ರಾಜ್ಯ ಕಾಂಗ್ರೆಸ್ ಗೆ ಹೈಕಮಾಂಡ್ ನಿಂದ ಮೊದಲ ಹಂತದಲ್ಲಿ 1000 ಕೋಟಿ ರೂ. ಟಾರ್ಗೆಟ್: ಬಿಜೆಪಿ ಆರೋಪ
ಬೆಂಗಳೂರು, ಅ.16: ಐಟಿ ದಾಳಿ ವೇಳೆ ಗುತ್ತಿಗೆದಾರನ ಮನೆಯಲ್ಲಿ ಕೋಟ್ಯಂತರ ಹಣ ಪತ್ತೆಯಾದ ಬೆನ್ನಲ್ಲೇ ವಿಪಕ್ಷಗಳು ಮತ್ತು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ನಡುವೆ ರಾಜಕೀಯ ಕೆಸರೆರಚಾಟ ತೀವ್ರಗೊಂಡಿದೆ.
ಪಂಚ ರಾಜ್ಯಗಳ ಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ಕಾಂಗ್ರೆಸ್ ಗೆ ಮೊದಲನೇ ಹಂತದಲ್ಲಿ 1000 ಕೋಟಿ ರೂ.ಗಳ ಟಾರ್ಗೆಟ್ ನೀಡಿದೆ. ಆದರೆ ಕಮಿಷನ್, ಕಲೆಕ್ಷನ್ ಮೂಲಕ ಸಾವಿರ ಕೋಟಿ ಟಾರ್ಗೆಟ್ ಮಾಡಿ ಸಂಗ್ರಹಿಸುತ್ತಿರುವ ಕಾಂಗ್ರೆಸ್ ಹಣ ಹಂಚುವ ಮುನ್ನವೇ ಸಿಕ್ಕಿ ಬಿದ್ದಿದೆ ಎಂದು ರಾಜ್ಯ ಬಿಜೆಪಿ X (ಟ್ವಿಟರ್)ನಲ್ಲಿ ಪೋಸ್ಟ್ ಮಾಡುವ ಮೂಲಕ ಆರೋಪಿಸಿದೆ.
" ತೆಲಂಗಾಣ ಕಾಂಗ್ರೆಸ್ ಗೆ 300 ಕೋಟಿ ರೂ., ಮಿಜೋರಾಂ ಕಾಂಗ್ರೆಸ್ ಗೆ 100 ಕೋಟಿ ರೂಪಾಯಿ, ಛತ್ತಿಸ್ಗಢ ಕಾಂಗ್ರೆಸ್ ಗೆ 200 ಕೋಟಿ ರೂ., ರಾಜಸ್ಥಾನ ಕಾಂಗ್ರೆಸ್ ಗೆ 200 ಕೋಟಿ ರೂ. ಹಾಗೂ ಮಧ್ಯಪ್ರದೇಶ ಕಾಂಗ್ರೆಸ್ ಗೆ 200 ಕೋಟಿ ರೂಪಾಯಿ ಟಾರ್ಗೆಟ್ ನೀಡಿದೆ. ಕಮಿಷನ್, ಕಲೆಕ್ಷನ್ ಮೂಲಕ ಸಾವಿರ ಕೋಟಿ ರೂ. ಟಾರ್ಗೆಟ್ ಮಾಡಿ ಸಂಗ್ರಹಿಸುತ್ತಿರುವ ಕಾಂಗ್ರೆಸ್ ಹಣ ಹಂಚುವ ಮುನ್ನವೇ ಸಿಕ್ಕಿ ಬಿದ್ದಿದೆ" ಎಂದು ಗಂಭೀರ ಆರೋಪ ಮಾಡಿದೆ.
ಸಿದ್ದರಾಮಯ್ಯರನ್ನು 'ಕರ್ನಾಟಕ ಸಿಎಂ- ಕರ್ನಾಟಕ ಕಲೆಕ್ಷನ್ ಮಾಸ್ಟರ್' ಎಂದು ಆರೋಪಿಸಿ ರಾಜ್ಯ ಬಿಜೆಪಿ ತನ್ನ X ಖಾತೆಯಲ್ಲಿ ಚಿತ್ರವೊಂದನ್ನು ಪೋಸ್ಟ್ ಮಾಡಿದೆ.
ಆರೋಪ ನಿರಾಧಾರ: ಸಿದ್ದರಾಮಯ್ಯ
ಈ ನಡುವೆ ಬಿಜೆಪಿ ಮಾಡುತ್ತಿರುವ ಆರೋಪವನ್ನು ನಿರಾಕರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, "ಆದಾಯ ತೆರಿಗೆ ಇಲಾಖೆ ತನ್ನ ಕೆಲಸ ಮಾಡಿದೆ. ಯಾರದೋ ಮನೆಯಲ್ಲಿ ಹಣ ಪತ್ತೆಯಾಗಿದ್ದು, ಇದಕ್ಕೆ ರಾಜಕೀಯ ನಂಟು ಹಾಕುವುದು ಸರಿಯಲ್ಲ. ಲೋಕಸಭೆ ಚುನಾವಣೆ ಹಾಗೂ ರಾಜಕೀಯ ಉದ್ದೇಶದಿಂದ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರದಿಂದ ಯಾವುದೇ ತನಿಖೆಯ ಅವಶ್ಯಕತೆಯಿಲ್ಲ. ಪಂಚರಾಜ್ಯಗಳ ಚುನಾವಣೆಯ ಇರುವುದರಿಂದ ಕಾಂಗ್ರೆಸ್ನ ಮೇಲೆ ಆಧಾರರಹಿತ ಆರೋಪ ಮಾಡುತ್ತಿದ್ದಾರೆ. ಬೇರೆ ರಾಜ್ಯದಲ್ಲಿ ಚುನಾವಣೆ ನಡೆಯುವುದಕ್ಕೂ ನಮ್ಮ ರಾಜ್ಯಕ್ಕೂ ಯಾವುದೇ ಸಂಬಂಧವಿಲ್ಲ'' ಎಂದು ಹೇಳಿದ್ದಾರೆ.