ಮುಂದಿನ ಕಾಲಘಟ್ಟವನ್ನು ಎದುರಿಸಲು ಹೊಸ ರಾಜಕೀಯ ಪ್ರಜ್ಞೆ ಅಗತ್ಯ: ಕೋಟಿಗಾನಹಳ್ಳಿ ರಾಮಯ್ಯ

Update: 2024-08-26 16:46 GMT

ಬೆಂಗಳೂರು: ‘ಕ್ರಾಂತಿಕಾರಿ ಕವಿ, ಗಾಯಕ ಗದ್ದರ್ ಆ ಕಾಲಘಟ್ಟದ ಚಿಂತನೆಯ ಮಿತಿಯನ್ನು ನಾವು ಅರಿತುಕೊಳ್ಳಬೇಕು. ಮುಂಬರಲಿರುವ ಭವಿಷ್ಯದ ಕಾಲಘಟ್ಟವನ್ನು ಎದುರಿಸಲು ಬೇರೊಂದು ರೀತಿಯ ತರಬೇತಿಗೆ ಒಳಗೊಂಡು, ಹೊಸ ರಾಜಕೀಯ ಪ್ರಜ್ಞೆ ರೂಪಿಸಿಕೊಳ್ಳಬೇಕಿದೆ’ ಎಂದು ಹಿರಿಯ ಚಿಂತಕ ಕೋಟಿಗಾನಹಳ್ಳಿ ರಾಮಯ್ಯ ಅಭಿಪ್ರಾಯಪಟ್ಟಿದಾರೆ.

ಸೋಮವಾರ ನಗರದ ಪುರಭವನದಲ್ಲಿ ನಡೆದ ‘ಪ್ರಜಾಕವಿ, ಗಾಯಕ ಗದ್ದರ್ ಅವರ ಪ್ರಥಮ ಪರಿನಿಬ್ಬಾಣ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗದ್ದರ್ ಒಂದು ಪರಂಪರೆ, ಚರಿತ್ರೆ ಇದ್ದಂತೆ. ಹೋರಾಟದ ಸಾಗರಕೆ ಸಾವಿರಾರು ನದಿಗಳು ಎಂದು ಡಾ.ಸಿದ್ದಲಿಂಗಯ್ಯ ಹೇಳಿದ್ದರು. ಆದರೆ ಇಂದು ಹೋರಾಟದ ಸಾಗರಕೆ ಸಾವಿರಾರು ಅಂತರಗಂಗೆಯಂತೆ ನಾವು ಇಲ್ಲಿ ಸೇರಿದ್ದೇವೆ. ಶಿಕ್ಷಣ ಮಾತ್ರ ನಿಮ್ಮ ಬಿಡುಗಡೆಯ ಅಸ್ತ್ರ ಎಂಬ ಡಾ.ಅಂಬೇಡ್ಕರ್ ರ ಮಾತಿನಂತೆ ಗದ್ದರ್ ಅವರಲ್ಲಿ ಪ್ರೇರಣೆ ನೀಡಿದೆ. 80ರ ದಶಕದಲ್ಲಿ ಚಾರಿತ್ರಿಕ ಸ್ಪಷ್ಟತೆ ಇತ್ತು. ಗದ್ದರ್ ಬರೆದಿರುವ ಹಾಡು ಬಿಡುಗಡೆಯ ಹಾದಿಗೆ ಪ್ರಣಾಳಿಕೆ ಇದ್ದಂತೆ ಎಂದು ಅಭಿಪ್ರಾಯಪಟ್ಟರು.

