ವಯಸ್ಸಿನ ಕುರಿತ ವಿವಾದಕ್ಕೆ ಸಿಲುಕಿದ ವೈಭವ್ ಸೂರ್ಯವಂಶಿ; ತಂದೆ ಪ್ರತಿಕ್ರಿಯಿಸಿದ್ದು ಹೀಗೆ..
ಹೊಸದಿಲ್ಲಿ: ಐಪಿಎಲ್ 2025 ಹರಾಜಿನಲ್ಲಿ ಭಾರಿ ಮೊತ್ತಕ್ಕೆ ಹರಾಜಾಗಿರುವ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬಿಹಾರದ ಬ್ಯಾಟರ್ ವೈಭವ್ ಸೂರ್ಯವಂಶಿ ಸುತ್ತ ವಯಸ್ಸಿನ ವಿವಾದ ಸುತ್ತಿಕೊಂಡಿದೆ. ಕೆಲವರು ವೈಭವ್ ಸೂರ್ಯವಂಶಿಯ ವಯಸ್ಸು 13 ವರ್ಷವಲ್ಲ; ಬದಲಿಗೆ 15 ವರ್ಷ ಎಂದು ಆರೋಪಿಸುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ವೈಭವ್ ಸೂರ್ಯವಂಶಿಯ ತಂದೆ ಸಂಜೀವ್ ಸೂರ್ಯವಂಶಿ, ತನ್ನ ಪುತ್ರನ ವಿರುದ್ಧದ ಆರೋಪಗಳನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ.
ಈ ಕುರಿತು PTI ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಸಂಜೀವ್ ಸೂರ್ಯವಂಶಿ, “ವೈಭವ್ ಸೂರ್ಯವಂಶಿ ಎಂಟೂವರೆ ವರ್ಷದವನಾಗಿದ್ದಾಗ ಬಿಸಿಸಿಐನ ಮೂಳೆ ಪರೀಕ್ಷೆಗೆ ಹಾಜರಾಗಿದ್ದ. ಆತ ಈಗಾಗಲೇ ಅಂಡರ್ 19 ಭಾರತ ತಂಡದಲ್ಲಿ ಆಡಿದ್ದಾನೆ. ನಾವು ಯಾರಿಗೂ ಹೆದರುವುದಿಲ್ಲ. ಆತ ಮತ್ತೆ ವಯಸ್ಸಿನ ಪರೀಕ್ಷೆಗೊಳಗಾಗಲು ಸಿದ್ಧ” ಎಂದು ಸ್ಪಷ್ಟನೆ ನೀಡಿದ್ದಾರೆ.
ತಮ್ಮ 10 ವರ್ಷದ ಪುತ್ರನ ಕ್ರಿಕೆಟ್ ಬಯಕೆಯನ್ನು ಪೂರೈಸಲು ಸಂಜೀವ್ ಸೂರ್ಯವಂಶಿ ತಮ್ಮ ಕೃಷಿ ಭೂಮಿಯನ್ನು ಮಾರಾಟ ಮಾಡಿದ್ದರು. ಆದರೆ, ಇನ್ನು ಮೂರು ವರ್ಷಗಳಲ್ಲಿ ತಮ್ಮ ಪುತ್ರ ಇತಿಹಾಸ ನಿರ್ಮಿಸಲಿದ್ದಾನೆ ಎಂದು ಅವರು ಊಹಿಸಿರಲಿಲ್ಲ. ಜಿದ್ದಾದಲ್ಲಿ ನಡೆದ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆಯ ಎರಡನೆ ಮತ್ತು ಕೊನೆಯ ದಿನದಂದು 13 ವರ್ಷ, 8 ತಿಂಗಳ ವೈಭವ್ ಸೂರ್ಯವಂಶಿ ರೂ. 1.10 ಕೋಟಿ ಮೊತ್ತಕ್ಕೆ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಮಾರಾಟವಾದರು.
ತಮ್ಮ ಪುತ್ರನ ಕ್ರಿಕೆಟ್ ಬಯಕೆಯನ್ನು ಪೂರೈಸಲು ಸಮಷ್ಠಿಪುರ್ ನಿಂದ ಕೇವಲ 15 ಕೀಮೀ ದೂರದಲ್ಲಿರುವ ತಮ್ಮ ತವರು ಗ್ರಾಮ ಮೋತಿಪುರದಲ್ಲಿನ ಕೃಷಿ ಭೂಮಿಯನ್ನು ಮಾರಾಟ ಮಾಡಿದ್ದ ಸಂಜೀವ್ ಸೂರ್ಯವಂಶಿಗೆ ಇದೀಗ ತಮ್ಮ ಪುತ್ರನ ಸಾಧನೆ ಕಂಡು ಮಾತೇ ಹೊರಡುತ್ತಿಲ್ಲ.
“ನನ್ನ ಪುತ್ರ ತುಂಬಾ ಕಠಿಣ ಪರಿಶ್ರಮ ಪಟ್ಟಿದ್ದಾನೆ. ಕೇವಲ 8 ವರ್ಷದವನಾಗಿದ್ದಾಗ ಅಂಡರ್ 16 ಜಿಲ್ಲಾ ತರಬೇತಿಗೆ ಅವಕಾಶ ಪಡೆದಿದ್ದ. ನಾನು ಆತನಿಗೆ ಕ್ರಿಕೆಟ್ ತರಬೇತಿ ಕೊಡಿಸಲು ಸಮಷ್ಠಿಪುರಕ್ಕೆ ಕರೆದುಕೊಂಡು ಹೋಗಿ, ಮರಳಿ ವಾಪಸು ಕರೆದುಕೊಂಡು ಬರುತ್ತಿದ್ದೆ” ಎಂದು ತಮ್ಮ ಕಷ್ಟದ ದಿನಗಳನ್ನು ಸಂಜೀವ್ ಸೂರ್ಯವಂಶಿ ಸ್ಮರಿಸಿದ್ದಾರೆ.
ಸದ್ಯ ದುಬೈನಲ್ಲಿ ನಡೆಯುತ್ತಿರುವ ಅಂಡರ್ 19 ಏಶ್ಯ ಕಪ್ ನಲ್ಲಿ ವೈಭವ್ ಸೂರ್ಯವಂಶಿ ಪಾಲ್ಗೊಂಡಿದ್ದಾರೆ.