‘16ನೇ ಹಣಕಾಸು ಆಯೋಗ’; ರಾಜ್ಯದ ಪರ ವಾದ ಮಂಡನೆಗೆ ಸಲಹಾ ಸಮಿತಿ ರಚನೆಗೆ ನಿರ್ಧಾರ: ಸಚಿವ ಕೃಷ್ಣ ಬೈರೇಗೌಡ

Update: 2024-01-05 17:45 GMT

ಬೆಂಗಳೂರು: ಕೇಂದ್ರ ಸರಕಾರವು 16ನೇ ಹಣಕಾಸು ಆಯೋಗ ರಚನೆ ಮಾಡುವ ಅಧಿಸೂಚನೆ ಹೊರಡಿಸಿ, ಅಧ್ಯಕ್ಷರನ್ನು ನೇಮಕ ಮಾಡಿದೆ. ಈ ಹಿನ್ನಲೆಯಲ್ಲಿ ಹಣಕಾಸು ಆಯೋಗದ ಮುಂದೆ ನಮ್ಮ ವಾದ ಏನು ಇರಬೇಕು ಎಂಬುದರ ಬಗ್ಗೆ ಸರಕಾರಕ್ಕೆ ಸಲಹೆ ನೀಡಲು ಸಮಿತಿಯನ್ನು ರಚನೆ ಮಾಡಲು ನಿರ್ಧರಿಸಿದ್ದೇವೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯನ್ನದ್ದೇಶಿಸಿ ಮಾತನಾಡಿದ ಅವರು, ಇಡೀ ದೇಶದಲ್ಲಿ ಅತೀ ಹೆಚ್ಚು ತೆರಿಗೆ ಪಾವತಿ ಮಾಡುವ ಎರಡನೇ ರಾಜ್ಯ ನಮ್ಮದು. ಸುಮಾರು 4 ಲಕ್ಷ ಕೋಟಿ ರೂಪಾಯಿ ತೆರಿಗೆ ರೂಪದಲ್ಲಿ ನಮ್ಮ ರಾಜ್ಯದಿಂದ ಕೇಂದ್ರ ಸರಕಾರಕ್ಕೆ ಸಲ್ಲಿಕೆಯಾಗುತ್ತಿದೆ. ಆದರೆ, ಅದರಲ್ಲಿ ರಾಜ್ಯಕ್ಕೆ 60-70 ಸಾವಿರ ಕೋಟಿ ಮಾತ್ರ ನಮಗೆ ವಾಪಸ್ ಬರುತ್ತಿದೆ ಎಂದು ಹೇಳಿದರು.

ಐಟಿ, ಬಿಟಿ ವಲಯದಿಂದ ವರ್ಷಕ್ಕೆ 3.50 ಲಕ್ಷ ಕೋಟಿ ರೂ.ಗಳಷ್ಟು ನಮ್ಮ ರಾಜ್ಯದಿಂದ ರಫ್ತಾಗುತ್ತಿದೆ. ಆದರೆ, ಇಷ್ಟು ದೊಡ್ಡ ಮಟ್ಟದಲ್ಲಿ ನಾವು ದೇಶದ ಅಭಿವೃದ್ಧಿ ಕೊಡುಗೆ ನೀಡುತ್ತಿದ್ದರೂ ನಮಗೆ ನ್ಯಾಯಯುತವಾದ ಪಾಲು ಸಿಗುತ್ತಿಲ್ಲ ಎಂದು ಅವರು ಹೇಳಿದರು.

14ನೆ ಹಣಕಾಸು ಆಯೋಗದ ಅವಧಿಯಲ್ಲಿ ಕೇಂದ್ರ ಸರಕಾರ ರಾಜ್ಯಕ್ಕೆ ಕೊಡುವ ತೆರಿಗೆಯಲ್ಲಿ ಶೇ.4.71ರಷ್ಟು ಪಾಲು ಕೊಡುತ್ತಿತ್ತು. ಆದರೆ, 15ನೆ ಹಣಕಾಸು ಆಯೋಗದ ಅವಧಿಯಲ್ಲಿ ಇದು ಶೇ.3.64ಕ್ಕೆ ಇಳಿಕೆಯಾಗಿದೆ. ಇದರಿಂದ ಶೇ.20ರಷ್ಟು ತೆರಿಗೆ ಪಾಲು ಕಡಿಮೆಯಾಗಿದೆ. ಇದರಿಂದಾಗಿ, ರಾಜ್ಯಕ್ಕೆ ವರ್ಷಕ್ಕೆ 14 ಸಾವಿರ ಕೋಟಿ ರೂ.ನಷ್ಟವಾಗುತ್ತಿದೆ ಎಂದು ಅವರು ಹೇಳಿದರು.

