ಮುಂದಿನ 7 ವರ್ಷಗಳಲ್ಲಿ 60 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಗುರಿ: ಸಿಎಂ ಸಿದ್ದರಾಮಯ್ಯ

Update: 2024-03-09 13:18 GMT

ಬೆಂಗಳೂರು: ಮುಂದಿನ 7 ವರ್ಷಗಳಲ್ಲಿ ರಾಜ್ಯದಲ್ಲಿ 60 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಗುರಿ ಹಮ್ಮಿಕೊಂಡಿದ್ದೇವೆ. ಈ ದಿಕ್ಕಿನಲ್ಲಿ ನಮ್ಮ ಸಿದ್ಧತೆಗಳು ಈಗಾಗಲೇ ಆರಂಭಗೊಂಡಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

GKVK ಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರೈತ ಸೌರಶಕ್ತಿ ಮೇಳ ಉದ್ಘಾಟಿಸಿದರು. ಬಳಿಕ ಕುಸುಮ್ “ಬಿ” ಮತ್ತು “ಸಿ” ಯೋಜನೆಗಳ ಚಾಲನೆ ನೀಡಿ ವಿದ್ಯುತ್ ಉಪಕೇಂದ್ರಗಳನ್ನು ಲೋಕಾರ್ಪಣೆ ಗೊಳಿಸಿ ಮಾತನಾಡಿದರು.

"ದೇಶದಲ್ಲೇ ಅತಿ ಹೆಚ್ಚು ಒಣಭೂಮಿ ಹೊಂದಿರುವ ಎರಡನೇ ರಾಜ್ಯ ಕರ್ನಾಟಕ. ಹೀಗಾಗಿ ಒಣಭೂಮಿಯ ಕೃಷಿಗೆ ಆದ್ಯತೆ ನೀಡಿ ಸಂಶೋಧನೆಗಳು ನಡೆಯಬೇಕು. ಜನಸಂಖ್ಯೆ ಹೆಚ್ಚಾಗಿ ರೈತರ ಬೆಳೆಗಳ ಇಳುವರಿ ಪ್ರಮಾಣ ಕಡಿಮೆ ಆಗುತ್ತಿದೆ. ಆದ್ದರಿಂದ ಸಮಗ್ರ ಕೃಷಿಗೆ ಹೆಚ್ವಿನ ಬೆಂಬಲ ನೀಡುವ ಸಲುವಾಗಿ ಕೃಷಿಯ ಉಪಕಸುಬುಗಳ ಬೆಳವಣಿಗೆಗೆ ಸರಕಾರ ಸಂಪೂರ್ಣ ಸಹಕಾರ, ಬೆಂಬಲ ನೀಡುತ್ತಿದೆ" ಎಂದು ನುಡಿದರು.‌

ಪ್ರಸ್ತುತ ರಾಜ್ಯದಲ್ಲಿ 32 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಮುಂದಿನ 7 ವರ್ಷಗಳಲ್ಲಿ 60 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಗುರಿ ಹಮ್ಮಿಕೊಂಡಿದ್ದೇವೆ ಎಂದು ಘೋಷಿಸಿದರು.‌

ಸೋಲಾರ್ ವಿದ್ಯುತ್ ಪಂಪ್ ಸೆಟ್ ಮತ್ತು ಪ್ಯಾನಲ್ ಗಳಿಗೆ ರಾಜ್ಯ ಸರಕಾರದ ಸಬ್ಸಿಡಿ ಮೊತ್ತವನ್ನು ಶೇ30 ರಿಂದ ಶೇ50 ಕ್ಕೆ ಹೆಚ್ಚಿಸಿದೆ. ನಮ್ಮ ಸರಕಾರದ ಈ ಸೌಲಭ್ಯವನ್ನು ರೈತರು ಹೆಚ್ಚೆಚ್ಚು ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.

ಸೌರವಿದ್ಯುತ್ ಬಳಕೆಯನ್ನು ಹೆಚ್ಚೆಚ್ಚು ಮಾಡುವ ಮೂಲಕ ವಿದ್ಯುತ್ ಕೊರತೆಯನ್ನು ನೀಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ಈ ಬಗ್ಗೆ ರೈತರಿಗೆ ಹೆಚ್ಚೆಚ್ಚು ಮನವರಿಕೆ ಮಾಡಿಕೊಡಬೇಕು ಎಂದು ಸೂಚಿಸಿದರು.

