ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ | ಜಾವೆಲಿನ್ ಥ್ರೋ ನಲ್ಲಿ ಚಿನ್ನ ಗೆದ್ದಿದ್ದ ಇರಾನ್ ನ ಅಥ್ಲೀಟ್ ಅನರ್ಹಗೊಂಡಿದ್ದೇಕೆ?

Update: 2024-09-08 07:52 GMT

Photo: X/Paralympics

ಪ್ಯಾರಿಸ್ : ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ 50 ಕೆ.ಜಿ. ವಿಭಾಗದಲ್ಲಿ 100 ಗ್ರಾಂ ತೂಕ ಹೆಚ್ಚಿದ್ದ ಕಾರಣಕ್ಕೆ ಭಾರತದ ಕುಸ್ತಿಪಟು ವಿನೇಶ್ ಪೋಗಟ್ ಫೈನಲ್ ನಿಂದ ಅನರ್ಹಗೊಂಡಿದ್ದರು. ತಾನು ಗೆಲ್ಲಬೇಕಾಗಿದ್ದ ಪದಕವನ್ನು ಕಳೆದುಕೊಂಡಿದ್ದರು. ಇಂತಹದ್ದೇ ಮತ್ತೊಂದು ಘಟನೆ ಪ್ಯಾರಾಲಿಂಪಿಕ್ಸ್ ನಲ್ಲಿ ನಡೆದಿದ್ದು, ಇರಾನ್ ನ ಪ್ಯಾರಾ-ಅಥ್ಲೀಟ್ ಸಡೆಗ್ ಬೀಟ್ ಸಯಾಹ್ ತಾನು ಗೆದ್ದುಕೊಂಡ ಚಿನ್ನದ ಪದಕವನ್ನು ನಿಯಮಗಳ ಉಲ್ಲಂಘನೆ ಕಾರಣಕ್ಕೆ ಕಳೆದುಕೊಂಡಿದ್ದಾರೆ.

ಜಾವೆಲಿನ್ ಥ್ರೋ F41 ಸ್ಪರ್ಧೆ ಫೈನಲ್ ನಲ್ಲಿ ಇರಾನ್‌ನ ಸಡೆಗ್ ಬೀಟ್ ಸಯಾಹ್ 47.64 ಮೀಟರ್ ದೂರಕ್ಕೆ ಎಸೆದು ಚಿನ್ನವನ್ನು ಗೆದ್ದುಕೊಂಡಿದ್ದರು, ಇದು ಪ್ಯಾರಾಲಿಂಪಿಕ್ಸ್ ನ ಹೊಸ ದಾಖಲೆಯಾಗಿದೆ. ನವದೀಪ್ 47.32 ಮೀ. ಎಸೆತದೊಂದಿಗೆ ಬೆಳ್ಳಿಗೆ ತೃಪ್ತಿಪಟ್ಟಿದ್ದರು.

ಫೈನಲ್ ನಡೆದ ಕೆಲವೇ ಕ್ಷಣದಲ್ಲಿ ನವದೀಪ್ ಅವರಿಗೆ ಬೆಳ್ಳಿ ಪದಕದಿಂದ ಚಿನ್ನದ ಪದಕಕ್ಕೆ ಅಪ್ ಗ್ರೇಡ್ ನೀಡಲಾಗಿದೆ. ಈ ಮೂಲಕ ಭಾರತವು ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ ನಲ್ಲಿ 7ನೇ ಚಿನ್ನದ ಪದಕವನ್ನು ಗೆದ್ದಂತಾಗಿದೆ.

ಬೆಳ್ಳಿ ಗೆದ್ದಿದ್ದ ನವದೀಪ್ ಗೆ ಚಿನ್ನ ಸಿಕ್ಕಿದ್ದೇಗೆ?

ಇರಾನ್‌ನ ಸಡೆಗ್ ಫೈನಲ್ ನಲ್ಲಿ ನವದೀಪ್ ಗಿಂತ ಉತ್ತಮ ಪ್ರದರ್ಶನ ನೀಡಿ ಚಿನ್ನವನ್ನು ಗೆದ್ದುಕೊಂಡಿದ್ದರು. ಆದರೆ ಗೆಲುವಿನ ಸಂಭ್ರಮಾಚರಣೆ ಮಾಡುವಾಗ ತನ್ನ ದೇಶದ್ದಲ್ಲದ ಧ್ವಜವನ್ನು ಪ್ರದರ್ಶನ ಮಾಡಿದ್ದಾರೆಂದು ಆರೋಪಿಸಿ ಅವರ ಚಿನ್ನದ ಪದಕಕ್ಕೆ ತಡೆ ನೀಡಲಾಗಿದೆ.

ವಿಶ್ವ ಪ್ಯಾರಾ ಅಥ್ಲೆಟಿಕ್ಸ್ (WPA) ಪ್ಯಾರಾ ಅಥ್ಲೆಟಿಕ್ಸ್ ಕ್ರೀಡೆಯಲ್ಲಿ ಸಮಗ್ರತೆ, ನೈತಿಕತೆ ಮತ್ತು ನಡವಳಿಕೆಯ ಅತ್ಯುನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಬದ್ಧವಾಗಿದೆ. ಕ್ರೀಡಾಪಟುಗಳು, ತರಬೇತುದಾರರು ಮತ್ತು ನಿರ್ವಾಹಕರು ಸೇರಿದಂತೆ ಕ್ರೀಡೆಯಲ್ಲಿ ಭಾಗವಹಿಸುವ ಎಲ್ಲರು ಈ ಮಾನದಂಡಗಳನ್ನು ಎತ್ತಿಹಿಡಿಯುವ ಜವಾಬ್ದಾರಿಯನ್ನು ಹೊಂದಿರುತ್ತಾರೆ ಮತ್ತು ಕ್ರೀಡೆಯನ್ನು ನ್ಯಾಯಯುತ, ಪ್ರಾಮಾಣಿಕ ಮತ್ತು ಪಾರದರ್ಶಕ ರೀತಿಯಲ್ಲಿ ನಡೆಸುವುದನ್ನು ಖಚಿತಪಡಿಸಿಕೊಳ್ಳುವುದಾಗಿ ನಿಯಮ ಹೇಳುತ್ತದೆ.

ಇರಾನ್‌ನ ಸಡೆಗ್ ನಡೆಯು ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ನಿಯಮಗಳು ಮತ್ತು ನಿಬಂಧನೆಗಳ ನಿಯಮ 8.1 ಉಲ್ಲಂಘನೆಯಾಗಿದೆ ಎಂದು ಒಲಿಂಪಿಕ್ಸ್ ಸಮಿತಿಯು ತೀರ್ಮಾನಕ್ಕೆ ಬಂದಿದ್ದು, ಚಿನ್ನದ ಪದಕದಿಂದ ಸಡೆಗ್ ಅವರನ್ನು ಅನರ್ಹಗೊಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News