ಗುತ್ತಿಗೆದಾರನ ಅಪಹರಿಸಿ ಹಣಕ್ಕೆ ಬೇಡಿಕೆಯಿಟ್ಟ ಆರೋಪ; ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಸಿಸಿಬಿ ವಶಕ್ಕೆ
ಬೆಂಗಳೂರು, ಅ.21: ಗುತ್ತಿಗೆದಾರನನ್ನು ಅಪಹರಿಸಿ 3 ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದ ಆರೋಪದಡಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಮಾಜಿ ಕಾರ್ಪೊರೇಟರ್ ಜಿ.ಕೆ. ವೆಂಕಟೇಶ್ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ.
ಯಶವಂತಪುರ ವಾರ್ಡ್‍ಗೆ ಸಂಬಂಧಿಸಿದ ಕಾಮಗಾರಿಯನ್ನು ಗುತ್ತಿಗೆದಾರ ಚಂದ್ರು ಎಂಬುವರು ಪಡೆದಿದ್ದರು. ಚಂದ್ರುಗೆ ಗುತ್ತಿಗೆ ಸಿಕ್ಕ ಹಿನ್ನೆಲೆ ಅಸಮಾಧಾನಗೊಂಡಿದ್ದ ಜಿ.ಕೆ.ವೆಂಕಟೇಶ್, ಕೈ ತಪ್ಪಿದ ಗುತ್ತಿಗೆ ಹಣವನ್ನು ಭರಿಸುವಂತೆ ಬೆದರಿಕೆ ಒಡ್ಡಿದ್ದಾರೆ. ಇದಕ್ಕೆ ಚಂದ್ರು ಕಿವಿಗೊಡದಿದ್ದಾಗ ಅ.18ರಂದು ಸಹಚರರ ಜೊತೆ ಸೇರಿಕೊಂಡು ಚಂದ್ರುನನ್ನು ಅಪಹರಿಸಿ 3 ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದರು. ಬಳಿಕ, 3 ಕೋಟಿ ರೂ. ಚೆಕ್ ಪಡೆದು ಹಲ್ಲೆ ಮಾಡಿ, ಚಂದ್ರನನ್ನು ಬಿಡುಗಡೆ ಮಾಡಿದ್ದರು ಎಂದು ತಿಳಿದುಬಂದಿದೆ.
ಈ ಕುರಿತು ಯಶವಂತಪುರ ಪೊಲೀಸ್ ಠಾಣೆಯಲ್ಲಿ ಗುತ್ತಿಗೆದಾರ ಚಂದ್ರು ದೂರು ನೀಡಿದ್ದರು. ಆ ಬಳಿಕ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿತ್ತು. ಸದ್ಯ ಜಿ.ಕೆ.ವೆಂಕಟೇಶ್ ಅವರನ್ನು ವಶಕ್ಕೆ ಪಡೆದಿರುವ ಸಿಸಿಬಿ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ ಎಂದು ಗೊತ್ತಾಗಿದೆ.