ಇವತ್ತಿನವರೆಗೂ ನಾಡಿನ ಒಂದು ಕೋಟಿ ಇಪ್ಪತ್ತು ಲಕ್ಷ ಕುಟುಂಬಗಳು ಬಳಸುತ್ತಿರುವ 200 ಯೂನಿಟ್ ವರೆಗಿನ ಉಚಿತ ವಿದ್ಯುತ್ ಗಾಗಿ ರಾಜ್ಯ ಸರಕಾರ ಉಚಿತ ವಿದ್ಯುತ್ತಿನ ಬಾಬ್ತು 5320 ಕೋಟಿ ರೂಪಾಯಿಯನ್ನು ಇಂಧನ ಇಲಾಖೆಗೆ ನೀಡಿದೆ. ನಮ್ಮ ಜನರಿಗೆ ಝಿರೋ ಬಿಲ್ ಬರುತ್ತಿದೆ. ನಮ್ಮ ಸರಕಾರ ಈ ಜನೋಪಯೋಗಿ ಗ್ಯಾರಂಟಿ ಯೋಜನೆಯನ್ನು ಯಶಸ್ವಿಯಾಗಿ ಮುಂದುವರೆಸಲಿದೆ ಎಂದು ಪುನರುಚ್ಚರಿಸಿದರು.

ಸೌರಶಕ್ತಿ ಕ್ಷೇತ್ರದ ಹೊಸ ಆವಿಷ್ಕಾರಗಳು, ತಂತ್ರಜ್ಞಾನಗಳು ರೈತರ ಮನೆ ಬಾಗಿಲಿಗೆ ತಲುಪಿ, ಕೃಷಿಯಲ್ಲಿ ಬಳಕೆ ಆದರೆ ಮಾತ್ರ ಸಾರ್ಥಕತೆ ಬರುತ್ತದೆ. ಕೃಷಿ ಕ್ಷೇತ್ರದಲ್ಲಿ ಹೆಚ್ಚೆಚ್ಚು ಸಂಶೋಧನೆಗಳು ನಡೆದು ಅವು ರೈತರನ್ನು ತಲುಪಿದಾ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ರೈತರು ಹೆಚ್ಚೆಚ್ಚು ಆಹಾರ ಬೆಳೆದು ವಿದೇಶಕ್ಕೂ ರಫ್ತು ಮಾಡುವಂತಾಗಬೇಕು. ಇದಕ್ಕೆ ನಮ್ಮ ಸರಕಾರ ಸಕಲ ನೆರವು ನೀಡುತ್ತದೆ ಎಂದರು.

ಸೋಲಾರ್ ವಿದ್ಯುತ್ ಗೆ ಕೇಂದ್ರ ಸರಕಾರ ಕೇವಲ ಶೇ30 ರಷ್ಟು ಸಬ್ಸಿಡಿ ನೀಡುತ್ತಿದೆ. ಆದರೆ ರಾಜ್ಯ ಸರಕಾರ ಶೇ50 ರಷ್ಟು ಸಬ್ಸಿಡಿ ನೀಡುತ್ತಿದೆ. ಆದರೂ ಹೆಸರು ಮಾತ್ರ ಮೋದಿಯವರ ಸಬ್ಸಿಡಿ ಎಂದು ವ್ಯಂಗ್ಯವಾಡಿದರು.

ಇಂಧನ ಸಚಿವ ಕೆ.ಜೆ.ಜಾರ್ಜ್, ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್, ಮುಖ್ಯಮಂತ್ರಿಗಳ ರಾಜಕೀಯ ಗೋವಿಂದರಾಜು, ನಸೀರ್ ಅಹ್ಮದ್ , ವಿಧಾನ ಪರಿಷತ್ ಸದಸ್ಯ ಸುಧಾಮ್ ದಾಸ್, ಕ್ರೆಡೆಲ್ ಅಧ್ಯಕ್ಷರಾದ ಶೃಂಗೇರಿ ಶಾಸಕರಾದ ರಾಜುಗೌಡ ಮತ್ತು ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News