2020-21 ರಿಂದ 2025-26 ಅಂದರೆ 15ನೆ ಹಣಕಾಸು ಆಯೋಗದ ಅವಧಿಯಲ್ಲಿ ಐದು ವರ್ಷಗಳಿಗೆ ಲೆಕ್ಕ ಹಾಕಿದರೆ 62 ಸಾವಿರ ಕೋಟಿ ರೂ.ನಮಗೆ ನಷ್ಟ ಆಗುತ್ತದೆ. 15ನೆ ಹಣಕಾಸು ಆಯೋಗದ ಶಿಫಾರಸು ಮಾಡಿರುವುದು ಕೇಂದ್ರಕ್ಕೆ ಬರುತ್ತಿರುವ ತೆರಿಗೆಯಲ್ಲಿ ರಾಜ್ಯಗಳಿಗೆ ಶೇ.41ರಷ್ಟು ಮರುಕಳುಹಿಸಬೇಕು. ಆದರೆ, ಅವರು ಮಾಡುತ್ತಿರುವುದು ಕೇವಲ ಶೇ.30 ಮಾತ್ರ ಎಂದು ಅವರು ಹೇಳಿದರು.

ಕೇಂದ್ರ ಸರಕಾರವು ತೆರಿಗೆಯನ್ನು ಕರ(ಸೆಸ್,  ಸರ್‍ಚಾರ್ಜ್) ಎಂದು ಹೆಸರು ಬದಲಾಯಿಸಿ ತೆರಿಗೆ ಎಂದು ತೋರಿಸುತ್ತಿಲ್ಲ. ಇದರಿಂದಾಗಿ, ರಾಜ್ಯಗಳಿಗೆ ಪಾಲು ಸಿಗುತ್ತಿಲ್ಲ. ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವ ಮುನ್ನ ಶೇ.8-9ರಷ್ಟು ಇದ್ದ ಸೆಸ್, ಸರ್‍ಚಾರ್ಜ್ ಈಗ 2022-23ರಲ್ಲಿ ಶೇ.23ಕ್ಕೆ ತಲುಪಿದೆ. ಸೆಸ್ ಸರ್‍ಚಾರ್ಜ್ ಮೂಲಕ 2017-18ರಲ್ಲಿ 2.18 ಲಕ್ಷ ಕೋಟಿ ರೂ.ಆದಾಯ ಇತ್ತು. ಈಗ 5.50 ರಿಂದ 6 ಲಕ್ಷ ಕೋಟಿ ರೂ.ಅಂದಾಜು ಮಾಡಿದ್ದಾರೆ ಎಂದು ಕೃಷ್ಣಬೈರೇಗೌಡ ಹೇಳಿದರು.

ಪೆಟ್ರೋಲ್, ಡಿಸೇಲ್ ಮೂಲಕ ಸಂಗ್ರಹಿಸುವ ಸೆಸ್ ಸರ್‍ಚಾರ್ಜ್‍ನಲ್ಲಿ ಶೇ.95ರಷ್ಟು ಆದಾಯ ಕೇಂದ್ರ ಸರಕಾರ ತನ್ನ ಬಳಿ ಇರಿಸಿಕೊಳ್ಳುತ್ತದೆ. ಇದರಿಂದ ಕರ್ನಾಟಕ ಒಂದು ರಾಜ್ಯಕ್ಕೆ 8200 ಕೋಟಿ ರೂ.ಸೆಸ್‍ನಿಂದಲೇ ನಷ್ಟ ಆಗುತ್ತಿದೆ. ಸೆಸ್ ಸರ್‍ಚಾರ್ಜ್ ಯಾವ ಉದ್ದೇಶಕ್ಕೆ ಸಂಗ್ರಹ ಮಾಡಲಾಗುತ್ತದೆಯೋ ಅದೇ ಉದ್ದೇಶಕ್ಕೆ ಬಳಕೆಯಾಗುತ್ತಿಲ್ಲ ಎಂದು ಸಿಎಜಿಯವರು ತಮ್ಮ ವರದಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಅವರು ತಿಳಿಸಿದರು.

