ನಟ ರಿಶಬ್ ಶೆಟ್ಟಿ, ಕೆಜಿಎಫ್-2 ಚಿತ್ರಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ : ಸಿಎಂ ಸಹಿತ ಗಣ್ಯರ ಅಭಿನಂದನೆ
ಬೆಂಗಳೂರು: 70ನೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿಯಲ್ಲಿ ಕಾಂತಾರ ಚಿತ್ರದ ನಟನೆಗಾಗಿ ರಿಷಬ್ ಶೆಟ್ಟಿ, ಕನ್ನಡದ ಅತ್ಯುತ್ತಮ ಚಿತ್ರವಾಗಿ ಕೆ.ಜಿ.ಎಫ್-2, ಮಧ್ಯಂತರ ಚಿತ್ರದ ಸಂಕಲನಕ್ಕಾಗಿ ಸುರೇಶ್ ಅರಸ್, ಅತ್ಯುತ್ತಮ ಚೊಚ್ಚಲ ನಿರ್ದೇಶಕರಾಗಿ ‘ಮಧ್ಯಂತರ’ ಕಿರುಚಿತ್ರದ ನಿರ್ದೇಶಕ ಬಸ್ತಿ ದಿನೇಶ್ ಶೆಣೈ ಅವರಿಗೆ ಪ್ರಶಸ್ತಿ ಲಭಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.
ಶುಕ್ರವಾರ ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, 70ನೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿಯಲ್ಲಿ ಪ್ರಶಸ್ತಿ ವಿಜೇತರೆಲ್ಲರಿಗೂ ಅಭಿನಂದನೆಗಳು. ನಿಮ್ಮೆಲ್ಲರ ಸಾಧನೆ ಚಿತ್ರರಂಗದ ಇತರೆ ಎಲ್ಲ ಕಲಾವಿದರಿಗೂ ಪ್ರೇರಣೆಯಾಗಲಿ ಎಂದು ಆಶಿಸುತ್ತೇನೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೀರ್ತಿ ಕಿರೀಟಕ್ಕೆ ಮತ್ತಷ್ಟು ಗರಿ: ‘ಕನ್ನಡ ಚಿತ್ರರಂಗದ ಮೈಲುಗಲ್ಲು 'ಕಾಂತಾರ' ಚಿತ್ರದ ಮನೋಜ್ಞ ಅಭಿನಯಕ್ಕಾಗಿ 2024ನೆ ಸಾಲಿನ ರಾಷ್ಟ್ರ ಪ್ರಶಸ್ತಿ ಗೌರವಕ್ಕೆ ಪಾತ್ರರಾದ ನಿರ್ದೇಶಕ, ನಟ ರಿಷಬ್ ಶೆಟ್ಟಿಗೆ ಅಭಿನಂದನೆಗಳು. ಕನ್ನಡ ಚಿತ್ರರಂಗವು ಅನನ್ಯ ಪ್ರತಿಭೆಗಳ ಅಕ್ಷಯನಿಧಿ. ಹೀಗಾಗಿ ಇನ್ನಷ್ಟು ಅತ್ಯುತ್ತಮ ಸಿನಿಮಾಗಳು ತಯಾರಾಗಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಕೀರ್ತಿ ಕಿರೀಟಕ್ಕೆ ಮತ್ತಷ್ಟು ಗರಿಗಳು ಸೇರಲಿ ಎಂದು ಮನಸಾರೆ ಹಾರೈಸುತ್ತೇನೆ. ಕೆಜಿಎಫ್-2 ಅತ್ಯುತ್ತಮ ಕನ್ನಡ ಚಿತ್ರವಾಗಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿರುವುದು ಸಂತಸದ ಸಂಗತಿ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
‘ಕಾಂತಾರ ಚಿತ್ರದ ಜೊತೆಗೆ ಇಡೀ ಭಾರತದ ಚಿತ್ರರಂಗವೇ ಸ್ಯಾಂಡಲ್ ವುಡ್ ಕಡೆಗೆ ನೋಡುವಂತೆ ಮಾಡಿದ್ದ ಕೆಜಿಎಫ್-2 ಚಿತ್ರಕ್ಕೂ ಎರಡು ಪ್ರಶಸ್ತಿಗಳು ಲಭಿಸಿದ್ದು, ಕನ್ನಡದ ರಂಗವಿಭೋಗ, ಮಧ್ಯಂತರ ಚಿತ್ರಗಳಿಗೂ ಪ್ರಶಸ್ತಿ ಲಭಿಸಿರುವುದು ಕನ್ನಡ ಚಿತ್ರರಂಗ ಸಂಕಷ್ಟ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಚಿತ್ರರಂಗದ ಬಗ್ಗೆ ಆಶಾಭಾವನೆ ಮೂಡುವಂತೆ ಮಾಡಿದೆ. ಇನ್ನು ಎರಡು ವಿಭಿನ್ನ ಜನಪ್ರೀಯ ಚಿತ್ರಗಳನ್ನು ನಿರ್ಮಿಸಿ ಸ್ಯಾಂಡಲ್ ವುಡ್‍ಗೆ ನಾಲ್ಕು ರಾಷ್ಟ್ರ ಪ್ರಶಸ್ತಿ ಬರಲು ಕಾರಣರಾದ ಹೊಂಬಾಳೆ ಫಿಲ್ಮ್‍ನ ನಿರ್ಮಾಪಕ ವಿಜಯ ಕಿರಗಂದೂರುಗೂ ಅಭಿನಂದನೆಗಳು’ ಎಂದು ಸಂಸದ ಬಸವರಾಜ ಬೊಮ್ಮಾಯಿ ಶ್ಲಾಘಿಸಿದ್ದಾರೆ.
ವಿಶ್ವದೆಲ್ಲೆಡೆ ತನ್ನ ಕೀರ್ತಿ ಪಸರಿಸಿರುವ ಕಾಂತಾರ: ‘ಕಾಂತಾರ ಚಿತ್ರದ ನಟ ರಿಷಬ್ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿ, ಅತ್ಯುತ್ತಮ ಕನ್ನಡ ಸಿನಿಮಾ ರಾಷ್ಟ್ರ ಪ್ರಶಸ್ತಿ ವಿಭಾಗದಲ್ಲಿ ಯಶ್ ನಟನೆಯ ಕೆಜಿಎಫ್-2 ಚಿತ್ರ ಪ್ರಶಸ್ತಿ ಪಡೆದುಕೊಂಡಿದ್ದು ಈ ಇಬ್ಬರೂ ಭರವಸೆಯ ನಟರಿಗೆ-ನಿರ್ದೇಶಕರಿಗೆ ಅಭಿನಂದನೆಗಳು. ನಾಡಿನ ಪ್ರಕೃತಿ, ಸ್ಥಳೀಯ ಸೊಗಡು ದೈವಾರಾಧನೆಯ ಶ್ರೀಮಂತ ಪರಂಪರೆಯನ್ನು ಅದ್ಭುತವಾಗಿ ಚಿತ್ರೀಕರಿಸಿ, ವಿಶ್ವದೆಲ್ಲೆಡೆ ತನ್ನ ಕೀರ್ತಿ ಪಸರಿಸಿರುವ ಕಾಂತಾರ ಹಾಗೂ ಕನ್ನಡಿಗರ ಕೀರ್ತಿ ಹೆಚ್ಚಿಸಿದ ಕೆಜಿಎಫ್-2 ಚಿತ್ರತಂಡಗಳಿಗೆ ಅಭಿನಂದನೆಗಳು’ ಎಂದು ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.