ವಿರಾಟ್ ಕೊಹ್ಲಿ ಅವರನ್ನು ಬಾಬರ್ ಆಝಮ್ ಸಹಿತ ಯಾವುದೇ ಕ್ರಿಕೆಟಿಗನಿಗೆ ಹೋಲಿಸಬಾರದು : ಅಹ್ಮದ್ ಶಹಝಾದ್

Update: 2024-07-02 17:14 GMT

Screengrab/GeoNews/ICC

ದುಬೈ : ಟಿ20 ವಿಶ್ವಕಪ್ ಪ್ರಶಸ್ತಿ ವಿಜೇತ ಭಾರತೀಯ ಕ್ರಿಕೆಟ್ ತಂಡವನ್ನು ವಿಶ್ವದೆಲ್ಲೆಡೆ ಶ್ಲಾಘಿಸಲಾಗುತ್ತಿದೆ. ಶನಿವಾರ ಬಾರ್ಬಡೋಸ್ ನಲ್ಲಿ ನಡೆದಿದ್ದ ರೋಚಕ ಫೈನಲ್ ಪಂದ್ಯದಲ್ಲಿ ರೋಹಿತ್ ಬಳಗವು ದಕ್ಷಿಣ ಆಫ್ರಿಕಾವನ್ನು 7 ರನ್ ನಿಂ ದ ಸೋಲಿಸಿತ್ತು.

ಪಂದ್ಯಾವಳಿಯಲ್ಲಿ 7 ಇನಿಂಗ್ಸ್ ಗಳಲ್ಲಿ ಕೇವಲ 75 ರನ್ ಗಳಿಸಿದ್ದ ಕೊಹ್ಲಿ ಫೈನಲ್ ಪಂದ್ಯದಲ್ಲಿ 59 ಎಸೆತಗಳಲ್ಲಿ 76 ರನ್ ಗಳಿಸಿ ಗೆಲುವಿನ ರೂವಾರಿ ಎನಿಸಿಕೊಂಡಿದ್ದರು. ಭಾರತೀಯ ಕ್ರಿಕೆಟ್ ಸ್ಟಾರ್ ಕೊಹ್ಲಿ ಅವರನ್ನು ಹೊಗಳಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅಹ್ಮದ್ ಶಹಝಾದ್, ವಿರಾಟ್ ಕೊಹ್ಲಿ ಅವರ ಇನಿಂಗ್ಸ್ ಇಲ್ಲದೇ ಇರುತ್ತಿದ್ದರೆ ಭಾರತವು ಟಿ20 ವಿಶ್ವಕಪ್ ಫೈನಲ್ ಪಂದ್ಯ ಗೆಲ್ಲುತ್ತಿರಲಿಲ್ಲ. ಬಾಬರ್ ಆಝಮ್ ಅಥವಾ ಇತರ ಯಾವುದೇ ಕ್ರಿಕೆಟಿಗನನ್ನು ಭಾರತದ ಮಾಜಿ ನಾಯಕನಿಗೆ ಹೋಲಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.

ವೈರಲ್ ವೀಡಿಯೊದಲ್ಲಿ ಮಾತನಾಡಿದ ಅಹ್ಮದ್, ವಿರಾಟ್ ಕೊಹ್ಲಿ ನಮ್ಮ ತಲೆಮಾರಿನ ದಂತಕತೆ ಹಾಗೂ ಅವರು ಟಿ20 ಕ್ರಿಕೆಟ್ ನಲ್ಲಿ ಪರಂಪರೆಯನ್ನು ಬಿಟ್ಟು ಹೋಗುತ್ತಿದ್ದಾರೆ. ಅವರು ಯಾವಾಗಲೂ ತಮ್ಮ ಕ್ರಿಕೆಟನ್ನು ಉತ್ಸಾಹದಿಂದ ಆಡುತ್ತಾರೆ. ಅವರ ವಿದಾಯದ ಪಂದ್ಯದಲ್ಲೂ ಬೇರೊಬ್ಬರು ವಿಕೆಟ್ ಗಳನ್ನು ಕಬಳಿಸಿದಾಗ ಅವರು ಲಾಂಗ್ಆನ್ ಹಾಗೂ ಲಾಂಗ್ ಆಫ್ನಲ್ಲಿ ಸಂಭ್ರಮಿಸುತ್ತಿದ್ದರು ಎಂದರು.

ಕೊಹ್ಲಿ ಇಡೀ ವಿಶ್ವಕಪ್ ನಲ್ಲಿ ರನ್ ಗಳಿಸಿರಲಿಲ್ಲ. ಆದರೆ ಫೈನಲ್ ನಲ್ಲಿ ಅವರು ರನ್ ಗಳಿಸಿದ್ದರು. ಫೈನಲ್ ನಲ್ಲಿ ಅವರು ರನ್ ಗಳಿಸದೇ ಇರುತ್ತಿದ್ದರೆ ಭಾರತ ಗೆಲ್ಲುತ್ತಿರಲಿಲ್ಲ. ಭಾರತಕ್ಕೆ ಯಾವುದೇ ಸ್ವರೂಪದ ಪಂದ್ಯದಲ್ಲಿ ಕೊಹ್ಲಿ ಅವರಿಂದ ತೆರವಾದ ಸ್ಥಾನ ತುಂಬುವುದು ಸುಲಭವಲ್ಲ. ಐಸಿಸಿ ಟೂರ್ನಿಗಳಲ್ಲಿ ಕೊಹ್ಲಿ ಅದ್ಭುತ ಸ್ಟ್ರೈಕ್ರೇಟ್ ಹಾಗೂ ಸರಾಸರಿ ಹೊಂದಿದ್ದಾರೆ. ಅವರನ್ನು ಬಾಬರ್ ಆಝಮ್ ಹಾಗೂ ನನ್ನೊಂದಿಗೆ ಹೋಲಿಸುವುದು ಸರಿಯಲ್ಲ. ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅರ್ಹವಾಗಿಯೇ ವಿಶ್ವಕಪ್ನೊಂದಿಗೆ ವಿದಾಯ ಹೇಳಿದ್ದಾರೆ ಎಂದು ಅಹ್ಮದ್ ಅಭಿಪ್ರಾಯಪಟ್ಟಿದ್ದಾರೆ.

ಕೊಹ್ಲಿ ಟಿ20 ಪಂದ್ಯದಿಂದ ನಿವೃತ್ತಿಯಾಗಿದ್ದು 2010ರಲ್ಲಿ ಚೊಚ್ಚಲ ಪಂದ್ಯ ಆಡಿದ ಬಳಿಕ 125 ಪಂದ್ಯಗಳಲ್ಲಿ ಒಂದು ಶತಕ ಹಾಗೂ 38 ಅರ್ಧಶತಕಗಳ ಸಹಿತ ಒಟ್ಟು 4188 ರನ್ ಗಳಿಸಿದ್ದರು. 35 ಟಿ20 ವಿಶ್ವಕಪ್ ಪಂದ್ಯಗಳಲ್ಲಿ 128ರ ಸ್ಟ್ರೈಕ್ರೇಟ್ ನಲ್ಲಿ 15 ಅರ್ಧಶತಕಗಳ ಸಹಿತ 1,292 ರನ್ ಗಳಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News