ಥಾಮಸ್ ಕಪ್, ಉಬರ್ ಕಪ್ ಪಂದ್ಯಾವಳಿ |ಕ್ವಾರ್ಟರ್ ಫೈನಲ್ ನಲ್ಲಿ ಭಾರತಕ್ಕೆ ಸರ್ವಾಂಗೀಣ ಸೋಲು
ಚೆಂಗ್ಡು (ಚೀನಾ): ಚೀನಾದ ಚೆಂಗ್ಡು ನಗರದಲ್ಲಿ ನಡೆಯುತ್ತಿರುವ ಪುರುಷರ ಥಾಮಸ್ ಕಪ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಕ್ವಾರ್ಟರ್ಫೈನಲ್ನಲ್ಲಿ ಗುರುವಾರ, ಭಾರತೀಯ ತಂಡವು ಚೀನಾದ ವಿರುದ್ಧ 1-3 ಅಂತರದಿಂದ ಸೋತಿದೆ. ಅದೇ ವೇಳೆ, ಮಹಿಳೆಯರ ಉಬರ್ ಕಪ್ನಲ್ಲಿ, ಭಾರತವು ಜಪಾನ್ ವಿರುದ್ಧ 0-3ರ ಪರಾಭವ ಅನುಭವಿಸಿದೆ.
ಎರಡು ವರ್ಷಗಳಿಗೊಮ್ಮೆ ನಡೆಯುವ ಪಂದ್ಯಾವಳಿಯಲ್ಲಿ, ಕಳೆದ ಬಾರಿ ಭಾರತೀಯ ಪುರುಷರ ತಂಡವು ಚೊಚ್ಚಲ ಪ್ರಶಸ್ತಿ ಜಯಿಸಿತ್ತು. ಆದರೆ, ಈ ಬಾರಿ ಭಾರತೀಯ ಬ್ಯಾಡ್ಮಿಂಟನ್ ಆಟಗಾರರು ಕಠಿಣ ಸವಾಲನ್ನು ಎದುರಿಸಿದರು. ಒಂಭತ್ತನೇ ವಿಶ್ವ ರ್ಯಾಂಕಿಂಗ್ ಆಟಗಾರ ಎಚ್.ಎಸ್. ಪ್ರಣಯ್, ಮೂರನೇ ವಿಶ್ವ ರ್ಯಾಂಕಿಂಗ್ನ ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಹಾಗೂ ಧ್ರುವ್ ಕಪಿಲ ಮತ್ತು ಸಾಯಿ ಪ್ರತೀಕ್ ಕೆ. ತಮ್ಮ ಪಂದ್ಯಗಳಲ್ಲಿ ನಿರ್ವಹಣೆ ನೀಡುವಲ್ಲಿ ವಿಫಲವಾದರು.
ಬುಧವಾರ ಇಂಡೋನೇಶ್ಯ ವಿರುದ್ಧದ ಪಂದ್ಯವನ್ನು 1-4ರಿಂದ ಸೋತ ಬಳಿಕ, ಭಾರತೀಯ ತಂಡವು ತನ್ನ ಗುಂಪು ಹಂತವನ್ನು ಎರಡನೇ ಸ್ಥಾನದೊಂದಿಗೆ ಮುಗಿಸಿತ್ತು. ಗುರುವಾರ ನಡೆದ ಕ್ವಾರ್ಟರ್ಫೈನಲ್ನಲ್ಲಿ ಚೀನಾವು ಭಾರತವನ್ನು ಆಟದ ಎಲ್ಲಾ ವಿಭಾಗಗಳಲ್ಲಿ ಪರಿಪೂರ್ಣವಾಗಿ ಸೋಲಿಸಿತು.
ಮೊದಲ ಪಂದ್ಯದಲ್ಲಿ, ಪ್ರಣಯ್ರನ್ನು ಚೀನಾದ ಎರಡನೇ ವಿಶ್ವ ರ್ಯಾಂಕಿಂಗ್ನ ಶಿ ಯು ಕಿ 66 ನಿಮಿಷಗಳಲ್ಲಿ 15-21, 21-11, 21-14 ಗೇಮ್ಗಳಿಂದ ಸೋಲಿಸಿದರು.
