ಸ್ಪೇನ್ ನ ಫುಟ್ಬಾಲ್ ಆಟಗಾರ ರೋಡ್ರಿ ಗೆ ಬ್ಯಾಲನ್ ಡಿ'ಓರ್ ಪ್ರಶಸ್ತಿ

Update: 2024-10-29 07:10 GMT

 ರೋಡ್ರಿ PC: x.com/FabrizioRomano

ಹೊಸದಿಲ್ಲಿ: ಐತಿಹಾಸಿಕ ಸಮಾರಂಭದಲ್ಲಿ ಸೋಮವಾರ ಸ್ಪೇನ್ ನ ಸ್ಟಾರ್ ಆಟಗಾರ, ಮ್ಯಾಂಚೆಸ್ಟರ್ ಸಿಟಿ ಮಿಡ್ ಫೀಲ್ಡರ್ ರೋಡ್ರಿ ಅವರಿಗೆ ಈ ವರ್ಷದ ಪ್ರತಿಷ್ಠಿತ ಬ್ಯಾಲನ್ ಡಿʼಓರ್ ವರ್ಷದ ಅತ್ಯುತ್ತಮ ಫುಟ್ಬಾಲ್ ಆಟಗಾರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮ್ಯಾಡ್ರಿಡ್ ಸಂಜಾತ 28 ವರ್ಷ ವಯಸ್ಸಿನ ರೋಡ್ರಿ ಅವರು ರಿಯಲ್ ಮ್ಯಾಡ್ರಿಡ್ ಆಟಗಾರರಾದ ವಿನಿಶಿಯಸ್ ಜ್ಯೂನಿಯರ್, ಜ್ಯೂಡ್ ಬೆಲ್ಲಿಂಗ್ ಹ್ಯಾಮ್ ಅವರನ್ನು ಹಿಂದಿಕ್ಕಿ ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾದರು. ಕಳೆದ ಸೀಸನ್ ನಲ್ಲಿ ಸತತ ನಾಲ್ಕನೇ ಬಾರಿಗೆ ಮ್ಯಾಂಚೆಸ್ಟರ್ ಸಿಟಿ ತಂಡ ಪ್ರಿಮಿಯರ್ ಲೀಗ್ ಪ್ರಶಸ್ತಿ ಗೆಲ್ಲುವಲ್ಲಿ ರೋಡ್ರಿ ಅದ್ಭುತ ಕೊಡುಗೆ ನೀಡಿದ್ದರು.

ಇದರ ಜತೆಗೆ ಪ್ರಸಕ್ತ ವರ್ಷದ ಯೂರೋಪಿಯನ್ ಚಾಂಪಿಯನ್ ಶಿಪ್ ನಲ್ಲೂ ಉತ್ತಮ ಆಟಗಾರ ಪ್ರಶಸ್ತಿ ಪಡೆದಿದ್ದ ಅವರು, ದಾಖಲೆ ನಾಲ್ಕನೇ ಬಾರಿಗೆ ಸ್ಪೇನ್ ತಂಡ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ರೋಡ್ರಿಯವರ ಈ ಪ್ರಶಸ್ತಿ ಮಹತ್ವದ ಮೈಲುಗಲ್ಲು ಎನಿಸಿದ್ದು, 1990ರಲ್ಲಿ ಪ್ರಶಸ್ತಿ ಗೆದ್ದ ಮಟ್ಟಾವುಸ್ ಅವರನ್ನು ಹೊರತುಪಡಿಸಿದರೆ, ಬ್ಯಾಲನ್ ಡಿಓರ್ ಪ್ರಶಸ್ತಿಯನ್ನು ಗೆದ್ದ ಮೊಟ್ಟಮೊದಲ ರಕ್ಷಣಾತ್ಮಕ ಮಿಡ್ ಫೀಲ್ಡರ್ ಎನಿಸಿಕೊಂಡರು. ಜತೆಗೆ ಈ ಪ್ರತಿಷ್ಠಿತ ಗೌರವಕ್ಕೆ ಪಾತ್ರರಾದ ಮೂರನೇ ಸ್ಪೇನ್ ಆಟಗಾರ ಎಂಬ ಹೆಗ್ಗಳಿಕೆಯೂ ಅವರದ್ದಾಯಿತು. 1857 ಹಾಗೂ 1959ರಲ್ಲಿ ಅಲ್ಫ್ರೆಡೊ ಡಿ ಸ್ಟೆಫಾನೊ ಮತ್ತು 1960ರಲ್ಲಿ ಲೂಯಿಸ್ ಸುರೇಝ್ ಈ ಗೌರವಕ್ಕೆ ಪಾತ್ರರಾಗಿದ್ದರು.

ಸ್ಪೇನ್ ನ ಚಿನ್ನದ ಪೀಳಿಗೆ 2010ರಲ್ಲಿ ವಿಶ್ವಕಪ್ ಹಾಗೂ 2008 ಮತ್ತು 2012ರಲ್ಲಿ ಯೂರೊ ಪ್ರಶಸ್ತಿ ಗೆದ್ದರೂ, ಯಾವುದೇ ಸ್ಪೇನ್ ಆಟಗಾರ 60 ವರ್ಷಗಳಲ್ಲಿ ಈ ಪ್ರಶಸ್ತಿಗೆ ಭಾಜನರಾಗಿರಲಿಲ್ಲ.

ಯೂರೋಪಿಯನ್ ಹಂತದಲ್ಲಿ ಇಂಗ್ಲೆಂಡ್ ಮತ್ತು ಸ್ಪೇನ್ ನಲ್ಲಿ ಮ್ಯಾಂಚೆಸ್ಟರ್ ಸಿಟಿಯ ಪ್ರಾಬಲ್ಯಕ್ಕೆ ರೋಡ್ರಿಯವರ ವಿಶಿಷ್ಟ ರಕ್ಷಣಾ ಕೌಶಲಗಳು ಪ್ರಧಾನವಾಗಿವೆ. ಅವರ ಕೋಚ್ ಪೆಪ್ ಗಾರ್ಡಿಯೋಲಾ ಅವರಿಂದ ಅತ್ಯಂತ ಹೊಗಳಿಕೆಗೆ ಪಾತ್ರರಾಗಿದ್ದ ರೋಡ್ರಿ, ವಿಶ್ವದ ಅತ್ಯುತ್ತಮ ಮಿಡ್ ಫೀಲ್ಡರ್ ಎನಿಸಿಕೊಂಡಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News