ಜಪಾನ್, ದಕ್ಷಿಣ ಕೊರಿಯಾಗೆ ತೆರಳಿದ ಸಚಿವ ಎಂ.ಬಿ.ಪಾಟೀಲ್ ನೇತೃತ್ವದ ನಿಯೋಗ

Update: 2024-06-22 16:03 GMT

ಬೆಂಗಳೂರು : ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ನೇತೃತ್ವದ ಉನ್ನತ ಮಟ್ಟದ ನಿಯೋಗವು ಜಪಾನ್ ಮತ್ತು ದಕ್ಷಿಣ ಕೊರಿಯಾ ದೇಶಗಳಿಗೆ 10 ದಿನಗಳ ಭೇಟಿ ನೀಡಲು ಶನಿವಾರ ರಾತ್ರಿ ತೆರಳಿತು.

ಈ ಎರಡೂ ದೇಶಗಳಲ್ಲಿನ ಉದ್ಯಮ ದಿಗ್ಗಜರು ಮತ್ತು ಹೂಡಿಕೆದಾರರ ಜೊತೆಗೆ ಸಮಾಲೋಚನೆ ನಡೆಸಿ ಜಾಗತಿಕ ಬಂಡವಾಳ ಹೂಡಿಕೆ ಆಕರ್ಷಿಸುವಲ್ಲಿನ ಕರ್ನಾಟಕದ ಸ್ಥಾನಮಾನವನ್ನು ಇನ್ನಷ್ಟು ಗಟ್ಟಿಗೊಳಿಸುವುದು ಈ ಭೇಟಿಯ ಉದ್ದೇಶವಾಗಿದೆ.

ಈ ಭೇಟಿ ಸಂದರ್ಭದಲ್ಲಿ ನಿಯೋಗವು ರಾಜ್ಯ ಸರಕಾರದ ಉದ್ಯಮ ಸ್ನೇಹಿ ನಿಯಮಗಳು, ವಿದೇಶಿ ಹೂಡಿಕೆದಾರರಿಗೆ ರಾಜ್ಯದಲ್ಲಿನ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದಿರುವ ಪೂರಕ ವಾತಾವರಣ, ಲಭ್ಯ ಇರುವ ಅಪಾರ ಪ್ರಮಾಣದ ಪರಿಣತ ಮಾನವ ಸಂಪನ್ಮೂಲ ಹಾಗೂ ಸುಲಲಿತ ಉದ್ಯಮ ಸ್ಥಾಪನೆಗೆ ನೆರವಾಗಲು ವಿನ್ಯಾಸ ಮಾಡಿರುವ ಏಕಗವಾಕ್ಷಿ ವ್ಯವಸ್ಥೆಯನ್ನು ಮನದಟ್ಟು ಮಾಡಿಕೊಡಲಿದೆ.

ಕರ್ನಾಟಕದ ಕೈಗಾರಿಕಾ ಬೆಳವಣಿಗೆ ಉತ್ತೇಜಿಸುವ ಹಾಗೂ ಆವಿಷ್ಕಾರ ಮುನ್ನಡೆಸಲು ಉದ್ಯಮ ಪ್ರಮುಖ ಜೊತೆಗಿನ ಸಮಾಲೋಚನೆಗಳು ನೆರವಾಗಲಿವೆ. ಮುಂದಿನ ವರ್ಷ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ಯಶಸ್ಸುಗೊಳಿಸಲು ಹೂಡಿಕೆದಾರರನ್ನು ಖುದ್ದಾಗಿ ಆಹ್ವಾನಿಸಲಿದೆ.

ಜೂ.24 ರಿಂದ ಜು.5ರವರೆಗಿನ ಈ 10 ದಿನಗಳ ಈ ಎರಡೂ ದೇಶಗಳ ಭೇಟಿ ಸಂದರ್ಭದಲ್ಲಿ ನಿಯೋಗವು ಟೋಕಿಯೊ, ಒಸಾಕಾ, ಕ್ಯುಟೊ ಹಾಗೂ ಸೋಲ್, ಇಂಚಿಯಾನ್ ಮತ್ತು ಜಿಯೊಂಗಿ ನಗರಗಳಲ್ಲಿ 27ಕ್ಕೂ ಹೆಚ್ಚು ಕಂಪೆನಿಗಳ ಪ್ರಮುಖರ ಜೊತೆ ಸಮಾಲೋಚನೆ ನಡೆಸಲಿದೆ.