ಬಳಿಕ, ಸಾತ್ವಿಕ್ ಮತ್ತು ಚಿರಾಗ್ ಜೋಡಿಯನ್ನು ವಿಶ್ವ ನಂಬರ್ ವನ್ ಜೋಡಿ ಲಿಯಂಗ್ ವೇ ಕೆಂಗ್ ಮತ್ತು ವಾಂಗ್ ಚಾಂಗ್ 21-15, 11-21, 21-12 ಗೇಮ್ಗಳಿಂದ ಸೋಲಿಸಿತು.
ಬಳಿಕ, ಎಲ್ಲರ ಕಣ್ಣುಗಳು ಲಕ್ಷ್ಯ ಸೇನ್ರತ್ತ ಹೊರಳಿದವು. ಆದರೆ, ಅವರು ನಿರಾಶೆಗೊಳಿಸಲಿಲ್ಲ. ಅವರು ಚೀನಾದ ಲಿ ಶಿ ಫೆಂಗ್ರನ್ನು 13-21, 21-8, 21-14 ಗೇಮ್ಗಳಿಂದ ಮಣಿಸಿದರು.
ಆದರೆ, ಬಳಿಕ, ಧ್ರುವ ಮತ್ತು ಸಾಯಿ ಜೋಡಿಯು ರೆನ್ ಕ್ಸಿಯಾಂಗ್ ಯು ಮತ್ತು ಹೆ ಜಿ ಟಿಂಗ್ ಜೋಡಿಯ ವಿರುದ್ಧ 10-21, 10-21ರ ಗೇಮ್ಗಳಿಂದ ಸೋಲನುಭವಿಸಿತು. ಅದರೊಂದಿಗೆ ಭಾರತದ ಪ್ರಶಸ್ತಿ ಕನಸು ಭಗ್ನಗೊಂಡಿತು.
ಮಹಿಳೆಯರ ಉಬರ್ ಕಪ್ ಕ್ವಾರ್ಟರ್ಫೈನಲ್ನಲ್ಲಿ ಭಾರತವು ಜಪಾನ್ ವಿರುದ್ಧ 0-3 ಅಂತರದ ಸೋಲು ಕಂಡಿದೆ.
ಭಾರತದ ಅಶ್ಮಿತಾ ಚಾಲಿಹರನ್ನು ಜಪಾನ್ನ ಅಯಾ ಒಹೋರಿ 67 ನಿಮಿಷಗಳಲ್ಲಿ 21-10, 20-22, 21-15 ಗೇಮ್ಗಳಿಂದ ಸೋಲಿಸಿದರು.
ಬಳಿಕ ಇಶಾರಾಣಿಯನ್ನು ಜಪಾನ್ನ ಮಾಜಿ ವಿಶ್ವ ನಂಬರ್ ವನ್ ನೊರೊಮಿ ಒಕುಹರ 21-15, 21-12 ಗೇಮ್ಗಳಿಂದ ಹಿಮ್ಮೆಟ್ಟಿಸಿದರು.
ಬಳಿಕ ನಡೆದ ಡಬಲ್ಸ್ನಲ್ಲಿ, ಭಾರತದ ರಾಷ್ಟ್ರೀಯ ಚಾಂಪಿಯನ್ ಜೋಡಿ ಪ್ರಿಯಾ ಕೊಂಜೆಂಗ್ಬಮ್ ಮತ್ತು ಶ್ರುತಿ ಮಿಶ್ರಾರನ್ನು ನಾಲ್ಕನೇ ವಿಶ್ವ ರ್ಯಾಂಕಿಂಗ್ನ ನಮಿ ಮತ್ಸುಯಮ ಮತ್ತು ಚಿಹರು ಶಿಡ 21-8, 21-9 ನೇರ ಗೇಮ್ಗಳಿಂದ ಪರಾಭವಗೊಳಿಸಿದರು.
ಭಾರತ ಮೂರು ಬಾರಿ- 1957, 2014 ಮತ್ತು 2016- ಉಬರ್ ಕಪ್ನಲ್ಲಿ ಸೆಮಿಫೈನಲ್ ತಲುಪಿದೆ.