ಗದ್ದರ್ ಅವರ ಹಾಡುಗಳು ಕೆಲವು ಸಂದರ್ಭಗಳಲ್ಲಿ ಬದಲಾಗಿದ್ದವು. ಶ್ರಮಜೀವಿಗಳನ್ನು ಕಣ್ಣಲ್ಲಿಟ್ಟುಕೊಂಡು ಬರೆದಿರುವ ಹಾಡುಗಳಿವೆ. ಬೆವರಿನ ಲೋಕವನ್ನು ಹಾಡುಗಳ ಮೂಲಕ ಕಟ್ಟಿದವರು ಗದ್ದರ್. 70ರ ದಶಕದಲ್ಲಿ ಸಂಗಮಗೊಂಡ ದಮನಿತರ ಶಕ್ತಿ ಇಂದು ವಿವಿಧ ಪಕ್ಷ, ಬಣಗಳಾಗಿ ಬೇರ್ಪಟ್ಟಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮ ಮತ್ತೆ ಎಲ್ಲರೂ ಒಂದಾಗುವ ಸಣ್ಣದೊಂದು ಆಶಯವನ್ನು ಹುಟ್ಟಿಸಿದೆ. ಹಿಂದೆ ಮಾಡಿದ ಗ್ರಾಮೀಣ ಭಾಗದ ಭೂಮಿ ಸಮಸ್ಯೆಯ ಹೋರಾಟ ಬೇರೆ ಇತ್ತು. ಇಂದು ನಾವು ಅರ್ಥ ಮಾಡಿಕೊಳ್ಳಬೇಕಾದ ರೀತಿ ಬೇರೆ ಇದೆ. ಮುಂದಿನ ಕಾಲಘಟ್ಟವನ್ನು ಎದುರಿಸಲು ರಾಜಕಿಯ ಹೊಸ ರಾಜಕೀಯ ಪ್ರಜ್ಞೆ ರೂಪಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.

ಗದ್ದರ್ ಕೇವಲ ಹಾಡು ಹಾಡಲು ಮಾತ್ರ ಇರಲಿಲ್ಲ. ಅವರು ಹೋರಾಟ ಮತ್ತು ವೈಚಾರಿಕ ಹಾದಿಯಲ್ಲಿ ನಡೆದವರು. ಅವರ ಅನುಭವಗಳು ನಮಗೆ ದಾರಿ ದೀಪವಾಗಬೇಕು. ಗದ್ದರ್ ವಾಸ್ತವದಲ್ಲಿ ಇದ್ದಿದ್ದರೆ ಅವರು ಮಾಡುತ್ತಿರುವ ಕೆಲಸಗಳೇ ಬೇರೆ, ಬೇರೊಂದು ರಾಜಕಾರಣವನ್ನು ಮುಂದಿಡುತ್ತಿದ್ದರು ಎಂದು ಹೇಳಿದರು. ಇದೇ ವೇಳೆ ರಾಜ್ಯದ ವಿವಿಧ ಗಾಯಕರು ಹೋರಾಟದ ಗೀತೆಗಳನ್ನು ಹಾಡಿದರು.

ಕಾರ್ಯಕ್ರಮದಲ್ಲಿ ಗದ್ದರ್ ಫೌಂಡೇಶನ್ ಸಂಸ್ಥಾಪಕ ಗುಮ್ಮಡಿ ವಿಠಲ್ ಸೂರ್ಯಕಿರಣ್, ಜಾನಪದ ಅಕಾಡಮಿಯ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ಹೋರಾಟಗಾರರಾದ ಮಾವಳ್ಳಿ ಶಂಕರ್, ಎನ್. ವೆಂಕಟೇಶ್, ಸಿ.ದಾನಪ್ಪ ನಿಲೋಗಲ್, ಅಂಬಣ್ಣ ಅರೋಲಿಕರ್, ಮಹಾಬೋಧಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆ ಡಾ.ಜಿ.ವಿ.ವೆನ್ನಲ, ಜನವಾದಿ ಮಹಿಳಾ ಸಂಘಟನೆಯ ಸಂಚಾಲಕಿ ವಿ.ಗೀತಾ ಮತ್ತಿತರರು ಉಪಸ್ಥಿತರಿದ್ದರು.

‘ಇವತ್ತು ಗದ್ದರ್ ಅವರು ಬದುಕಿದ್ದರೆ ಒಂದೂ ರಾಜಕೀಯ ಪಕ್ಷವನ್ನು ಕಟ್ಟುತ್ತಿದ್ದರು. ನಾವು ತೀವ್ರ ಅವಮಾನದಲ್ಲಿ ಇದ್ದೇವೆ. ದಲಿತರಿಗೆ ಸಮಪಾಲು ಸಿಗುತ್ತಿಲ್ಲ. ಆಕಾಶದ ಸಂಪತ್ತಿನಲ್ಲಿ, ತರಂಗದಲ್ಲಿ ನಾವು ಪಾಲು ಕೇಳಬೇಕಾಗಿದೆ. ನಮಗಾಗಿ ಮೀಸಲಿಟ್ಟಿರುವ ಬಜೆಟ್‍ನ್ನು ಬೇರೆ ಇನ್ಯಾವುದಕ್ಕೋ ಬಳಸಲಾಗುತ್ತಿದೆ. ನಮ್ಮ ಘನತೆ ಮತ್ತು ಸ್ವಾಭಿಮಾನವನ್ನು ನಾವೇ ಕಂಡುಕೊಳ್ಳಬೇಕು’

