ಸೆ.17ರವರೆಗೆ ನಟ ದರ್ಶನ್ ನ್ಯಾಯಾಂಗ ಬಂಧನ ವಿಸ್ತರಣೆ

Update: 2024-09-13 13:46 GMT

ದರ್ಶನ್‌

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ 17 ಮಂದಿ ಆರೋಪಿಗಳಿಗೆ ಸೆಪ್ಟೆಂಬರ್ 17ರವರೆಗೆ ನ್ಯಾಯಾಂಗ ಬಂಧನ ಅವಧಿಯನ್ನು ವಿಸ್ತರಿಸಿ ನಗರದ 24ನೆ ಎಸಿಎಂಎಂ ನ್ಯಾಯಾಲಯ ಶುಕ್ರವಾರ ಆದೇಶ ಹೊರಡಿಸಿದೆ.

ಬಳ್ಳಾರಿ ಜೈಲಿನಿಂದ ದರ್ಶನ್, ಪರಪ್ಪನ ಅಗ್ರಹಾರ ಜೈಲಿನಿಂದ ಪವಿತ್ರಾಗೌಡ, ದೀಪಕ್, ತುಮಕೂರು ಜೈಲಿನಿಂದ ಅನುಕುಮಾರ್, ಜಗದೀಶ್ ಹಾಗೂ ರವಿ ಸೇರಿದಂತೆ ರಾಜ್ಯದ ವಿವಿಧ ಕಾರಾಗೃಹದಲ್ಲಿರುವ 17 ಮಂದಿ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ಮುಂದೆ ಹಾಜರಾದರು.

ಆರೋಪಿಗಳು ಹಾಜರಾಗುತ್ತಿದ್ದಂತೆ ವಿಚಾರಣೆ ನಡೆಸಿದ ನ್ಯಾಯಾಧೀಶರು, ಸರತಿಯಂತೆ ಎಲ್ಲ ಆರೋಪಿಗಳ ಹೆಸರು ಕೂಗಿ ಇರುವಿಕೆ ಬಗ್ಗೆ ಖಚಿತಪಡಿಸಿಕೊಂಡರು.

ಆರೋಪಿಗಳ ಪರ ವಕೀಲರು ವಾದ ಮಂಡಿಸಿ, ಪ್ರಕರಣದ ಸಂಪೂರ್ಣ ಚಾರ್ಜ್‍ಶೀಟ್ ಅನ್ನು ನಮಗೆ ಒದಗಿಸಿಲ್ಲ. ಡಿಜಿಟಲ್ ಎವಿಡೆನ್ಸ್ ಸಹ ಪೊಲೀಸರು ನೀಡಿಲ್ಲ. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿಂತೆ ಸಿಆರ್‍ಪಿಸಿ 164 ಅಡಿ ಹೇಳಿಕೆ ನೀಡಿದ ಪ್ರಮಾಣೀಕೃತ ದಾಖಲಾತಿ ನೀಡಿಲ್ಲ ಎಂದು ಕೋರ್ಟ್ ಗಮನಕ್ಕೆ ತಂದರು.

ಇದಕ್ಕೆ ಎಸ್‍ಪಿಪಿ ಪರ ವಕೀಲ ಪ್ರಸನ್ನ ಕುಮಾರ್, ಮುಂದಿನ ವಾರ ಡಿಜಿಟಲ್ ಎವಿಡೆನ್ಸ್‌ ಗಳನ್ನು ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು. ಇದೇ ವೇಳೆ, ಟೆಕಿಕ್ನಲ್ ಎವಿಡೆನ್ಸ್ ನೀಡಿದ ಬಳಿಕ ಸೆಷನ್ಸ್ ಕೋರ್ಟ್‍ಗೆ ವರ್ಗಾಯಿಸುವಂತೆ ಆರೋಪಿಗಳ ಪರ ವಕೀಲರು ಮನವಿ ಮಾಡಿದರು. ಆಗ, ಸಾಕ್ಷ್ಯ ಸಲ್ಲಿಸಿದ ಬಳಿಕವೇ ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾಯಿಸಲಾಗುವುದು ಎಂದು ಹೇಳಿದ ನ್ಯಾಯಾಧೀಶರು, ಸೆಪ್ಟೆಂಬರ್ 17ರವರೆಗೆ ನ್ಯಾಯಾಂಗ ಬಂಧನ ಅವಧಿಯನ್ನು ವಿಸ್ತರಿಸಿ ಆದೇಶಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News