ಜಿಎಸ್ ಟಿ ಜಾರಿಯಾಗುವ ಮುನ್ನ ರಾಜ್ಯದಲ್ಲಿ ನಮ್ಮ ವಾಣಿಜ್ಯ ತೆರಿಗೆ ಶೇ.14, 15, 16ರಷ್ಟು ಸರಾಸರಿ ಬೆಳವಣಿಗೆ ಇತ್ತು. ಜಿಎಸ್ ಟಿ ಬಂದಾಗ ಯಾವ ರಾಜ್ಯಗಳಿಗೆ ನಷ್ಟ ಆಗುತ್ತದೆ ಅವರಿಗೆ ನಷ್ಟ ಪರಿಹಾರ ನೀಡುವುದಾಗಿ ಹೇಳಿತ್ತು. 2022ರ ಜೂನ್ ನಲ್ಲಿ ಪರಿಹಾರ ನಿಲ್ಲಿಸಿದ್ದಾರೆ. ನಮ್ಮ ಹಿಂದಿನ ಶೇ.14ರಷ್ಟು ಬೆಳವಣಿಗೆ ಕಾಯ್ದುಕೊಂಡಿದ್ದರೆ ಈಗ ಬರುತ್ತಿರುವ ತೆರಿಗೆ ಪಾಲು ಹೋಲಿಕೆ ಮಾಡಿದರೆ ಪ್ರತಿ ವರ್ಷ 25-30 ಸಾವಿರ ಕೋಟಿ ರೂ.ನಮಗೆ ಕಡಿಮೆಯಾಗುತ್ತಿದೆ. ಆದುದರಿಂದ, ಸೆಸ್ ಹಾಗೂ ಸರ್‍ಚಾರ್ಜ್‍ನಲ್ಲೂ ರಾಜ್ಯಕ್ಕೆ ಪಾಲು ನೀಡಬೇಕು ಎಂದು ನಾವು ಬೇಡಿಕೆ ಇಡುತ್ತೇವೆ ಎಂದು ಅವರು ಹೇಳಿದರು.

15ನೇ ಹಣಕಾಸು ಆಯೋಗವು ನಮ್ಮ ರಾಜ್ಯಕ್ಕೆ ಮೂರು ವಿಶೇಷ ಅನುದಾನಗಳನ್ನು ಶಿಫಾರಸು ಮಾಡಿದ್ದಾರೆ. ಅದು ಒಟ್ಟು 11,495 ಕೋಟಿ ರೂ.ಶಿಫಾರಸು ಮಾಡಿದ್ದಾರೆ. ಅದನ್ನೂ ಕೇಂದ್ರ ಸರಕಾರ ನಮಗೆ ನೀಡಿಲ್ಲ ಎಂದು ಅವರು ಹೇಳಿದರು.

ಹಣಕಾಸು ತಜ್ಞರಾದ ಗೋವಿಂದ ರಾವ್, ಶ್ರೀನಿವಾಸ್ ಮೂರ್ತಿ ಮತ್ತು ನರೇಂದ್ರ ಪಾಣಿ ಅವರನ್ನು ಒಳಗೊಂಡ ತಜ್ಞರ ಸಲಹಾ ಸಮಿತಿ ರಚನೆ ಮಾಡಲಾಗುವುದು. ಇವರು ಹಣಕಾಸು ಆಯೋಗದ ಮುಂದೆ ಏನು ವಾದ ಮಾಡಬೇಕು ಎಂಬ ಬಗ್ಗೆ ರಾಜ್ಯ ಸರಕಾರಕ್ಕೆ ಶಿಫಾರಸು ಮಾಡುತ್ತಾರೆ ಎಂದು ಕೃಷ್ಣ ಬೈರೇಗೌಡ ಹೇಳಿದರು.

ತೆರಿಗೆ ಪಾಲು ಕಡಿತ

2017-18ರಲ್ಲಿ ಕೇಂದ್ರದ ಬಜೆಟ್ ಗಾತ್ರ 23 ಲಕ್ಷ ಕೋಟಿ ರೂ.ಗಳಷ್ಟಿತ್ತು. 2022-23ರಲ್ಲಿ 48 ಲಕ್ಷ ಕೋಟಿ ರೂ.ಗಳಾಗಿದೆ. ಆದರೆ, ನಮ್ಮ ರಾಜ್ಯಕ್ಕೆ ಬರುತ್ತಿರುವ ತೆರಿಗೆ ಪಾಲಲ್ಲಿ ಮಾತ್ರ ಏರಿಕೆಯಾಗಿಲ್ಲ. 2018-19ರಲ್ಲಿ 35,890 ಕೋಟಿ ರೂ., 2019-20ರಲ್ಲಿ 30,919 ಕೋಟಿ ರೂ., 2020-21ರಲ್ಲಿ 21,694 ಕೋಟಿ ರೂ., 2021-22ರಲ್ಲಿ 33,283 ಕೋಟಿ ರೂ., 2022-23ರಲ್ಲಿ 34,596 ಕೋಟಿ ರೂ. ನಮ್ಮ ರಾಜ್ಯಕ್ಕೆ ತೆರಿಗೆ ಪಾಲು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News