ವಾಹನ ಹಾಗೂ ವಾಹನ ಬಿಡಿಭಾಗ ತಯಾರಿಕಾ ಕಂಪೆನಿಗಳು, ಮಷಿನ್‍ಟೂಲ್ಸ್, ಪ್ರಮುಖ ತಯಾರಿಕಾ ವಲಯ, ಎಲೆಕ್ಟ್ರಾನಿಕ್ಸ್ ಸಿಸ್ಟಮ್ಸ್ ಅಂಡ್ ಡಿಸೈನ್ ಹಾಗೂ ತಯಾರಿಕಾ (ಇಎಸ್‍ಡಿಎಂ) ವಲಯಗಳ ಪ್ರಮುಖ ಕಂಪೆನಿಗಳ ಮುಖ್ಯಸ್ಥರ ಜೊತೆ ನಿಯೋಗದ ಸದಸ್ಯರು ಮುಖಾಮುಖಿ ಚರ್ಚೆ ನಡೆಸಲಿದ್ದಾರೆ.

ಟೊಯೊಟಾ, ಯಮಹಾ ಮೋಟರ್, ಹಿಟಾಚಿ, ನಿಡೆಕ್ ಕಾರ್ಪೋರೇಷನ್, ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್, ಹುಂಡೈ ಮೋಟರ್ಸ್, ಎಸ್‍ಕೆ ಹೈನಿಕ್ಸ್, ಹ್ಯೋಸಂಗ್ ಅಡ್ವಾನ್ಸಡ್ ಮಟೇರಿಯಲ್ಸ್ ಹಾಗೂ ಎಲ್‍ಎಕ್ಸ್ ಎಲೆಕ್ಟ್ರಾನಿಕ್ಸ್ ಕಂಪೆನಿಗಳ ಮುಖ್ಯಸ್ಥರನ್ನು ಭೇಟಿಯಾಗಲಿರುವ ನಿಯೋಗವು ಜಾಗತಿಕ ಹೂಡಿಕೆ ಸಮಾವೇಶದಲ್ಲಿ ಭಾಗವಹಿಸಲು ಆಹ್ವಾನ ನೀಡಲಿದೆ.

ಜಾಗತಿಕ ಹೂಡಿಕೆದಾರರಿಗೆ ರಾಜ್ಯದಲ್ಲಿನ ಉದ್ಯಮ ಸ್ನೇಹಿ ಪರಿಸರ ಮನದಟ್ಟು ಮಾಡಿಕೊಡಲು ಉದ್ದೇಶಿಸಿರುವ 4 ರೋಡ್‌ಷೋಗಳ ಪೈಕಿ, ಜಪಾನ್ ಮತ್ತು ದಕ್ಷಿಣ ಕೊರಿಯಾದಲ್ಲಿನ ರೋಡ್‌ಷೋಗಳು ಮೊದಲ ಪ್ರಚಾರ ಅಭಿಯಾನಗಳಾಗಿರಲಿವೆ.

ಮೂರನೆ ಯತ್ನ: ರಾಜ್ಯಕ್ಕೆ ಬಂಡವಾಳ ಹೂಡಿಕೆ ಆಕರ್ಷಿಸಲು ರಾಜ್ಯ ಸರಕಾರವು ನಿರಂತರವಾಗಿ ಪ್ರಯತ್ನಗಳನ್ನು ಮಾಡುತ್ತಿದ್ದು, ಇದಕ್ಕೂ ಮೊದಲು ಕೈಗಾರಿಕಾ ಸಚಿವ ಎಂ. ಬಿ.ಪಾಟೀಲ್ ಅವರು ಉನ್ನತ ಮಟ್ಟದ ನಿಯೋಗಗಳನ್ನು ಅಮೆರಿಕ ಹಾಗೂ ದಾವೋಸ್ ಆರ್ಥಿಕ ಶೃಂಗಸಭೆಗೆ ಕರೆದುಕೊಂಡು ಹೋಗಿದ್ದರು. ಈ ಭೇಟಿಗಳು ರಾಜ್ಯಕ್ಕೆ ಬಂಡವಾಳ ಆಕರ್ಷಿಸುವಲ್ಲಿ ಗಮನಾರ್ಹ ಯಶಸ್ಸು ಕಂಡಿದ್ದವು. ಅದೇ ನಿಟ್ಟಿನಲ್ಲಿನ ಮೂರನೇ ಪ್ರಯತ್ನ ಇದಾಗಿದೆ.

ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ ಸೇರಿದಂತೆ ಇತರ ಉನ್ನತ ಅಧಿಕಾರಿಗಳು ನಿಯೋಗದಲ್ಲಿ ಇದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News