ಕೇರಳದ ನೋರ್ಕಾ-ರೂಟ್ಸ್ ಪ್ರಾದೇಶಿಕ ಕಚೇರಿಗೆ ಡಾ. ಆರತಿ ಕೃಷ್ಣ ಭೇಟಿ

Update: 2024-07-08 18:16 GMT

ಬೆಂಗಳೂರು: ಎನ್‍ಆರ್‍ಐ ಫೋರಂ-ಕರ್ನಾಟಕದ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಕೇರಳದ ಕೊಚ್ಚಿನ್(ಎರ್ನಾಕುಲಂ)ನಲ್ಲಿರುವ ನೋರ್ಕಾ-ರೂಟ್ಸ್ ಪ್ರಾದೇಶಿಕ ಕಚೇರಿಗೆ ಇತ್ತೀಚೆಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ವಿದೇಶದಲ್ಲಿ ಕೆಲಸ ಮಾಡುವ ಹಾಗೂ ಹಿಂದಿರುಗುವ ಅನಿವಾಸಿ ಭಾರತೀಯರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೇರಳ ಸರಕಾರ ಅಳವಡಿಸಿಕೊಂಡಿರುವ ವಿಧಾನಗಳ ಬಗ್ಗೆ ಅವರು ನೋರ್ಕಾ-ರೂಟ್ಸ್ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು.

ಕೇರಳ ಸರಕಾರವು ನೋರ್ಕಾ-ರೂಟ್ಸ್ ಎಂಬ ಸ್ವತಂತ್ರ ಕಚೇರಿಯನ್ನು ಸ್ಥಾಪಿಸುವ ಮೂಲಕ ಕೇರಳದಿಂದ ವಿದೇಶಕ್ಕೆ ಉದ್ಯೋಗ, ಶಿಕ್ಷಣಕ್ಕಾಗಿ ತೆರಳಿಸುವವರಿಗೆ ಅಗತ್ಯ ಸೇವೆ, ಮಾರ್ಗದರ್ಶನ ನೀಡುವ ಕೆಲಸ ಮಾಡುತ್ತಿದೆ. ನೋರ್ಕಾ-ರೂಟ್ಸ್ ಮುಖ್ಯ ಕಚೇರಿ, ರಾಜ್ಯದ ವಿವಿದೆಡೆ ಪ್ರಾದೇಶಿಕ ಕಚೇರಿಗಳನ್ನು ಆರಂಭಿಸಲಾಗಿದೆ.

ಕೇರಳ ಸರಕಾರವು ಅನಿವಾಸಿ ಕೇರಳಿಯರಿಗೆ, ವಿಶೇಷವಾಗಿ ವಿದೇಶದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿಗಳನ್ನು ಒದಗಿಸುವುದು ಸೇರಿದಂತೆ ವಿವಿಧ ಸೇವೆಗಳನ್ನು ಪ್ರಾರಂಭಿಸಿದೆ. ಪ್ರವಾಸಿ ರಕ್ಷಾ ವಿಮಾ ಯೋಜನೆಗಳು, ಪ್ರವಾಸಿ ಕಾನೂನು ಸಹಾಯ ಕೋಶ, ನೋರ್ಕಾ ಇನ್‍ಸ್ಟಿಟ್ಯೂಟ್ ಆಫ್ ಫಾರಿನ್ ಲ್ಯಾಂಗ್ವೇಜಸ್, ಉದ್ಯೋಗದ ಸಹಾಯದೊಂದಿಗೆ ವಿದೇಶಿ ಭಾಷೆ ಕಲಿಕೆಯಲ್ಲಿ ಸಮಗ್ರ ಬೆಂಬಲವನ್ನು ನೀಡುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜೀವನೋಪಾಯ ಮತ್ತು ಉತ್ತಮ ಜೀವನ ಸ್ಥಿತಿಯನ್ನು ಹುಡುಕಿಕೊಂಡು ವಿವಿಧ ದೇಶಗಳಿಗೆ ವಲಸೆ ಹೋಗುವ ಕನ್ನಡಿಗ ಕಾರ್ಮಿಕರಿಗಾಗಿ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲು ಕರ್ನಾಟಕ ಸರಕಾರವು ಈ ರೀತಿ ರಚನಾತ್ಮಕವಾಗಿ ತೊಡಗಿಸಿಕೊಳ್ಳುವುದು ಬಹಳ ಮುಖ್ಯ ಎಂದು ಆರತಿ ಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ ವಿದೇಶದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕೇರಳ ಸರಕಾರ ಅಳವಡಿಸಿಕೊಂಡಿರುವ ವಿಧಾನಗಳ ಬಗ್ಗೆ ಮನದಟ್ಟು ಮಾಡಿಕೊಡಲಾಗುವುದು ಎಂದು ಆರತಿ ಕೃಷ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News