-ಕೋಟಿಗಾನಹಳ್ಳಿ ರಾಮಯ್ಯ, ಹಿರಿಯ ಹೋರಾಟಗಾರ

ಗದ್ದರ್ ಹೋರಾಡುವ ಧೈರ್ಯ ಕೊಟ್ಟವರು: ಡಾ.ಎಲ್.ಹನುಮಂತಯ್ಯ

ಕ್ರಾಂತಿಕಾರಿ ಗಾಯಕ ಗದ್ದರ್ ಅನೇಕ ರೂಪಾಂತರ ಪಡೆದವರು. ಶಕ್ತಿ ಇಲ್ಲದವರಿಗೆ ಶಕ್ತಿ ತಂದುಕೊಟ್ಟರೂ. ಅಕ್ಷರ ಗೊತ್ತಿಲ್ಲದ ಅನೇಕ ದಮನಿತರಿಗೆ ಭೂಮಾಲಿಕರ ವಿರುದ್ಧ ಹೋರಾಡುವ ಧೈರ್ಯ ಕೊಟ್ಟವರು ಎಂದು ರಾಜ್ಯಸಭೆಯ ಮಾಜಿ ಸದಸ್ಯ ಡಾ.ಎಲ್.ಹನುಮಂತಯ್ಯ ತಿಳಿಸಿದ್ದಾರೆ.

ಸೋಮವಾರ ಇಲ್ಲಿನ ಪುರಭವನದಲ್ಲಿನ ನಡೆದ ಗದ್ದರ್ ಪ್ರಥಮ ಪರಿನಿಬ್ಬಾಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಟುಂಬದ ಮಹಿಳೆಗೆ ಅತ್ಯಾಚಾರವಾದಾಗ ಬಂದೂಕು ಹಿಡಿಯುವ ಯೋಚನೆ ಮಾಡಿದರೆ ಜೈಲು ಪಾಲಾಗಬೇಕಾಗುತ್ತದೆ. ಜನಪರ ಹೋರಾಟ ಮಾಡುವವರನ್ನು ದೇಶದ್ರೋಹಿ ಪಟ್ಪ ಕಟ್ಟುವ ಕಾಲ ಇದಾಗಿದೆ. ದೌರ್ಜನ್ಯದ ವಿರುದ್ಧ ಹೋರಾಡಿದ ಗದ್ದರ್ ಅವರಿಗೆ ಗುಂಡೇಟು ಬಿದ್ದರೂ ಕೂಡ ಆ ಗುಂಡನ್ನು ಸಾಯುವ ವರೆಗೂ ತನ್ನೊಳಗೇ ಇಟ್ಟುಕೊಂಡಿದ್ದರು ಎಂದು ಹೇಳಿದರು.

ಹಾಡುಗಳ ಮೂಲಕ ಗದ್ದರ್ ವ್ಯಕ್ತಿತ್ವವನ್ನು ತಿಳಿದುಕೊಳ್ಳಬಹುದು. 70ರ ದಶಕ ಕರ್ನಾಟಕದ ಮಟ್ಟಿಗೆ ಒಂದು ಅಗ್ನಿ ಕುಂಡ. ಕರ್ನಾಟಕದಲ್ಲಿ ಮೊದಲ ಬಾರಿಗೆ ದಲಿತರ ಮೇಲಿನ ದೌರ್ಜನ್ಯವನ್ನು ವಿರೋಧಿಸಿ ದಮನಿತ ಸಮುದಾಯಗಳು ಧ್ವನಿ ಎತ್ತಿದ ಕಾಲ ಅದು. ಆವಾಗ ಗದ್ದರ್ ಅವರ ಹೋರಾಟದ ಹಾಡು ಹಾಡುವಾಗ ರೋಮಾಂಚನವಾಗುತ್ತಿತ್ತು. ಭಾರತದಲ್ಲಿ ಮಾತ್ರವಲ್ಲ ಇಡೀ ಪ್ರಪಂಚದಲ್ಲಿ ಹಾಡುಗಳ ಮೂಲಕ ಜನರನ್ನು ಸೇರಿಸುತ್ತಿದ್ದವರು ಗದ್ದರ್ ಮಾತ್ರ ಎಂದು ಅಭಿಪ್ರಾಯಪಟ್ಟರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News