ಅಮೆರಿಕದಲ್ಲಿ ದಾವಣಗೆರೆ ಮೂಲದ ದಂಪತಿ, ಮಗು ನಿಗೂಢ ಮೃತ್ಯು
ದಾವಣಗೆರೆ: ಅಮೆರಿಕದಲ್ಲಿ ದಾವಣಗೆರೆ ಮೂಲದ ಒಂದೇ ಕುಟುಂಬದ ಮೂವರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಶನಿವಾರ ವರದಿಯಾಗಿದೆ.
ಜಿಲ್ಲೆಯ ಜಗಳೂರು ತಾಲೂಕಿನ ಹಾಲೆಕಲ್ಲು ಗ್ರಾಮದ ಒಂದೇ ಕುಟುಂಬದ ಯೋಗೇಶ್ ಹೊನ್ನಾಳ(37), ಪ್ರತಿಭಾ ಹೊನ್ನಾಳ(35), ಯಶ್ ಹೊನ್ನಾಳ(6) ಮೃತಪಟ್ಟಿದ್ದಾರೆ.
ಮೇರಿಲ್ಯಾಂಡ್ ರಾಜ್ಯದ ಬಾಲ್ಟಿಮೋರ್ ನಲ್ಲಿ ಮೃತಪಟ್ಟಿದ್ದಾರೆನ್ನಲಾಗಿದೆ.
ಕಳೆದ 9 ವರ್ಷಗಳ ಹಿಂದೆ ಮದುವೆಯಾಗಿದ್ದ ಯೋಗೇಶ್ ಮತ್ತು ಪ್ರತಿಭಾ ಮದುವೆ ನಂತರ ಅಮೆರಿಕಾದಲ್ಲಿ ಮಗುವಿನೊಂದಿಗೆ ವಾಸವಿದ್ದರು. ಮೃತ, ಪತಿ ಪತ್ನಿ ಇಬ್ಬರೂ ವೃತ್ತಿಯಲ್ಲಿ ಇಂಜಿನಿಯರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರ ಸಾವಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.
ಮೂವರ ಸಾವು ಹಲವು ಅನುಮಾನಗಳು ಹುಟ್ಟು ಹಾಕಿದ್ದು, ಸಾವಿನ ನಿಖರ ಕಾರಣ ತಿಳಿಸುವಂತೆ ಹಾಗೂ ಮೃತ ದೇಹಗಳನ್ನು ಸ್ವದೇಶಕ್ಕೆ ತರಿಸಿಕೊಡುವಂತೆ ದಾವಣಗೆರೆಯಲ್ಲಿ ವಾಸವಿರುವ ಯೋಗೇಶ್ ಕುಟುಂಬಸ್ಥರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಮೃತ ಯೋಗೇಶ್ ತಾಯಿ ಶೋಭಾ, ಮಗ ಮತ್ತು ಸೊಸೆ ಸುಖ ಜೀವನವನ್ನೇ ನಡೆಸುತ್ತಿದ್ದರು. ಒಂಭತ್ತು ವರ್ಷದಿಂದ ಅಮೇರಿಕಾದಲ್ಲಿಯೇ ವಾಸವಾಗಿದ್ದರು. ಯಾಕೆ ಈ ರೀತಿ ಸಾವು ಕಂಡರು ಎಂಬುದು ತಿಳಿಯುತ್ತಿಲ್ಲ. ಸರ್ಕಾರ ಕೂಡಲೇ ನೆರವಿಗೆ ಧಾವಿಸಿ ಮೃತ ಪುತ್ರ, ಸೊಸೆ ಮತ್ತು ಮೊಮ್ಮಗನ ಸಾವಿಗೆ ನಿಖರ ಕಾರಣ ತಿಳಿಸಲು ಹಾಗೂ ಮೃತ ದೇಹಗಳನ್ನು ಸ್ವದೇಶಕ್ಕೆ ಮರಳಿಸಲು ಒತ್ತಾಯಿಸಿದರು.