ತಿಪಟೂರು ಷಡಕ್ಷರಿ ಮಠದ ಸ್ವಾಮೀಜಿ ಹನಿಟ್ರ್ಯಾಪ್‍ಗೆ ಯತ್ನಿಸಿದ ಪ್ರಕರಣ: ಮೂವರು ಆರೋಪಿಗಳ ಬಂಧನ

Update: 2024-10-03 13:53 GMT

ಬೆಂಗಳೂರು: ತಿಪಟೂರು ಷಡಕ್ಷರಿ ಮಠದ ರುದ್ರಮುನಿ ಸ್ವಾಮೀಜಿ ಅವರನ್ನು ಹನಿಟ್ರ್ಯಾಪ್‍ಗೆ ಸಿಲುಕಿಸಲು ಯತ್ನಿಸಿ, 6 ಕೋಟಿ ರೂ. ನೀಡುವಂತೆ ಒತ್ತಾಯಿಸಿದ ಪ್ರಕರಣದಡಿ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ವಿದ್ಯಾ ಬಿರಾದರ್ ಪಾಟೀಲ್, ಗಗನ್ ಹಾಗೂ ಸೂರ್ಯನಾರಾಯಣ್ ಎಂಬುವರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಮತ್ತೋರ್ವ ಮಹಿಳೆ ಭಾಗಿಯಾಗಿದ್ದು, ಬಂಧನಕ್ಕಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆ.31ರಂದು ಷಡಕ್ಷರಿ ಮಠದ ರುದ್ರಮುನಿ ಸ್ವಾಮೀಜಿಗೆ ಕರೆ ಮಾಡಿದ ಆರೋಪಿತೆ ವಿದ್ಯಾ ಬಿರಾದರ್ ಪಾಟೀಲ್, ತಾನು ರಾಜ್ಯ ಮಾಹಿತಿ ಹಕ್ಕು ಆಯೋಗದ ಅಧ್ಯಕ್ಷೆ ಹಾಗೂ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಅವರ ಸಹೋದರಿಯಾಗಿದ್ದು, ಸೂರ್ಯ ನಾರಾಯಣ್ ಹಾಗೂ ಪಲ್ಲವಿ ಎಂಬವರು ನಿಮಗೆ ಸಂಬಂಧಿಸಿ, ಮಹಿಳೆಯೊಂದಿಗಿನ ಅಶ್ಲೀಲ ವಿಡಿಯೋ ಕಳುಹಿಸಿ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಹೀಗಾಗಿ, ಕೂಡಲೇ ಭೇಟಿಯಾಗುವಂತೆ ಹೇಳಿದ್ದರು ಎಂದು ಸ್ವಾಮೀಜಿ ದೂರಿನಲ್ಲಿ ತಿಳಿಸಿದ್ದರು.

ಬಳಿಕ ಸ್ವಾಮೀಜಿ ತಮ್ಮ ವಕೀಲರ ಮೂಲಕ ಕರೆ ಮಾಡಿಸಿದಾಗ ಗಾಂಧಿನಗರ ರಾಮಕೃಷ್ಣ ಹೋಟೆಲ್ ಬಳಿ ಬರುವಂತೆ ಆರೋಪಿಗಳು ಸೂಚಿಸಿದ್ದರು. ಇದರಂತೆ ಭೇಟಿಯಾದಾಗ ಸ್ವಾಮೀಜಿಯವರಿಗೆ ಸಂಬಂಧಿಸಿದ ಅಶ್ಲೀಲ ವಿಡಿಯೊಗಳಿವೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಬಾರದು ಎಂದರೆ 6 ಕೋಟಿ ರೂ. ಹಣ ನೀಡಬೇಕು. ಕೂಡಲೇ 50 ಲಕ್ಷ ರೂ. ಹಣ ನೀಡಿ ಒತ್ತಾಯಿಸಿದ್ದರು ಎಂದು ರುದ್ರಮುನಿ ಸ್ವಾಮೀಜಿ ದೂರಿನಲ್ಲಿ ಉಲ್ಲೇಖಿಸಿದ್ದರು.

ಈ ಬಗ್ಗೆ ರುದ್ರಮುನಿ ಸ್ವಾಮೀಜಿ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿ, ತನಿಖೆ ಕೈಗೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News