್ ಟೂರ್ನಿಗೆ ವಿದಾಯ ಹೇಳಿದೆ. ಆಕರ್ಷಕ ಗೆಲುವು ಹಾಗೂ ಅನಿರೀಕ್ಷಿತ ಸೋಲುಗಳ ಮೂಲಕ ಸೆಮೀಸ್ ಸ್ಪರ್ಧಿಯಾಗಿದ್ದ ಅಫ್ಘಾನಿಸ್ತಾನ ಟೂರ್ನಿಯಲ್ಲಿ ಕೆಲವು ಅದ್ಭುತ ಗೆಲುವುಗಳ ಮೂಲಕ ಈ ಬಾರಿಯ ವಿಶ್ವಕಪ್ ಸ್ಪರಣೀಯವಾಗಿಸಿತ್ತು.
ಒಮರ್ಝೈ ಆಕರ್ಷಕ ಶತಕ ವಂಚಿತ ಬ್ಯಾಟಿಂಗ್ ಪ್ರದರ್ಶನದಿಂದ ಅಫ್ಘಾನ್ ತಂಡ ಹರಿಣಗಳ ವಿರುದ್ಧ 244 ರನ್ ಪೇರಿಸಿತ್ತು. ಈ ಅಲ್ಪ ಗುರಿ ಬೆನ್ನಟ್ಟಲು ಬ್ಯಾಟಿಂಗ್ ಬಂದ ದಕ್ಷಿಣ ಆಫ್ರಿಕಾಗೆ ಆರಂಭಿಕರಾದ ಕ್ವಿಂಟನ್ ಡಿಕಾಕ್ ಹಾಗೂ ತೆಂಬ ಬವುಮ ಮೊದಲ ವಿಕೆಟ್ ಪತನಕ್ಕೆ 66 ರನ್ ಗಳ ಜೊತೆಯಾಟ ನೀಡಿದರು. ಓಪನರ್ ಕ್ವಿಂಟನ್ ಡಿಕಾಕ್ 41 ರನ್ ಗೆ ಮುಹಮ್ಮದ್ ನಬಿ ಬೌಲಿಂಗ್ ನಲ್ಲಿ ಎಲ್ ಬಿಡಬ್ಲೂ ಆದರೆ ಅವರ ಬೆನ್ನಿಗೆ ನಾಯಕ ತೆಂಬ ಬವುಮ 23 ರನ್ ಗಳಿಸಿ ಮುಜೀಬ್ ಎಸೆತದಲ್ಲಿ ಜೆರಾಲ್ಡ್ ಗೆ ಕ್ಯಾಚಿತ್ತು ಟೂರ್ನಿಯುದ್ದಕ್ಕೂ ನೀಡಿದ ಕಳಪೆ ಪ್ರದರ್ಶನ ಮುಂದುವರಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಂದ ಐಡಮ್ ಮಾರ್ಕ್ರಮ್ 25 ರನ್ ಗಳಿಸಿದರೆ, ದಕ್ಷಿಣ ಆಫ್ರಿಕಾ ಸ್ಟೋಟಕ ಆಟಗಾರ ಹೆನ್ರಿ ಕ್ಲಾಸನ್ 10 ರನ್ ಪೇರಿಸಿ ಕ್ರಮವಾಗಿ ಇಬ್ಬರೂ ರಶೀದ್ ಖಾನ್ ಗೆ ವಿಕೆಟ್ ಒಪ್ಪಿಸಿದರು. ಡೇವಿಡ್ ಮಿಲ್ಲರ್ 24 ರನ್ ಬಾರಿಸಿ ಮುಹಮ್ಮದ್ ನಬಿ ಗೆ ವಿಕೆಟ್ ನೀಡಿದರು.
ದಕ್ಷಿಣ ಆಫ್ರಿಕಾ ಪ್ರಯಾಸದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ವಾನ್ ಡೆರ್ ಡುಸ್ಸನ್ 6 ಬೌಂಡರಿ 1 ಸಿಕ್ಸರ್ ಸಹಿತ ಅಜೇಯ 76 ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಅವರಿಗೆ ಸಾಥ್ ನೀಡಿದ್ದ ಆಂಡಿಲೆ ಫೆಲುಕ್ವಾಯೋ 39 ರನ್ ಉಪಯುಕ್ತ ಕೊಡುಗೆ ನೀಡಿದ್ದರು.
ಅಫ್ಘಾನಿಸ್ತಾನ ಪರ ಮುಹಮ್ಮದ್ ನಬಿ ಹಾಗೂ ರಶೀದ್ ಖಾನ್ ತಲಾ 2 ವಿಕೆಟ್ ಪಡೆದರು. ಮುಜೀಬ್ ಒಂದು ವಿಕೆಟ್ ಕಬಳಿಸಿದರು.