ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ‘ವೈನ್ ಮರ್ಚಂಟ್ಸ್ ಅಸೋಸಿಯೇಷನ್’ನಿಂದ ರಾಜ್ಯಪಾಲರಿಗೆ ದೂರು

Update: 2024-11-05 15:04 GMT

ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ

ಬೆಂಗಳೂರು: ವಾಲ್ಮೀಕಿ ಅಭಿವೃದ್ದಿ ನಿಗಮ, ಮುಡಾ ನಿವೇಶನ ಹಂಚಿಕೆ ಅಕ್ರಮಗಳ ಬೆನ್ನಲ್ಲೆ ಇದೀಗ ರಾಜ್ಯ ಅಬಕಾರಿ ಇಲಾಖೆಯಲ್ಲಿಯೂ ಭ್ರಷ್ಟಾಚಾರ ಮಿತಿಮೀರಿದ್ದು, ಸೂಕ್ತ ಕ್ರಮಕ್ಕೆ ಆಗ್ರಹಿಸಿ ‘ಫೆಡರೇಷನ್ ಆಫ್ ವೈನ್ ಮರ್ಚಂಟ್ಸ್ ಅಸೋಸಿಯೇಷನ್-ಕರ್ನಾಟಕ’ ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್ ಅವರಿಗೆ ದೂರು ನೀಡಿದೆ.

‘ಮದ್ಯ ಮಾರಾಟಗಾರರ ಬೇಡಿಕೆ ಮತ್ತು ಸಮಸ್ಯೆಗಳ ಕುರಿತು ಹಲವು ದಿನಗಳಿಂದ ಹೋರಾಟ ನಡೆಸಿ, ಸರಕಾರಕ್ಕೆ ಮನವಿ ಸಲ್ಲಿಸಿದರೂ, ಸ್ಪಂದಿಸುತ್ತಿಲ್ಲ. ಹೀಗಾಗಿ ನ.20ರಂದು ರಾಜ್ಯಾದ್ಯಂತ ಮದ್ಯ ಮಾರಾಟ ಸಂಪೂರ್ಣ ಬಂದ್ ಮಾಡಿ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ’ ಎಂದು ‘ವೈನ್ ಮರ್ಚಂಟ್ಸ್ ಅಸೋಸಿಯೇಷನ್’ ಎಚ್ಚರಿಕೆ ನೀಡಿದೆ.

‘ಅಬಕಾರಿ ಲಂಚ ಮಿತಿ ಮೀರಿದೆ. ಅಧಿಕಾರಿಗಳ ವರ್ಗಾವಣೆಗೆ, ಭಡ್ತಿಗೆ ಲಕ್ಷ, ಕೋಟಿ ರೂ.ಗಳಲ್ಲಿ ಲಂಚ ತೆಗೆದುಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳೇ ಹೇಳುತ್ತಿದ್ದಾರೆ. ಈ ಕಾರಣಗಳಿಂದ ಅಬಕಾರಿ ಇಲಾಖೆ ಅಧಿಕಾರಿಗಳು ‘ಸನ್ನದುದಾರ’ರಿಂದ ಮನಸೋ ಇಚ್ಛೆ ಲಂಚ ವಸೂಲಿ ಮಾಡುತ್ತಿದ್ದಾರೆ. ಲಂಚ ತೆಗೆದುಕೊಳ್ಳಲು ಅಧಿಕಾರಿಗಳು ‘ಅಬಕಾರಿ ಕಾಯ್ದೆ’ಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಹೀಗಾಗಿಯೇ ರಾಜ್ಯದಲ್ಲಿ ನಕಲಿ, ಅಂತರ್ ರಾಜ್ಯ ಮದ್ಯದ ಹಾವಳಿಯೂ ಹೆಚ್ಚಳಗೊಂಡಿವೆ. ರಾಜ್ಯದ ಅಬಕಾರಿ ನಿರ್ದೇಶನಾಲಯ ಇದನ್ನು ನಿಗ್ರಹಿಸುವುದರಲ್ಲಿ ವಿಫಲವಾಗಿದೆ’ ಎಂದು ಅಸೋಸಿಯೇಷನ್ ದೂರಿದೆ.

‘ಅಧಿಕಾರಿಗಳು, ಕೇವಲ ಸನ್ನದುದಾರರಿಗೆ ತೊಂದರೆ ನೀಡುವುದರಲ್ಲಿ ನಿರತರಾಗಿದ್ದಾರೆ. ಇದರಿಂದಾಗಿ ಅಬಕಾರಿ ವರಮಾನವು ಕುಂಠಿತವಾಗಿದೆ. ಅಬಕಾರಿ ಇಲಾಖೆ ಅಧಿಕಾರಿಗಳು ಎಷ್ಟು ಬಲಶಾಲಿಗಳಾಗಿದ್ದಾರೆ ಎಂದರೆ ನಾವು ಇಂದಿಗೂ ಸಿಎಂ ಸಿದ್ದರಾಮಯ್ಯನವರನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಅಬಕಾರಿ ಇಲಾಖೆ ಅನುದಾನವೇ ಇಲ್ಲದ ಇಲಾಖೆ, ಹೀಗಾಗಿ ಈ ಇಲಾಖೆಯನ್ನು ಆರ್ಥಿಕ ಇಲಾಖೆ ಜವಾಬ್ದಾರಿ ಹೊಂದಿರುವ ಸಚಿವರಿಗೆ ಇಲಾಖೆಯನ್ನು ವಹಿಸಬೇಕು’ ಎಂದು ಅಸೋಸಿಯೇಷನ್ ಮನವಿ ಮಾಡಿದೆ.

‘ಇಲಾಖೆಯಲ್ಲಿ ಏನು ಭ್ರಷ್ಟಾಚಾರ ಆಗಿದೆ ಎಂದು ನನಗೆ ಗೊತ್ತಿಲ್ಲ. ಆರೋಪ ಮಾಡಿದ್ದೆಲ್ಲವೂ ನಿಜವೇ ಎಂಬುದು ಗೊತ್ತಿಲ್ಲ?. ನಮ್ಮ ಇಲಾಖೆಯಲ್ಲಿ ಯಾರು ಕಿರುಕುಳ ನೀಡಿದ್ದಾರೆ ಎಂದು ಹೇಳಲಿ. ಲಂಚ ಪಡೆದ ಅಧಿಖಾರಿಗಳ ಪಟ್ಟಿಯನ್ನು ನನಗೆ ಕೊಟ್ಟರೇ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’

-ಆರ್.ಬಿ.ತಿಮ್ಮಾಪುರ, ಅಬಕಾರಿ ಸಚಿವ

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News